Advertisement

ಮಿನಿ ಸಮರದಲ್ಲೂ ಮೈತ್ರಿ ಮುಂದುವರಿಯುತ್ತಾ?

06:45 AM Aug 03, 2018 | Team Udayavani |

ಬೆಂಗಳೂರು:”ಮಿನಿ ಸಮರ’ ಎಂದೇ ಬಿಂಬಿತವಾಗಿರುವ ರಾಜ್ಯದ 105 ನಗರ ಸ್ಥಳೀಯ ಸಂಸ್ಥೆಗಳ ಚುನಾವಣೆ ವೇಳಾಪಟ್ಟಿ ಹೊರ ಬೀಳುತ್ತಿದ್ದಂತೆಯೇ ಕಾಂಗ್ರೆಸ್‌, ಬಿಜೆಪಿ, ಜೆಡಿಎಸ್‌ ಸೇರಿದಂತೆ ರಾಜಕೀಯ ಪಕ್ಷಗಳಲ್ಲಿ ಚಟುವಟಿಕೆಗಳು ಬಿರುಸುಗೊಂಡಿವೆ.

Advertisement

ಲೋಕಸಭೆ ಚುನಾವಣೆಗೆ ತಳಮಟ್ಟದಲ್ಲಿ ಶಕ್ತಿ ತುಂಬುವ ಈ ಚುನಾವಣೆ ಬಗ್ಗೆ ಪ್ರಮುಖವಾಗಿ ಕಾಂಗ್ರೆಸ್‌, ಬಿಜೆಪಿ ಹಾಗೂ ಜೆಡಿಎಸ್‌ ಪಕ್ಷಗಳು ಗಂಭೀರವಾಗಿ ಪರಿಗಣಿಸಿವೆ.ಜತೆಗೆ, ರಾಜ್ಯದಲ್ಲಿ ಸಮ್ಮಿಶ್ರ ಸರ್ಕಾರ ಇರುವುದರಿಂದ ಕಾಂಗ್ರೆಸ್‌-ಜೆಡಿಎಸ್‌ ಈ ಚುನಾವಣೆಯಲ್ಲಿ ಮೈತ್ರಿ ಮಾಡಿಕೊಂಡು ಚುನಾವಣಾ ಕಣಕ್ಕೆ ಇಳಿಯುವ ಬಗ್ಗೆ ಪ್ರಾಥಮಿಕ ಹಂತದ ಚರ್ಚೆಗಳು ಪ್ರಾರಂಭಗೊಂಡಿವೆ.

ಆದರೆ, ಎರಡೂ ಪಕ್ಷಗಳ ಸ್ಥಳೀಯ ನಾಯಕರು ಮೈತ್ರಿಗೆ ವಿರೋಧವಿದ್ದು “ಫ್ರೆಂಡ್ಲಿ’ ಫೈಟ್‌ ಸೂಕ್ತ ಎಂಬ ಅಭಿಪ್ರಾಯ ಹೊಂದಿದ್ದಾರೆ  ಎನ್ನಲಾಗಿದೆ.

ಚುನಾವಣೆ ವೇಳಾಪಟ್ಟಿ ಬಿಡುಗಡೆಯಾಗುತ್ತಲೇ ಕೆಲವು ಜಿಲ್ಲಾ ಕಾಂಗ್ರೆಸ್‌ ನಾಯಕರು ಕೆಪಿಸಿಸಿ ಅಧ್ಯಕ್ಷ ದಿನೇಶ್‌ಗುಂಡೂರಾವ್‌ ಹಾಗೂ ಸಮನ್ವಯ ಸಮಿತಿ ಅಧ್ಯಕ್ಷ ಸಿದ್ದರಾಮಯ್ಯ ಅವರ ಜತೆ ದೂರವಾಣಿಯಲ್ಲಿ ಚರ್ಚಿಸಿದ್ದು, ಮೈತ್ರಿ ಬೇಡ ಎಂದು ಪ್ರತಿಪಾದಿಸಿದ್ದಾರೆ ಎನ್ನಲಾಗಿದೆ.

ಆದರೆ, ಲೋಕಸಭೆ ಚುನಾವಣೆಯಲ್ಲಿ ಮೈತ್ರಿ ತೀರ್ಮಾನ ಆಗಿರುವುದರಿಂದ ಸಮ್ಮಿಶ್ರ ಸರ್ಕಾರ ಇರುವುದರಿಂದ ಮೈತ್ರಿ ಬೇಡ ಎಂದರೆ ಕಷ್ಟವಾಗಬಹುದು. ಆದರೂ ಹೈಕಮಾಂಡ್‌ ಬಳಿ ಚರ್ಚಿಸಲಾಗುವುದು ಎಂದು ಇಬ್ಬರೂ ನಾಯಕರು ಭರವಸೆ ನೀಡಿದ್ದಾರೆ ಎಂದು ಹೇಳಲಾಗಿದೆ.

Advertisement

ಶುಕ್ರವಾರದಿಂದ ಕಾಂಗ್ರೆಸ್‌ ಪಕ್ಷವು ಲೋಕಸಭೆ ಕ್ಷೇತ್ರಾವಾರು ಚುನಾವಣಾ ಸಿದ್ಧತೆ ಪೂರ್ವಭಾವಿ ಸಭೆ ನಿಗದಿಯಾಗಿದ್ದು ಅಲ್ಲಿ ಸ್ಥಳೀಯ ಸಂಸ್ಥೆಗಳ ಚುನಾವನಾ ತಯಾರಿ ಬಗ್ಗೆಯೂ ಚರ್ಚೆ ನಡೆಯಲಿದೆ.

ಸಂಸತ್‌ ಅಧಿವೇಶನ ಹಿನ್ನೆಲೆಯಲ್ಲಿ ದೆಹಲಿಯಲ್ಲಿರುವ ಮಾಜಿ ಪ್ರಧಾನಿ ಎಚ್‌.ಡಿ.ದೇವೇಗೌಡರು ಶನಿವಾರ ನಗರಕ್ಕೆ ಆಗಮಿಸಲಿದ್ದು ,  ನಂತರ ಜಿಲ್ಲಾವಾರು ಸಭೆ ನಡೆಸಲು ತೀರ್ಮಾನಿಸಿದ್ದಾರೆ. ಕಾಂಗ್ರೆಸ್‌-ಜೆಡಿಎಸ್‌ ಜತೆ ಮೈತ್ರಿಯಾಗದಿದ್ದರೂ ಜೆಡಿಎಸ್‌- ಬಿಎಸ್‌ಪಿ ಮೈತ್ರಿಯಾಗಲಿದೆ ಎಂದು ಹೇಳಲಾಗಿದೆ.

ಇನ್ನು ಪ್ರತಿಪಕ್ಷ ಬಿಜೆಪಿ ಸಹ ಕಾಂಗ್ರೆಸ್‌-ಜೆಡಿಎಸ್‌ ಮೈತ್ರಿ ಬಗ್ಗೆ ತಲೆಕಡಿಸಿಕೊಳ್ಳದೆ ವಿಧಾನಸಭೆ ಕ್ಷೇತ್ರಾವಾರು ಸಭೆ ನಡೆಸಿ ತತಕ್ಷಣದಿಂದ ಸಿದ್ಧತೆ ಆರಂಭಿಸಲು ನಿರ್ಧರಿಸಿದೆ. ಆಗಸ್ಟ್‌ 9 ರಿಂದ ಮೂರು ತಂಡಗಳಲ್ಲಿ ಬಿಜೆಪಿ ರಾಜ್ಯ ಪ್ರವಾಸಕ್ಕೆ ತೀರ್ಮಾನಿಸಲಾಗಿದ್ದು ಅದು  ಸ್ಥಳೀಯ ಸಂಸ್ಥೆಗಳ ಪ್ರಚಾರ ಸಭೆಗಳಾಗುವ ಸಾಧ್ಯತೆಯಿದೆ.

ಈ ಮಧ್ಯೆ, ಸುದ್ದಿಗಾರರ ಜತೆ ಮಾತನಾಡಿದ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್‌.ಯಡಿಯೂರಪ್ಪ ಅವರು, ನಗರ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಬಿಜೆಪಿ ತನ್ನ ಶಕ್ತಿ ಪ್ರದರ್ಶನ ಮಾಡಲಿದೆ.  ಈಗಿನಿಂದಲೇ ಚುನಾವಣೆ ತಯಾರಿ ಆರಂಭಿಸಲಿದ್ದೇವೆ ಎಂದು ಹೇಳಿದರು.

ನಗರ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಕಾಂಗ್ರೆಸ್‌-ಜೆಡಿಎಸ್‌ ಮೈತ್ರಿ ಬಗ್ಗೆ ನಾನು ತಲೆಕಡಿಸಿಕೊಳ್ಳುವುದಿಲ್ಲ. ಅದರ ಬಗ್ಗೆ ನಮಗೆ ಆಸಕ್ತಿಯೂ ಇಲ್ಲ. ನಮ್ಮ ಹೋರಾಟ ನಮ್ಮದು ಎಂದುತಿಳಿಸಿದರು.

ಎಫೆಕ್ಟ್ ಕೊಡುತ್ತಾ?
ಉತ್ತರ ಕರ್ನಾಟಕ ಕುರಿತ ಹೇಳಿಕೆ ವಿವಾದ ನಗರ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಎಫೆಕ್ಟ್ ನೀಡಲಿದೆಯಾ? ಎಂಬ ಬಗ್ಗೆಯೂ ಕಾಂಗ್ರೆಸ್‌ ಹಾಗೂ ಜೆಡಿಎಸ್‌ಗೆ ಆತಂಕವಿದೆ.ಆದರೆ, ಕುಮಾರಸ್ವಾಮಿಯವರು ಹೋರಾಟಗಾರರ ಜತೆ ಸಭೆ ನಡೆಸಿ ಬೆಳಗಾವಿ ಎರಡನೇ ರಾಜಧಾನಿ ಮಾಡುವುದು, ಸುವರ್ಣಸೌಧಕ್ಕೆ ಕೆಲವು ಇಲಾಖೆಗಳ ಸ್ಥಳಾಂತರ ಸೇರಿದಂತೆ ಭರವಸೆ ನೀಡಿರುವುದು. ಬಂದ್‌ ಕರೆ ವಿಫ‌ಲವಾಗಿರುವುದರಿಂದ ಅಂತಹ ಸಮಸ್ಯೆಯಾಗದು ಎಂಬುದು ಎರಡೂ ಪಕ್ಷಗಳ ನಾಯಕರು ಹೇಳುತ್ತಾರೆ.

ಸಂಪುಟ ವಿಸ್ತರಣೆ ಮುಂದಕ್ಕೆ ?
ನಗರ ಸ್ಥಳೀಯ ಸಂಸ್ಥೆಗಳ ಚುನಾವಣೆ ಹಿನ್ನೆಲೆಯಲ್ಲಿ ಆಷಾಢ ಮಾಸದ ನಂತರ ನಿಗದಿಯಾಗಿದ್ದ ಸಂಪುಟ ವಿಸ್ತರಣೆ ಹಾಗೂ ನಿಗಮ-ಮಂಡಳಿ ನೇಮಕ ಬಹುತೇಕ ಮುಂದಕ್ಕೆ ಹೋಗುವ ಸಾಧ್ಯತೆಯಿದೆ. ಸಂಪುಟ ವಿಸ್ತರಣೆ ಹಾಗೂ ನಿಗಮ-ಮಂಡಳಿ ನೇಮಕಕ್ಕೆ ಕೈ ಹಾಕಿದರೆ ಅತೃಪ್ತರು ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ತಟಸ್ಥವಾಗುವ ಸಾಧ್ಯತೆ ಇರುವುದರಿಂದ ಚುನಾವಣೆ ಪ್ರಕ್ರಿಯೆ ಮುಗಿದ ನಂತರ ಅದಕ್ಕೆ ಕೈ ಹಾಕಬಹುದು ಎಂಬ ಮಾತುಗಳು ಕೇಳಿಬರುತ್ತಿವೆ.

Advertisement

Udayavani is now on Telegram. Click here to join our channel and stay updated with the latest news.

Next