Advertisement

‘ಲೋಕಲ್’ಸಮರಕ್ಕೆ ಆಯೋಗ ಸನ್ನದ್ಧ

02:36 AM May 03, 2019 | Sriram |

ಬೆಂಗಳೂರು: ಎರಡನೇ ಹಂತದಲ್ಲಿ 2019ರ ಮಾರ್ಚ್‌ನಿಂದ ಜುಲೈವರೆಗೆ ಅವಧಿ ಮುಕ್ತಾಯವಾಗುವ ರಾಜ್ಯದ 103 ನಗರ ಸ್ಥಳೀಯ ಸಂಸ್ಥೆಗಳ ಪೈಕಿ ನ್ಯಾಯಾಲಯದಲ್ಲಿ ಪ್ರಕರಣ ಬಾಕಿಯಿರುವ 39 ಸಂಸ್ಥೆಗಳನ್ನು ಹೊರತುಪಡಿಸಿ 63 ನಗರ ಸ್ಥಳೀಯ ಸಂಸ್ಥೆಗಳಿಗೆ ಚುನಾವಣೆ ನಡೆಸಲು ಎಲ್ಲ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ ಎಂದು ರಾಜ್ಯ ಚುನಾವಣಾ ಆಯುಕ್ತ ಪಿ.ಎನ್‌. ಶ್ರೀನಿವಾಸಾಚಾರಿ ತಿಳಿಸಿದ್ದಾರೆ.

Advertisement

ರಾಜ್ಯ ಚುನಾವಣಾ ಆಯೋಗದ ಕಚೇರಿಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ವೇಳಾಪಟ್ಟಿ ಪ್ರಕಟಿಸಿ ಮಾತನಾಡಿದ ಅವರು, 2018ರ ಸೆಪ್ಟೆಂಬರ್‌ನಲ್ಲಿ ಅವಧಿ ಮುಕ್ತಾಯವಾದ 109 ನಗರ ಸ್ಥಳೀಯ ಸಂಸ್ಥೆಗಳಿಗೆ ಮೊದಲ ಹಂತದಲ್ಲಿ ಅದೇ ವರ್ಷ ಆಗಸ್ಟ್‌ನಲ್ಲಿ ಚುನಾವಣೆ ನಡೆಸಲಾಗಿತ್ತು. ಈಗ ಎರಡನೇ ಹಂತದಲ್ಲಿ 8 ನಗರಸಭೆ, 33 ಪುರಸಭೆ ಹಾಗೂ 22 ಪಟ್ಟಣ ಪಂಚಾಯಿತಿ ಸೇರಿ ಒಟ್ಟು 63 ನಗರ ಸ್ಥಳೀಯ ಸಂಸ್ಥೆಗಳಿಗೆ ಚುನಾವಣೆಗೆ ವೇಳಾಪಟ್ಟಿ ಪ್ರಕಟಿಸಲಾಗಿದೆ ಎಂದರು.

ಚುನಾವಣೆ ನಡೆಯುವ ನಗರ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ ತಕ್ಷಣದಿಂದಲೇ ನೀತಿ ಸಂಹಿತೆ ಜಾರಿಗೆ ಬರಲಿದೆ. ಈ ಚುನಾವಣೆಯಲ್ಲಿ ಬಂದೋಬಸ್ತ್ ಹಾಗೂ ಕಾನೂನು ಸುವ್ಯವಸ್ಥೆ ನೋಡಿಕೊಳ್ಳಲು ರಾಜ್ಯ ಪೊಲೀಸ್‌ ಇಲಾಖೆಯ ಸಹಕಾರ ಪಡೆದುಕೊಳ್ಳಲಾಗುತ್ತಿದೆ.

ಚುನಾವಣೆ ನಡೆಯಲಿರುವ ನಗರ ಸ್ಥಳೀಯ ಸಂಸ್ಥೆಗಳಿಗೆ ಐಎಎಸ್‌ ಅಧಿಕಾರಿಗಳನ್ನು ವಿಶೇಷ ವೀಕ್ಷಕರನ್ನಾಗಿ ಹಾಗೂ ಕೆಎಎಸ್‌ (ಹಿರಿಯ ಶ್ರೇಣಿ) ಅಧಿಕಾರಿಗಳನ್ನು ಸಾಮಾನ್ಯ ವೀಕ್ಷಕರನ್ನಾಗಿ ಮತ್ತು ರಾಜ್ಯ ಲೆಕ್ಕಪತ್ರ ಇಲಾಖೆಯ ಜಂಟಿ ನಿಯಂತ್ರಕರು ಹಾಗೂ ಉಪ ನಿಯಂತ್ರಕರನ್ನು ಚುನಾವಣಾ ವೆಚ್ಚ ವೀಕ್ಷಕರನ್ನಾಗಿ ನೇಮಕ ಮಾಡಲಾಗುತ್ತಿದೆ ಎಂದು ಶ್ರೀನಿವಾಸಾಚಾರಿ ಹೇಳಿದರು.

ಜಿಲ್ಲಾಧಿಕಾರಿಗಳು ಚುನಾವಣಾ ಅಧಿಸೂಚನೆ ಹೊರಡಿಸಿದ ಬಳಿಕ ಅಧಿಕೃತವಾಗಿ ಚುನಾವಣಾ ಪ್ರಕ್ರಿಯೆಗೆ ಚಾಲನೆ ಸಿಗಲಿದೆ. ಈ ಚುನಾವಣೆಯನ್ನು ಶಾಂತಿ-ಸುವ್ಯವಸ್ಥೆಯಿಂದ ನಡೆಸಲು ಎಲ್ಲ ರಾಜಕೀಯ ಪಕ್ಷಗಳು, ಅಭ್ಯರ್ಥಿಗಳು ಹಾಗೂ ಸಾರ್ವಜನಿಕರು ಸಹಕಾರ ನೀಡುವಂತೆ ಆಯುಕ್ತರು ಕೋರಿದರು.

Advertisement

ತಾಪಂ, ಗ್ರಾಪಂ ಉಪ ಚುನಾವಣೆ
ಬೆಂಗಳೂರು: ರಾಜ್ಯದ ಎಂಟು ಜಿಲ್ಲೆಗಳಲ್ಲಿ ವಿವಿಧ ಕಾರಣಗಳಿಂದ ತೆರವಾಗಿರುವ 8 ತಾಲೂಕು ಪಂಚಾಯಿತಿಗಳ 10 ಕ್ಷೇತ್ರಗಳ ಸದಸ್ಯ ಸ್ಥಾನಗಳಿಗೆ ಹಾಗೂ ಗ್ರಾಮ ಪಂಚಾಯಿತಿಗಳ 202 ಸದಸ್ಯ ಸ್ಥಾನಗಳ ಚುನಾವಣೆಗೆ ರಾಜ್ಯ ಚುನಾವಣಾ ಆಯೋಗ ವೇಳಾಪಟ್ಟಿ ಪ್ರಕಟಿಸಿದೆ.

ಗುರುವಾರ ಸುದ್ದಿಗೋಷ್ಠಿಯಲ್ಲಿ ವೇಳಾಪಟ್ಟಿ ಪ್ರಕಟಿಸಿದ ರಾಜ್ಯ ಚುನಾವಣಾ ಆಯುಕ್ತ ಪಿ.ಎನ್‌. ಶ್ರೀನಿವಾಸಾಚಾರಿ, ಉಪ ಚುನಾವಣೆ ನಡೆಯಲಿರುವ ತಾ.ಪಂ. ಹಾಗೂ ಗ್ರಾ.ಪಂ. ಕ್ಷೇತ್ರಗಳಲ್ಲಿ ಮೇ 29ಕ್ಕೆ ಮತದಾನ ನಡೆಯಲಿದ್ದು, ಇದಕ್ಕಾಗಿ ಮೇ 13ರಂದು ಆಯಾ ಜಿಲ್ಲಾಧಿಕಾರಿಗಳು ಅಧಿಸೂಚನೆ ಹೊರಡಿಸಲಿದ್ದಾರೆ. ಉಪ ಚುನಾವಣೆ ನಡೆಯುವ ಜಿಲ್ಲೆಯ ತಾಲೂಕು ಮತ್ತು ಗ್ರಾಮ ಪಂಚಾಯಿತಿ ಕ್ಷೇತ್ರಗಳ ವ್ಯಾಪ್ತಿಯಲ್ಲಿ ಮೇ 13ರಿಂದ 31ರವರೆಗೆ ಚುನಾವಣಾ ನೀತಿ ಸಂಹಿತೆ ಜಾರಿಯಲ್ಲಿ ಇರಲಿದೆ ಎಂದರು.

ಬೆಂಗಳೂರು ಜಿಲ್ಲೆಯ ಬೆಂಗಳೂರು ಪೂರ್ವ ತಾಲೂಕಿನ ಕಣ್ಣೂರು ತಾ.ಪಂ. ಕ್ಷೇತ್ರ, ಚಿತ್ರದುರ್ಗ ಜಿಲ್ಲೆಯ ಹೊಸದುರ್ಗದ ಶ್ರೀರಾಂಪುರ, ಚಾಮರಾಜನಗರದ ಗುಂಡ್ಲುಪೇಟೆಯ ಬಾಚಹಳ್ಳಿ, ಹಾವೇರಿ ಜಿಲ್ಲೆ ಸವಣೂರಿನ ಯಲವಿಗಿ, ರಾಯಚೂರು ಜಿಲ್ಲೆ ಸಿಂಧನೂರು ತಾಲೂಕಿನ ಧಡೇಸೂಗೂರು ಮತ್ತು ಉದ್ಬಾಳ (ಯು), ಯಾದಗಿರಿ ಜಿಲ್ಲೆ ಸುರಪೂರಿನ ಹೆಬ್ಟಾಳ.ಬಿ ಮತ್ತು ಗೆದ್ದಲಮರಿ, ಕಲಬುರಗಿ ಜಿಲ್ಲೆಯ ಜೇವರ್ಗಿಯ ಹಿಪ್ಪರಗಾ ಎಸ್‌.ಎನ್‌., ಬೀದರ್‌ ಜಿಲ್ಲೆ ಬೀದರ್‌ ತಾಲೂಕಿನ ಮರಕುಂದಾ ತಾಲೂಕು ಪಂಚಾಯಿತಿ ಕ್ಷೇತ್ರಗಳಿಗೆ ಚುನಾವಣೆ ನಡೆಯಲಿದೆ.

ಇದೇ ವೇಳೆ ವಿವಿಧ ಜಿಲ್ಲೆಗಳ ಗ್ರಾಪಂಗಳಲ್ಲಿ ತೆರವಾಗಿರುವ 202 ಸದಸ್ಯ ಸ್ಥಾನಗಳಿಗೂ ಉಪ ಚುನಾವಣೆ ಘೋಷಿಸಲಾಗಿದೆ.

ಉಪ ಚುನಾವಣೆ

ಸದಸ್ಯರ ನಿಧನದ ಹಿನ್ನೆಲೆಯಲ್ಲಿ ತುಮಕೂರು ಮಹಾನಗರ ಪಾಲಿಕೆಯ ವಾರ್ಡ್‌ ಸಂಖ್ಯೆ 22, ಬೆಳಗಾವಿ ಜಿಲ್ಲೆ ಸದಲಗಾ ಪುರಸಭೆಯ ವಾರ್ಡ್‌ ಸಂಖ್ಯೆ 19 ಮತ್ತು ಮುಗಳಖೋಡ ಪುರಸಭೆಯ ವಾರ್ಡ್‌ ಸಂಖ್ಯೆ 2ಕ್ಕೆ ಇದೇ ಅವಧಿಯಲ್ಲಿ ಉಪ ಚುನಾವಣೆ ನಡೆಯಲಿದೆ ಎಂದು ಆಯುಕ್ತರು ತಿಳಿಸಿದರು.

ಉಪ ಚುನಾವಣೆಯ ವೇಳಾಪಟ್ಟಿ
– ಜಿಲ್ಲಾಧಿಕಾರಿಗಳಿಂದ ಅಧಿಸೂಚನೆ- ಮೇ 13
– ನಾಮಪತ್ರ ಸಲ್ಲಿಸಲು ಕೊನೇ ದಿನ-ಮೇ16
– ನಾಮಪತ್ರ ಪರಿಶೀಲನೆ-ಮೇ 17
– ನಾಮಪತ್ರ ವಾಪಸ್‌ ಪಡೆದುಕೊಳ್ಳಲುಕೊನೇ ದಿನಾಂಕ- ಮೇ 20
– ಮತದಾನ- ಮೇ 29 (ಬೆ. 7ರಿಂದಸಂಜೆ 5ರವರೆಗೆ)
– ಮತ ಎಣಿಕೆ- ಮೇ 31 (ಬೆ. 8ರಿಂದ ತಾಲೂಕು ಕೇಂದ್ರ ಸ್ಥಳದಲ್ಲಿ)
Advertisement

Udayavani is now on Telegram. Click here to join our channel and stay updated with the latest news.

Next