Advertisement
ನಗರೀಕರಣ ಪ್ರಕ್ರಿಯೆ ಭಾರತದಲ್ಲಿ ಅತಿ ವೇಗವಾಗಿ ಸಾಗುತ್ತಿದೆ. 90ರ ದಶಕದಲ್ಲಿನ ಭಾರತ ಸರ್ಕಾರದ ಉದಾರೀಕರಣ ಮತ್ತು ಖಾಸಗೀಕರಣ ನೀತಿಗಳ ನಂತರದಲ್ಲಿ ನಗರ ಪ್ರದೇಶಗಳು ಗಣನೀಯವಾಗಿ ವಿಸ್ತಾರಗೊಂಡಿವೆ. ಗ್ರಾಮೀಣ ಪ್ರದೇಶಗಳಲ್ಲಿ ಕ್ಷೀಣಿಸುತ್ತಿರುವ ಆರ್ಥಿಕ ವ್ಯವಸ್ಥೆ, ಮುಖ್ಯವಾಗಿ ಕೃಷಿ ಕ್ಷೇತ್ರ ಮತ್ತು ಗ್ರಾಮೀಣ ಭಾಗದಲ್ಲಿ ಕಡಿಮೆಯಾಗುತ್ತಿರುವ ಉದ್ಯೋಗ ಅವಕಾಶಗಳು, ಇವೆರಡೂ ಹೆಚ್ಚು ಹೆಚ್ಚು ಸಂಖ್ಯೆಯಲ್ಲಿ ಜನರನ್ನು ನಗರ ಪ್ರದೇಶಗಳಿಗೆ ವಲಸೆ ಹೋಗುವಂತೆ ಮಾಡಿವೆ. ನಗರೀಕರಣ ಒಂದು ಕಡೆ ಆರ್ಥಿಕ ಬೆಳವಣಿಗೆ ಮತ್ತು ಉದ್ಯೋಗ ಸೃಷ್ಟಿಯಲ್ಲಿ ಸಹಾಯ ಮಾಡುತ್ತದೆ. ನಗರಗಳು ಬೆಳೆದಂತೆ ಆರ್ಥಿಕ ಚಟುವಟಿಕೆಗಳು ಹೆಚ್ಚಾಗುತ್ತವೆ. ಇದರಿಂದ ಉದ್ಯಮಗಳು ಬೆಳೆಯುತ್ತವೆ. ಜೊತೆಗೆ ಉದ್ಯೋಗ ಅವಕಾಶಗಳೂ ಹೆಚ್ಚಾಗುತ್ತವೆ. ಆದರೆ, ನಗರೀಕರಣ ಪ್ರಕ್ರಿಯೆ, ಅವಕಾಶಗಳ ಜೊತೆಗೆ ಸಮಸ್ಯೆಗಳನ್ನೂ ತರುತ್ತದೆ. ಸಾಮಾಜಿಕ ಮತ್ತು ಆರ್ಥಿಕ ವ್ಯವಸ್ಥೆಯಲ್ಲಿ ಅಸಮಾನತೆ, ಪರಿಸರ ಮಾಲಿನ್ಯ, ಬಡತನ ಸಮಸ್ಯೆ ಇತ್ಯಾದಿ ನಗರೀಕರಣದ ದುಷ್ಪರಿಣಾಮಗಳು.
“ಅರ್ಬನ್ ಫೆಲೋ’ ಕಾರ್ಯಕ್ರಮವು ಒಂಭತ್ತು ತಿಂಗಳ ಅವಧಿಯದಾಗಿದ್ದು, 30 ವರ್ಷದೊಳಗಿನ, ಪದವಿ ಪೂರ್ತಿಗೊಳಿಸಿರುವ ಅಭ್ಯರ್ಥಿಗಳು ಈ ಕಾರ್ಯಕ್ರಮಕ್ಕೆ ಅರ್ಜಿ ಸಲ್ಲಿಸಬಹುದು. ಡಿಗ್ರಿಯನ್ನು ಹೊರತುಪಡಿಸಿ ಪಡೆದ ತರಬೇತಿ ಹಾಗು ಸರ್ಟಿಫಿಕೇಷನ್ ಕೋರ್ಸ್‌ಗಳನ್ನು ಪೂರ್ಣಗೊಳಿಸಿದ್ದರೂ ಪರಿಗಣಿಸಲಾಗುವುದು. ನಗರಾಭಿವೃದ್ಧಿಯಲ್ಲಿ ವಿಶೇಷ ಅನುಭವವನ್ನು ಹೊಂದಿದ ಅಭ್ಯರ್ಥಿಗಳು ಪದವಿ ಪೂರ್ತಿಯಾಗಿಲ್ಲದಿದ್ದರೂ ಅರ್ಜಿಗಳನ್ನು ಸಲ್ಲಿಸಬಹುದು.
Related Articles
Advertisement
ತರಬೇತಿಯ ಪಠ್ಯಕ್ರಮವನ್ನು ಅಮೆರಿಕದ ಮೆಸಾಚುಸೆಟ್ಸ್ ಇನ್ಸ್‌ಟಿಟ್ಯೂಟ್ ಆಫ್ ಟೆಕ್ನಾಲಜಿ (Massachusetts Institute of Technology), ಯೂನಿವರ್ಸಿಟಿ ಕಾಲೇಜ್ ಆಫ್ ಲಂಡನ್ (University College of London), ಯೂನಿವರ್ಸಿಟಿ ಆಫ್ ಕೇಪ್‌ಟೌನ್ (University of Capetown) ನಂತಹ ಕೆಲವು ಪ್ರತಿಷ್ಠಿತ ವಿದ್ಯಾನಿಲಯಗಳ ಜೊತೆಗೂಡಿ ತಯಾರು ಮಾಡಲಾಗಿರುವುದರಿಂದ ಕಾರ್ಯಕ್ರಮದ ಗುಣಮಟ್ಟ ಸ್ವಾಭಾವಿಕವಾಗಿ ಉತ್ತಮವಾಗಿದೆ.
ಆಯ್ಕೆ ಪ್ರಕ್ರಿಯೆ? ಆಸಕ್ತ ಅಭ್ಯರ್ಥಿಗಳು ಅರ್ಜಿಗಳನ್ನು ಆನ್‌ಲೈನ್ ಮುಖಾಂತರ ಅಥವಾ ಪೋಸ್ಟ್ ಮೂಲಕ ಸಲ್ಲಿಸಬಹುದು. ಅರ್ಜಿಯಲ್ಲಿ ಅಭ್ಯರ್ಥಿಗಳ ಸ್ವ-ವಿವರ, ಶೈಕ್ಷಣಿಕ ಮಾಹಿತಿ, ವೈಯಕ್ತಿಕ ಹೇಳಿಕೆ ಮತ್ತು ಪ್ರಬಂಧ, ಎಕ್ಸ್‌ಪೀರಿಯನ್ಸ್ ಸರ್ಟಿಫಿಕೇಟ್ ಇತ್ಯಾದಿಗಳ ಬಗೆಗೆ ಮಾಹಿತಿಯನ್ನು ಒದಗಿಸಬೇಕು. ಅಭ್ಯರ್ಥಿಗಳ ಅರ್ಜಿಗಳನ್ನು ಪರಿಶೀಲಿಸಿದ ನಂತರ ಸಂದರ್ಶನಕ್ಕೆ ಆಯ್ಕೆ ಮಾಡಿಕೊಳ್ಳಲಾಗುತ್ತದೆ. ಅರ್ಬನ್ ಫೆಲೋ ಕಾರ್ಯಕ್ರಮಕ್ಕೆ ಯಾವುದೇ ರೀತಿಯ ಶುಲ್ಕವನ್ನೂ ಪಾವತಿಸುವ ಹಾಗಿಲ್ಲ. ಒಂಭತ್ತು ತಿಂಗಳ ತರಬೇತಿ ಹಾಗು ವಸತಿ ಎಲ್ಲವೂ ಉಚಿತ. ಅರ್ಜಿ ಸಲ್ಲಿಸಲು ಮೇ 1, 2017 ಕಡೆಯ ದಿನಾಂಕವಾಗಿದ್ದು, ಆಗಸ್ಟ್, 2017ರಿಂದ ಕಾರ್ಯಕ್ರಮ ಶುರುವಾಗಲಿದೆ. ನಗರಾಭಿವೃದ್ಧಿ ಕ್ಷೇತ್ರದಲ್ಲಿ ತಮ್ಮ ಭವಿಷ್ಯ ರೂಪಿಸಿಕೊಳ್ಳಲು ಬಯಸುವ ವಿದ್ಯಾರ್ಥಿಗಳಿಗೆ ಇದೊಂದು ಸುವರ್ಣಾವಕಾಶ.
ಹೆಚ್ಚಿನ ಮಾಹಿತಿಗಾಗಿ ಈ ಕೆಳಗಿನ ವೆಬ್‌ಸೈಟ್‌ಗೆ ಭೇಟಿಕೊಡಿ urbanfellows.iihs.co.in – ಪ್ರಶಾಂತ್ ಎಸ್. ಚಿನ್ನಪ್ಪನವರ್ ಚಿತ್ರದುರ್ಗ