Advertisement

Mangalore: ನಗರೋತ್ಥಾನ ಕಾಮಗಾರಿ ತ್ವರಿತ: ಸಚಿವ ದಿನೇಶ್‌ ಗುಂಡೂರಾವ್‌ನಿರ್ದೇಶನ

01:14 AM Sep 21, 2023 | Team Udayavani |

ಮಂಗಳೂರು: ಫೆಬ್ರವರಿಯಲ್ಲಿ ಲೋಕಸಭಾ ಚುನಾವಣೆ ಘೋಷಣೆಯಾಗುವ ಸಾಧ್ಯತೆ ಇರುವುದರಿಂದ ಜಿಲ್ಲೆಯ ನಗರ ಸ್ಥಳೀಯ ಸಂಸ್ಥೆಗಳಲ್ಲಿ ನಗರೋತ್ಥಾನ ಯೋಜನೆಯಡಿ ನಡೆಯುವ ಕಾಮಗಾರಿಗಳ ಅನುಷ್ಠಾನ ಪ್ರಕ್ರಿಯೆ ತ್ವರಿತಗೊಳಿಸಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್‌ ಗುಂಡೂರಾವ್‌ ಅಧಿಕಾರಿಗಳಿಗೆ ನಿರ್ದೇಶ ನೀಡಿದ್ದಾರೆ.
ದ.ಕ. ಜಿಲ್ಲಾಧಿಕಾರಿ ಕಚೇರಿಯಲ್ಲಿ ಬುಧವಾರ ನಗರ ಸ್ಥಳೀಯಾಡಳಿತ ಸಂಸ್ಥೆಗಳ ಪ್ರಗತಿ ಪರಿಶೀಲನ ಸಭೆಯಲ್ಲಿ ಅವರು ಮಾತನಾಡಿದರು.

Advertisement

ಕಾಮಗಾರಿಗಳ ಟೆಂಡರ್‌ ಪ್ರಕ್ರಿಯೆ ಪೂರ್ಣಗೊಳಿಸಿ ಕಾರ್ಯಾದೇಶ ನೀಡಬೇಕು. ಕೈಗೆತ್ತಿಕೊಂಡಿರುವ ಕಾಮಗಾರಿಗಳನ್ನು ಪೂರ್ಣಗೊಳಿಸಲು ಕೂಡ ಆದ್ಯತೆ ನೀಡಬೇಕು. ಎಂಜಿನಿಯರ್‌ಗಳ ಕೊರತೆ ಇದ್ದರೆ ಹೊರಗುತ್ತಿಗೆ ಆಧಾರದಲ್ಲಿ ನೇಮಕ ಮಾಡಲು ಕ್ರಮ ಕೈಗೊಳ್ಳಬೇಕು ಎಂದು ಸೂಚಿಸಿದರು.

302 ಕಾಮಗಾರಿ ಮಂಜೂರು
ನಗರೋತ್ಥಾನ ಕಾರ್ಯಕ್ರಮದಡಿ ದ.ಕ. ಜಿಲ್ಲೆಯ 14 ನಗರ ಸ್ಥಳೀಯಾಡಳಿತ ಸಂಸ್ಥೆಗಳಿಗೆ ಒಟ್ಟು 130 ಕೋಟಿ ರೂ.ಗ ವೆಚ್ಚದ 302 ಕಾಮಗಾರಿಗಳು ಮಂಜೂರಾಗಿವೆ. ಅದರಲ್ಲಿ 68 ಕಾಮಗಾರಿಗಳು ಪೂರ್ಣಗೊಂಡಿವೆ. 213 ಕಾಮಗಾರಿಗಳ ಟೆಂಡರ್‌ ಆಗಿದೆ ಎಂದು ಜಿಲ್ಲಾಧಿಕಾರಿ ಮುಲ್ಲೆ„ ಮುಗಿಲನ್‌ ತಿಳಿಸಿದರು.

ತ್ಯಾಜ್ಯ ವಿಲೇಗೆ ಸೂಚನೆ
ಪಚ್ಚನಾಡಿಯ ತ್ಯಾಜ್ಯ ನಿರ್ವಹಣ ಘಟಕದಲ್ಲಿ ಬಹಳ ವರ್ಷಗಳಿಂದ ಇರುವ ತ್ಯಾಜ್ಯ ವಿಲೇವಾರಿಗೆ ಹಾಗೂ ನಗರ ಪಾಲಿಕೆಗಳಲ್ಲಿ ಆಸ್ತಿ ತೆರಿಗೆ ವಸೂಲಾತಿಗೆ ಸೂಕ್ತ ಕ್ರಮ ವಹಿಸುವಂತೆ ಸಚಿವರು ಸೂಚಿಸಿದರು.

9 ಹೊಸ ಇಂದಿರಾ ಕ್ಯಾಂಟೀನ್‌
ಇಂದಿರಾ ಕ್ಯಾಂಟೀನ್‌ಗಳ ಗುತ್ತಿಗೆದಾರರು ನಿರ್ವಹಣೆಯ ಜತೆಗೆ ಸ್ವತ್ಛತೆಯನ್ನು ಕಾಪಾಡುವಂತೆ ನೋಡಿಕೊಳ್ಳಬೇಕು ಎಂದು ಸಚಿವರು ಸೂಚಿಸಿದರು. ಸೋಮೇಶ್ವರ, ಉಳ್ಳಾಲ, ವಿಟ್ಲ, ಮೂಲ್ಕಿ, ಕಡಬ, ಮೂಡುಬಿದಿರೆ, ಕಿನ್ನಿಗೋಳಿ, ಕೋಟೆಕಾರ್‌, ಬಜಪೆ ಸೇರಿದಂತೆ 9 ಕಡೆ ಹೊಸ ಇಂದಿರಾ ಕ್ಯಾಂಟೀನ್‌ ಆರಂಭಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದರು. ಇಂದಿರಾ ಕ್ಯಾಂಟೀನ್‌ಗೆ ಸೂಕ್ತ ಜಾಗ ದೊರೆಯದಿದ್ದರೆ ಮೊಬೈಲ್‌ ಕ್ಯಾಂಟೀನ್‌ ಆರಂಭಿಸುವಂತೆ ಯು.ಟಿ.ಖಾದರ್‌ ಸಲಹೆ ನೀಡಿದರು.

Advertisement

ವಿಧಾನಪರಿಷತ್‌ ಸದಸ್ಯ ಹರೀಶ್‌ ಕುಮಾರ್‌, ಅಪರ ಜಿಲ್ಲಾಧಿಕಾರಿ ಡಾ| ಸಂತೋಷ್‌ ಕುಮಾರ್‌, ಪಾಲಿಕೆ ಆಯುಕ್ತ ಆನಂದ್‌ ಸಿ.ಎಲ್‌, ನಗರಾಭಿವೃದ್ಧಿ ಕೋಶದ ಜಿಲ್ಲಾ ಅಧಿಕಾರಿ ಅಭಿಷೇಕ್‌, ಕಾರ್ಯನಿರ್ವಾಹಕ ಅಭಿಯಂತರ ಪುರಂದರ ಮೊದಲಾದವರು ಪಾಲ್ಗೊಂಡಿದ್ದರು.

ಕುಡಿಯುವ ನೀರು ಮುಂಜಾಗ್ರತೆ
ಮಳೆ ಕೊರತೆಯಿಂದಾಗಿ ಕುಡಿಯುವ ನೀರಿನ ಸಮಸ್ಯೆ ಉಂಟಾಗಬಹುದು. ಹಾಗಾಗಿ ಸೂಕ್ತ ಮುಂಜಾಗ್ರತ ಕ್ರಮಗಳನ್ನು ಕೈಗೊಳ್ಳುವಂತೆ ಸಚಿವರು ಸೂಚಿಸಿದರು. ಈ ಬಾರಿ ಮಲೆನಾಡಿನಲ್ಲಿಯೂ ಮಳೆ ಕಡಿಮೆಯಾಗಿರುವುದರಿಂದ ಜಿಲ್ಲೆಯ ನದಿಗಳಲ್ಲಿ ನೀರಿನ ಮಟ್ಟ ಇಳಿದಿದೆ. ಕುಡಿಯುವ ನೀರಿಗೆ ಸಮಸ್ಯೆಯಾಗದಂತೆ ಸೂಕ್ತ ಕ್ರಮ ಕೈಗೊಳ್ಳಲಾಗುವುದು. ಸಮಗ್ರ ನಿರ್ವಹಣೆಗೆ ಜಿಲ್ಲಾಮಟ್ಟದಲ್ಲಿ ತಂಡ ರಚಿಸಲಾಗುವುದು ಎಂದು ಜಿಲ್ಲಾಧಿಕಾರಿ ತಿಳಿಸಿದರು. ಚೆಕ್‌ಡ್ಯಾಂಗಳಲ್ಲಿ ನೀರು ಸಂಗ್ರಹಿಸುವ ಬಗ್ಗೆ ಗಮನ ಹರಿಸುವಂತೆ ವಿಧಾನ ಪರಿಷತ್‌ ಸದಸ್ಯ ಪ್ರತಾಪ್‌ಸಿಂಹ ನಾಯಕ್‌ ಸಲಹೆ ನೀಡಿದರು. ಅಡ್ಯಾರ್‌ ಅಣೆಕಟ್ಟಿನಿಂದ ತುಂಬೆ ಅಣೆಕಟ್ಟಿಗೆ ಪೈಪ್‌ಲೈನ್‌ ಮೂಲಕ ನೀರೆತ್ತಲು ಕ್ರಮ ಕೈಗೊಳ್ಳಬೇಕು ಎಂದು ವಿಧಾನಸಭೆ ಸ್ಪೀಕರ್‌ ಯು.ಟಿ.ಖಾದರ್‌ ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next