ಬಂದರು: ಸ್ಮಾರ್ಟ್‌ಸಿಟಿ ಮುಖೇನ ಮಂಗಳೂರು ನಗರದ ಮೂಲ ಸೌಕರ್ಯ ಯೋಜನೆಗಳು ಇದೀಗ ಜಾರಿಯಾಗುತ್ತಿರುವ ಜತೆಗೆ, ಇನ್ನು ಮುಂದೆ ಪ್ರವಾಸೋದ್ಯಮಕ್ಕೆ ಆದ್ಯತೆಯಾಗಿ ಜಲಾಭಿಮುಖವಾಗಿ ನಗರ ಅಭಿವೃದ್ಧಿಗೊಳ್ಳಲು ಸಿದ್ಧತೆ ನಡೆಸಲಾಗುತ್ತಿದೆ.
ನೇತ್ರಾವತಿ, ಫಲ್ಗುಣಿ ನದಿ ತೀರ, ತಣ್ಣೀರುಬಾವಿ ಕಡಲ ತೀರವನ್ನು ಒಳಗೊಂಡಂತೆ ಸಮಗ್ರವಾಗಿ ಜನಸ್ನೇಹಿ ನೆಲೆಯಲ್ಲಿ ಅಭಿವೃದ್ಧಿಪಡಿಸುವ ಉದ್ದೇಶದಿಂದ ಒಟ್ಟು 166 ಕೋ.ರೂ ವೆಚ್ಚದ ಜಲಾಭಿಮುಖ ಯೋಜನೆ ಕೈಗೆತ್ತಿಕೊಳ್ಳಲಾಗಿದೆ. ಸದ್ಯ ಇದು ಟೆಂಡರ್ ಹಂತದಲ್ಲಿದ್ದು, ತಿಂಗಳ ಒಳಗೆ ಇದು ಅಂತಿಮ ಆಗಿ ಕಾರ್ಯಾದೇಶ ಆಗುವ ಸಾಧ್ಯತೆಯಿದೆ.
ನೇತ್ರಾವತಿ ಸೇತುವೆ ಬಳಿಯಿಂದ ಬೋಳಾರ ಫೆರಿವರೆಗೆ ಪ್ರಥಮ ಹಂತದಲ್ಲಿ ಅಭಿವೃದ್ಧಿ ಕಾರ್ಯ ನಡೆಸಲಾಗುತ್ತದೆ. ನದಿ ಬದಿ ವ್ಯಾಪ್ತಿಯಲ್ಲಿ ಬಯೋ ಡೈವರ್ಸಿಟಿ ಪಾರ್ಕ್, ಸೈಕಲ್ ಟ್ರಾÂಕ್, ಕುಳಿತುಕೊಳ್ಳಲು ವ್ಯವಸ್ಥೆ, ಸೇವೆ ನೀಡುವ ಕಿಯೋಸ್ Rಗಳು, ಮಕ್ಕಳ ಆಟದ ಸಣ್ಣ ಪಾರ್ಕ್ ಸಹಿತ ಇನ್ನೂ ಕೆಲವು ವಿಶೇಷತೆಗಳನ್ನು ಒಳಗೊಂಡಿರುತ್ತದೆ. ಫಲ್ಗುಣಿ ನದಿ ವ್ಯಾಪ್ತಿಯಲ್ಲಿಯೂ ಇಂತಹುದೇ ವಿವಿಧ ಸ್ತರದ ಅಭಿವೃದ್ಧಿ ನಡೆಸಲಾಗುತ್ತದೆ. ಹೀಗೆ ಎರಡು ನದಿ ಪಾತ್ರದ ಸಮಗ್ರ ಅಭಿವೃದ್ಧಿಗಾಗಿ ಒಟ್ಟು 75 ಕೋ.ರೂಗಳನ್ನು ವಿನಿಯೋಗಿಸಲು ಸ್ಮಾರ್ಟ್‌ಸಿಟಿಯಿಂದ ಅನುಮತಿಯೂ ದೊರೆತಿದೆ. ಎಲ್ಲವೂ ಅಂದುಕೊಂಡಂತೆ ಆದರೆ ಕೆಲವೇ ದಿನದಲ್ಲಿ ನದಿ ಪಾತ್ರದ ಭಾಗದಲ್ಲಿ ಸಾರ್ವಜನಿಕ ಸ್ನೇಹಿ ಕಾಮಗಾರಿ ಆರಂಭವಾಗಲಿದೆ.
ತಣ್ಣೀರುಬಾವಿಯಲ್ಲಿ ಕಡಲು- ಮತ್ಸ್ಯವಸ್ತು ಸಂಗ್ರಹಾಲಯ :
ಸಮುದ್ರ ತೀರದಲ್ಲಿ ಹೊಸತನ ಕಲ್ಪಿಸಲು ಸ್ಮಾರ್ಟ್ ಸಿಟಿಯಿಂದ ಹೊಸ ಯೋಜನೆ ಸಿದ್ಧಪಡಿಸಲಾಗಿದೆ. ಇದರಂತೆ ತಣ್ಣೀರುಬಾವಿ ವ್ಯಾಪ್ತಿಯನ್ನು ಆದ್ಯತೆಯಿಟ್ಟು ಅಲ್ಲಿ ಪ್ರವಾಸಿ ನೆಲೆಯಲ್ಲಿ ಅಭಿವೃದ್ಧಿಪಡಿಸಲಾಗುತ್ತದೆ. ಸಾಂಪ್ರ ದಾಯಿಕ ಕ್ರೀಡಾಂಗಣ ಅಭಿವೃದ್ಧಿ, ಸಾಂಸ್ಕೃತಿಕ ವಲಯ ಅಭಿವೃದ್ಧಿ, ಮೀನುಗಾರಿಕೆ ತಾಣ, ಮಳಿಗೆ, ಜಲಕ್ರೀಡಾಭಿವೃದ್ಧಿ ಕಾಮಗಾರಿಗಳು (ಯಾಂತ್ರಿಕವಲ್ಲ), ಬಯಲು ರಂಗಮಂದಿರ ಸಹಿತ ವಿವಿಧ ಆಯಾಮಗಳು ಸಾಕಾರ ವಾಗಲಿವೆ. ವಿಶೇಷವೆಂದರೆ; ಕಡಲು, ಮತ್ಸé ವಸ್ತು ಸಂಗ್ರಹಾ ಲಯ ಇಲ್ಲಿ ಸ್ಥಾಪನೆಯಾಗಲಿದೆ. ಪ್ರವಾಸೋದ್ಯಮಕ್ಕೆ ಹೊಸ ಅವಕಾಶ ತೆರೆದುಕೊಳ್ಳಲಿದೆ.
ಸಮುದ್ರ ಸಂಪರ್ಕಿಸಲಿದೆ ಪಾದಚಾರಿ ಸೇತುವೆ! :
ಸುಲ್ತಾನ್‌ಬತ್ತೇರಿಯಿಂದ ತಣ್ಣೀರುಬಾವಿಗೆ ಸಮುದ್ರ ಸಂಪರ್ಕ ಪಾದಚಾರಿ ಸೇತುವೆ ನಿರ್ಮಾಣದ ಕಲ್ಪನೆಯಿದೆ. ಇಲ್ಲಿ ಧ್ವನಿ ಮತ್ತು ಬೆಳಕಿನ ಪ್ರದರ್ಶನ ವ್ಯವಸ್ಥೆ ಬರಲಿದೆ. ಜತೆಗೆ ಜಲ ಪ್ರವಾಸೋದ್ಯಮ ಅಭಿವೃದ್ಧಿಗೆ ಒಟ್ಟು 5 ಜೆಟ್ಟಿ ನಿರ್ಮಾಣಕ್ಕೆ ಉದ್ದೇಶಿಸಲಾಗಿದೆ.
ಎಲ್ಲಿ ಜೆಟ್ಟಿ ನಿರ್ಮಾಣ? :
- ಜಪ್ಪು ಫೆರಿ ಬಳಿ
- ಉತ್ತರ ಕುದ್ರು
- ದಕ್ಷಿಣ ಕುದ್ರು
- ಸುಲ್ತಾನ್‌ಬತ್ತೇರಿ
- ಕೂಳೂರು ಹತ್ತಿರ
ಕೈಗೊಳ್ಳಲಿರುವ ವಿವಿಧ ಕಾಮಗಾರಿಗಳ ವಿವರ :
- ಸಮುದ್ರ ಸಂಪರ್ಕ ಪಾದಚಾರಿ ಸೇತುವೆ ನಿರ್ಮಾಣ (ಸುಲ್ತಾನ್‌ಬತ್ತೇರಿ) 35 ಕೋ.ರೂ.
- ಸಾಂಪ್ರದಾಯಿಕ ಕ್ರೀಡಾಂಗಣ ಅಭಿವೃದ್ಧಿ (ತಣ್ಣೀರುಬಾವಿ ಬಳಿ) 10 ಕೋ.ರೂ.
- ಸಾಂಸ್ಕೃತಿಕ ವಲಯ ಅಭಿವೃದ್ಧಿ (ತಣ್ಣೀರುಬಾವಿ ಹತ್ತಿರ) 7 ಕೋ.ರೂ.
- ಮೀನುಗಾರಿಕ ತಾಣ ಅಭಿವೃದ್ಧಿ, ಮಳಿಗೆಗಳ ಅಭಿವೃದ್ಧಿ (ತಣ್ಣೀರುಬಾವಿ ಹತ್ತಿರ) 5 ಕೋ.ರೂ.
- ಜಲಕ್ರೀಡಾಭಿವೃದ್ಧಿ ಕಾಮಗಾರಿಗಳು (ಯಾಂತ್ರಿಕವಲ್ಲದ-ತಣ್ಣೀರುಬಾವಿ ಸಮೀಪ) 5 ಕೋ.ರೂ.
- ಬಯಲು ರಂಗಮಂದಿರ (ತಣ್ಣೀರುಬಾವಿ ಹತ್ತಿರ) 2 ಕೋ.ರೂ.
- ಧ್ವನಿ ಮತ್ತು ಬೆಳಕಿನ ಪ್ರದರ್ಶನ ವ್ಯವಸ್ಥೆ (ಸುಲ್ತಾನ್‌ಬತ್ತೇರಿ ಹತ್ತಿರ) 2 ಕೋ.ರೂ.
- ಕಡಲು, ಮತ್ಸ್ಯವಸ್ತು ಸಂಗ್ರಹಾಲಯ (ತಣ್ಣೀರುಬಾವಿ ಹತ್ತಿರ) 5 ಕೋ.ರೂ.
- ಸುಲ್ತಾನ್‌ಬತ್ತೇರಿ, ತಣ್ಣೀರುಬಾವಿ ಪ್ರದೇಶಗಳಿಗೆ ಸಂಪರ್ಕ ಕಲ್ಪಿಸಲು ಸಮುದ್ರ ಸಂಪರ್ಕ ಕಿರು ಸೇತುವೆ ನಿರ್ಮಾಣ 10 ಕೋ.ರೂ.
ಪ್ರವಾಸೋದ್ಯಮದ ಹಿರಿಮೆ :
ಸ್ಮಾರ್ಟ್‌ಸಿಟಿ ಯೋಜನೆಯಡಿ ಮಂಗಳೂರಿನಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳು ಭರದಿಂದ ನಡೆಯುತ್ತಿವೆ. ಇದಕ್ಕೆ ಪೂರಕವಾಗಿ ಇನ್ನು ಮುಂದೆ ನದಿ, ಸಮುದ್ರ ತೀರ ವ್ಯಾಪ್ತಿಯ ಅಭಿವೃದ್ಧಿಗೆ ಆದ್ಯತೆ ನೀಡಲಾಗುತ್ತದೆ. ಇದರ ಸಾಕಾರದ ಮೂಲಕ ಕೆಲವೇ ವರ್ಷಗಳಲ್ಲಿ ಮಂಗಳೂರು ನಗರ ದೇಶದ ಪ್ರವಾಸೋದ್ಯಮ ಕ್ಷೇತ್ರದಲ್ಲಿ ಅದ್ವಿತೀಯ ಸ್ಥಾನ ಹೊಂದಲಿದೆ. ಮಂಗಳೂರಿನ ಹಿರಿಮೆಗೆ ಬಹುದೊಡ್ಡ ಗರಿಯಾಗಿ ಈ ಯೋಜನೆಗಳು ಮೂಡಿಬರಲಿದೆ. .
-ಡಿ. ವೇದವ್ಯಾಸ ಕಾಮತ್, ಶಾಸಕರು ಮಂಗಳೂರು ದಕ್ಷಿಣ
– ದಿನೇಶ್ ಇರಾ