Advertisement

ನಗರ ಸ್ವಚ್ಛತೆಯ ರೂವಾರಿಗಳಿಗೆ ಬೇಕಿದೆ ಸುರಕ್ಷಾ ಕವಚ

10:23 AM Apr 04, 2020 | Sriram |

ಉಡುಪಿ: ಕೋವಿಡ್ 19  ಸೋಂಕು ಹರಡದಂತೆ ಮುನ್ನೆಚ್ಚರಿಕೆ ಕ್ರಮವಾಗಿ ಇಡೀ ದೇಶವೇ ಲಾಕ್‌ಡೌನ್‌ ಆಗಿದೆ. ಎಲ್ಲ ಇಲಾಖೆಗಳ ಸಿಬಂದಿಗೆ ರಜೆ ನೀಡಲಾಗಿದೆ. 144(3) ಸೆಕ್ಷನ್‌ ಜಾರಿ ಇರುವುದರಿಂದ ಹೆಚ್ಚಿನ ಜನರೂ ಮನೆಗಳಲ್ಲೇ ಉಳಿದುಕೊಂಡಿದ್ದಾರೆ. ಆದರೆ ಪೌರಕಾರ್ಮಿಕರು ಮಾತ್ರ ಯಾವುದೇ ಅಂಜಿಕೆ ಇಲ್ಲದೆ ನಗರದ ಸ್ವಚ್ಛತೆಯ ಕಾಯಕದಲ್ಲಿ ಕೊಡಗಿಕೊಂಡಿದ್ದಾರೆ.
ನಗರದ 35 ವಾರ್ಡ್‌ಗಳಲ್ಲಿ 100ಕ್ಕಿಂತ ಅಧಿಕ ಪೌರಕಾರ್ಮಿಕರು ದುಡಿಯುತ್ತಿದ್ದಾರೆ. ಇದರಲ್ಲಿ ಖಾಯಂ, ನೇರ ಪಾವತಿ ಹಾಗೂ ಗುತ್ತಿಗೆ ಅಧಾರದ ನೌಕರರೂ ಇದ್ದಾರೆ.

Advertisement

ಒಂದೇ ಮಾಸ್‌ 6 ದಿನ ಬಳಕೆ!
ಪ್ರಸ್ತುತ ನಗರಸಭೆ ಅಧಿಕಾರಿಗಳು ತ್ಯಾಜ್ಯ ವಿಲೇವಾರಿ ಮಾಡುವ ಪೌರಕಾರ್ಮಿಕರಿಗೆ ಒಂದು ಮಾಸ್ಕ್ , ಹ್ಯಾಂಡ್‌ ವಾಶ್‌, ಹ್ಯಾಂಡ್‌ ಸ್ಯಾನಿಟೈಸರ್‌ ನೀಡಿದ್ದಾರೆ. ಅವರು ಕಳೆದ 6 ದಿನಗಳಿಂದ ಅದನ್ನೇ ಧರಿಸಿಕೊಂಡು ಕಸ ವಿಲೇವಾರಿ ಮಾಡುತ್ತಿದ್ದಾರೆ. ವಿವಿಧ ಭಾಗಗಳಿಂದ ಬರುವ ಕಸವನ್ನು ವಿಂಗಡಿಸುವ ಘಟಕದ ಕಾರ್ಮಿಕರಿಗೆ ಸಹ ಒಂದೇ ಮಾಸ್ಕ್ ನೀಡಲಾಗಿದೆ. ನಿಜಕ್ಕೂ ಇದು ಕೇವಲ 6 ಗಂಟೆ ಮಾತ್ರ ಬಳಸಬಹುದಾದ ಮಾಸ್ಕ್ ಆಗಿರುತ್ತದೆ. ಕಾರ್ಮಿಕರು ಇದನ್ನು ಮತ್ತೆ ಮತ್ತೆ ಬಳಸುತ್ತಿರುವುದು ಆತಂಕಕ್ಕೆ ಎಡೆ ಮಾಡಿಕೊಟ್ಟಿದೆ.

ನಿತ್ಯ 15,000 ಕೆ.ಜಿ. ಕಸ
ಉಡುಪಿ ನಗರ ಸಭೆ ವ್ಯಾಪ್ತಿಯ 35 ವಾರ್ಡ್‌ಗಳಿಂದ ನಿತ್ಯ ಸುಮಾರು 15 ಸಾವಿರ ಕೆ.ಜಿ. ಹಸಿ ಕಸ ಹಾಗೂ ಕೆ.ಜಿ ಒಣ ಕಸ ಸಂಗ್ರಹವಾಗುತ್ತದೆ. ಈ ಹಿಂದೆ ನಗರಸಭೆ ವ್ಯಾಪ್ತಿಯಲ್ಲಿ ಒಣ ಕಸದಲ್ಲಿ ಪ್ಲಾಸ್ಟಿಕ್‌, ಪೇಪರ್‌ ಪ್ಯಾಡ್‌, ಡೈಪರ್‌ಗಳು ಬರುತ್ತಿದ್ದವು. ಪ್ರಸ್ತುತ ಸಾರ್ವಜನಿಕರು ಬಳಸಿದ ಹಾಗೂ ಕೋವಿಡ್ 19 ವೈರಸ್‌ ಶಂಕಿತ ವ್ಯಕ್ತಿಗಳು ಧರಿಸಿದ ಮಾಸ್ಕ್ ಸಹ ಸೇರ್ಪಡೆಯಾಗಿದೆ. ಉತ್ತಮ ದರ್ಜೆಯ ಮಾ ಸ್ಕ್ ಆದರೂ ನೀಡಬೇಕು ಎನ್ನುವುದು ಕಾರ್ಮಿಕರ ಬೇಡಿಕೆ.

ಉಡುಪಿ ಜಿಲ್ಲೆಯ 140 ಗ್ರಾ.ಪಂ. ವ್ಯಾಪ್ತಿಗಳಲ್ಲಿ 80 ಎಸ್‌ಎಲ್‌ ಆರ್‌ಎಂ ಘಟಕಗಳಿವೆ. ಪ್ರಸ್ತುತ ಈಘಟಕಗಳ ಸಿಬಂದಿ ನಿತ್ಯ ಕಸ ಸಂಗ್ರಹಿಸದೆ ಇದ್ದರೂ ವಾರಕ್ಕೊಮ್ಮೆ ಆದರೂ ಸಂಗ್ರಹಿಸುವಂತೆ ಆದೇಶ ದೊರಕಿದೆ. ಅವರ ಆರೋಗ್ಯ ದೃಷ್ಟಿಯಿಂದ ಉತ್ತಮ ದರ್ಜೆ ಮಾಸ್ಕ್ ನೀಡಬೇಕಾಗಿದೆ. ಪ್ರಸ್ತುತ ಉಡುಪಿ ಜಿಲ್ಲೆಯಲ್ಲಿ 1,400 ಮಂದಿ ಹೋಂ ಕ್ವಾರಂಟೈನ್‌ನಲ್ಲಿ ಇದ್ದಾರೆ. ಇವರಲ್ಲಿ ಅನೇಕರ ಮಾಸ್ಕ್ಗಳು ಅವರ ಮನೆಗಳಲ್ಲೇ ವಿಲೇವಾರಿ ಮಾಡುತ್ತಿದ್ದರೂ ನಗರದಲ್ಲಿ ವಾಸಿಸುವವರ ಮಾಸ್ಕ್, ಆಹಾರ ತ್ಯಾಜ್ಯ ಕಸ ವಿಲೇವಾರಿ ಘಟಕಕ್ಕೆ ರವಾನೆಯಾಗುತ್ತಿವೆ.

ಪರ್ಯಾಯ ಮಾರ್ಗವೇನು?
ಕೋವಿಡ್ 19 ಹಿನ್ನೆಲೆಯಲ್ಲಿ ಪ್ರಸ್ತುತ ಸಂಗ್ರಹವಾಗುವ ಹಸಿ ಕಸವನ್ನು ಲ್ಯಾಂಡ್‌ ಫಿಲ್ಲಿಂಗ್‌ ಮಾಡಬಹುದಾಗಿದೆ. ಸಾರ್ವ ಜನಿಕರು ಬಳಕೆ ಮಾಡುವ ಮಾಸ್ಕ್ಗಳನ್ನು ಪತ್ಯೇಕವಾಗಿ ಇರಿಸಿ, ಕಸ ಸಂಗ್ರಹಕ್ಕೆ ಬರುವವರಿಗೆ ನೀಡಬೇಕು. ಮಾಸ್ಕ್ ಗಳನ್ನು ಬಯೋ ಮೆಡಿಕಲ್‌ ಬರ್ನ್ ಮೂಲಕ ಸುಟ್ಟು ಹಾಕಬೇಕು. ಇದು ಕೊಂಚ ದುಬಾರಿಯಾದರು ಕಾರ್ಮಿಕರ ಆರೋಗ್ಯ, ಸಾರ್ವಜನಿಕರ ಆರೋಗ್ಯ ದೃಷ್ಟಿಯಿಂದ ಉತ್ತಮ ಮಾರ್ಗವಾಗಿದೆ ಎಂದು ಎಸ್‌ಎಲ್‌ ಆರ್‌ಎಂ ಘಟಕದ ಅಧಿಕಾರಿ ಮಾಹಿತಿ ನೀಡಿದರು.

Advertisement

ದಿನಕ್ಕೊಂದಾದರೂ ಮಾಸ್ಕ್ ಕೊಡಿ
ನಿತ್ಯ ಸಾವಿರಾರು ಸಂಖ್ಯೆಯಲ್ಲಿ ಮಾಸ್ಕ್ಗಳು ಬರುತ್ತಿವೆ. ಅವುಗಳನ್ನು ಮುಟ್ಟಲು ಭಯವಾಗುತ್ತಿದೆ. ನಾವು ಮನುಷ್ಯರು. ಕೊನೆಯ ಪಕ್ಷ ಪ್ರತಿದಿನ ಒಂದು ಮಾಸ್ಕ್ ನೀಡುವಂತಾಗಲಿ. ನಾವು ಕಚೇರಿಯಲ್ಲಿ ಕುಳಿತು ಕೆಲಸ ಮಾಡುವ ಅಧಿಕಾರಿಗಳಲ್ಲ ಎಂದು ಪೌರಕಾರ್ಮಿಕರೊಬ್ಬರು ಉದಯವಾಣಿಗೆ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next