ನವದೆಹಲಿ: ಇಲ್ಲಿನ ರಾಮ್ ಲೀಲಾ ಮೈದಾನದಲ್ಲಿ ಇದೀಗ ನಡೆಯುತ್ತಿರುವ ‘ಧನ್ಯವಾದ ಸಮಾವೇಶ’ದಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಭಾಷಣ ಮಾಡುತ್ತಿದ್ದಾರೆ.
ಪೌರತ್ವ ಮಸೂದೆ ತಿದ್ದುಪಡಿ ಕಾಯ್ದೆಯನ್ನು ವಿರೋಧಿಸಿ ದೇಶಾದ್ಯಂತ ಪ್ರತಿಭಟನೆಗಳು ನಡೆಯುತ್ತಿರುವ ಹಿನ್ನಲೆಯಲ್ಲಿ ಪ್ರಧಾನಿ ಮೋದಿ ಅವರು ಪ್ರತಿಪಕ್ಷಗಳ ಮೇಲೆ ಅದರಲ್ಲೂ ಕಾಂಗ್ರೆಸ್ ಮೇಲೆ ಹರಿಹಾಯ್ದಿದ್ದಾರೆ.
ವಿಶ್ವದ ಮುಸ್ಲಿಂ ರಾಷ್ಟ್ರಗಳು ಭಾರತವನ್ನು ನೋಡುವ ದೃಷ್ಟಿಕೋನ ಬದಲಾಗಿದೆ. ಆ ದೇಶಗಳೊಂದಿಗೆ ಭಾರತದ ಸಂಬಂಧ ಗಟ್ಟಿಗೊಳ್ಳುತ್ತಿದೆ. ಅಲ್ಲಿನ ಮುಸ್ಲಿಂ ಜನತೆ ಭಾರತವನ್ನು ಮತ್ತು ನನ್ನನ್ನು ಪ್ರೀತಿಸುತ್ತಾರೆ. ಇದು ಇಲ್ಲಿನ ದೇಶವಿರೋಧಿ ಶಕ್ತಿಗಳ ಕಣ್ಣು ಕೆಂಪಾಗಿಸಿವೆ ಎಂದು ಅವರು ತಮ್ಮ ಭಾಷಣದಲ್ಲಿ ಆರೋಪಿಸಿದರು.
ಸಿಎಎ ಪ್ರತಿಭಟನೆಯ ವೇಳೆ ಹಿಂಸಾಚಾರವನ್ನು ಹತ್ತಿಕ್ಕಲು ಪ್ರತಿಭಟನಕಾರರ ಮೇಲೆ ಪೊಲೀಸರು ಲಾಠೀ ಚಾರ್ಜ್ ಹಾಗೂ ಬಲಪ್ರಯೋಗ ನಡೆಸಿದ್ದನ್ನು ಪ್ರಧಾನಿಯವರು ಇದೇ ಸಂದರ್ಭದಲ್ಲಿ ಸಮರ್ಥಿಸಿಕೊಂಡಿದ್ದಾರೆ.
ಪ್ರತಿಪಕ್ಷಗಳು ಕಳೆದ ಇಪ್ಪತ್ತು ವರ್ಷಗಳಿಂದ ನನ್ನನ್ನು ಜನವಿರೋಧಿ, ಮುಸ್ಲಿಂ ವಿರೋಧಿ ಎಂದೇ ಬಿಂಬಿಸುತ್ತಾ ಬಂದಿದ್ದಾರೆ. ‘ಮೌತ್ ಕಾ ಸೌದಾಗರ್’ ಎಂದು ಕರೆದರು ಇದೀಗ ಪೌರತ್ವ ಕಾಯ್ದೆ ಮತ್ತು ಎನ್.ಆರ್.ಸಿ. ವಿಚಾರಗಳನ್ನು ಹಿಡಿದುಕೊಂಡು ಡಿಟೆನ್ಷನ್ ಕ್ಯಾಂಪ್ ಗಳ ಕುರಿತಾಗಿ ಸುಳ್ಳುಸುದ್ದಿಗಳನ್ನು ಹರಡುತ್ತಿದ್ದಾರೆ ಮತ್ತು ಈ ಮೂಲಕ ದೇಶದ ಜನಸಾಮಾನ್ಯರಲ್ಲಿ ಭಯದ ವಾತಾವರಣವನ್ನು ನಿರ್ಮಿಸುತ್ತಿದ್ದಾರೆ ಎಂದು ಪ್ರತಿಪಕ್ಷಗಳ ಪೌರತ್ವ ಕಾಯ್ದೆ ವಿರೋಧಿ ಪ್ರತಿಭಟನಾಕಾರರ ಕುರಿತಾಗಿ ಮೋದಿ ಹೇಳಿದರು.
ತಮ್ಮ ಭಾಷಣದ ಪ್ರಾರಂಭದಲ್ಲಿ ಪ್ರಧಾನಿ ಮೋದಿ ಅವರು ‘ವಿವಿಧತೆಯಲ್ಲಿ ಏಕತೆ’ ಎಂದು ಹೇಳಿದರು ಮತ್ತು ಸಭಿಕರು ‘ಭಾರತದ ವಿಶೇಷತೆ’ ಎಂದು ಕೂಗುವಂತೆ ಕೇಳಿಕೊಂಡರು.