ಲಕ್ನೋ: ಉತ್ತರಪ್ರದೇಶದಲ್ಲಿ ಅಖಿಲೇಶ್ ಯಾದವ್ ನೇತೃತ್ವದ ಸಮಾಜವಾದಿ ಪಕ್ಷ ಮತ್ತೊಂದು ಭಾರೀ ಹಿನ್ನಡೆ ಅನುಭವಿಸುವ ಸಾಧ್ಯತೆ ಇದ್ದು, ಪಕ್ಷದ ಹಿರಿಯ ಮುಖಂಡ ಅಜಂ ಖಾನ್ ಎಸ್ಪಿ ತೊರೆದು ತಮ್ಮದೇ ಸ್ವಂತ ಪಕ್ಷ ಹುಟ್ಟುಹಾಕಲಿದ್ದಾರೆ ಎಂಬ ಊಹಾಪೋಹ ಹರಿದಾಡುತ್ತಿರುವುದಾಗಿ ವರದಿ ತಿಳಿಸಿದೆ.
ಇದನ್ನೂ ಓದಿ:KGF 2 ದಾಖಲೆ; 5 ಸಾವಿರಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ರಿಲೀಸ್ ಆಗುತ್ತಿದೆ ಯಶ್ ಸಿನಿಮಾ
“ಅಜಂ ಖಾನ್ ಜೈಲಿನಿಂದ ಹೊರಬರುವುದು ಅಖಿಲೇಶ್ ಯಾದವ್ ಗೆ ಬೇಕಾಗಿಲ್ಲ” ಎಂಬ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರ ಹೇಳಿಕೆ ಸರಿಯಾಗಿದೆ ಎಂದು ಅಜಂ ಖಾನ್ ಮಾಧ್ಯಮ ಉಸ್ತುವಾರಿ ಫಸಾಹತ್ ಖಾನ್ ಆರೋಪಿಸಿದ್ದಾರೆ.
ಭಾನುವಾರ (ಏ.10) ರಾತ್ರಿ ರಾಮ್ ಪುರದಲ್ಲಿರುವ ಪಕ್ಷದ ಕಚೇರಿಯಲ್ಲಿ ಅಜಂ ಖಾನ್ ಅವರ ಬೆಂಬಲಿಗರ ಜೊತೆ ಸಭೆ ನಡೆಸಿದ ನಂತರ ಫಸಾಹತ್ ಈ ಪ್ರತಿಕ್ರಿಯೆ ನೀಡಿರುವುದಾಗಿ ವರದಿ ವಿವರಿಸಿದೆ.
ವರದಿಗಳ ಪ್ರಕಾರ, 2020ರ ಫೆಬ್ರುವರಿಯಲ್ಲಿ ಅಜಂ ಖಾನ್ ಸೀತಾಪುರ್ ಜೈಲು ಸೇರಿದ ಮೇಲೆ ಅಖಿಲೇಶ್ ಯಾದವ್ ಒಂದು ಬಾರಿಯೂ ಭೇಟಿ ನೀಡದಿರುವ ಬಗ್ಗೆ ಅಜಂ ಖಾನ್ ಅಸಮಾಧಾನ ಹೊಂದಿರುವುದಾಗಿ ತಿಳಿಸಿದೆ.
ಅಖಿಲೇಶ್ ಯಾದವ್ ಜತೆಗಿನ ಭಿನ್ನಭಿಪ್ರಾಯದಿಂದಾಗಿ ಪ್ರಗತಿಶೀಲ್ ಸಮಾಜವಾದಿ ಪಕ್ಷ-ಲೋಹಿಯಾ (ಪಿಎಲ್ ಪಿ-ಎಲ್)ದ ಅಧ್ಯಕ್ಷ ಶಿವ್ ಪಾಲ್ ಯಾದವ್ ಆಡಳಿತಾರೂಢ ಬಿಜೆಪಿ ಜತೆ ಕೈಜೋಡಿಸುವ ಸಾಧ್ಯತೆ ಇದ್ದಿರುವ ನಡುವೆಯೇ ಅಜಂ ಖಾನ್ ಕೂಡಾ ಸಮಾಜವಾದಿ ಪಕ್ಷ ತೊರೆಯಲಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದೆ.
2022ರ ಉತ್ತರಪ್ರದೇಶ ವಿಧಾನಸಭಾ ಚುನಾವಣೆ ವೇಳೆ ಜೈಲಿನಲ್ಲಿದ್ದ ಅಜಂ ಖಾನ್ ರಾಮ್ ಪುರ್ ಕ್ಷೇತ್ರದಿಂದ ಸ್ಪರ್ಧಿಸಿ ಗೆಲುವು ಸಾಧಿಸುವ ಮೂಲಕ 10ನೇ ಬಾರಿ ಶಾಸಕರಾಗಿ ಆಯ್ಕೆಯಾಗಿರುವುದಾಗಿ ವರದಿ ವಿವರಿಸಿದೆ.