ಮುಂಬೈ: ಸಂಪುಟದಲ್ಲಿ ಕ್ಯಾಬಿನೆಟ್ ದರ್ಜೆ ಸಿಗದ್ದಕ್ಕೆ ಅಸಮಾಧಾನಗೊಂಡ ಶಿವಸೇನಾದ ಸಚಿವ ಅಬ್ದುಲ್ ಸತ್ತಾರ್ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದು, ಇದರಿಂದ ಶಿವಸೇನಾ ನೇತೃತ್ವದ ಮಹಾರಾಷ್ಟ್ರ ವಿಕಾಸ್ ಅಘಾಡಿ ಸರ್ಕಾರಕ್ಕೆ ತೀವ್ರ ಹಿನ್ನಡೆ ತಂದಿದೆ ಎಂದು ವರದಿ ತಿಳಿಸಿದೆ.
ಸತ್ತಾರ್ ಔರಂಗಬಾದ್ ಜಿಲ್ಲೆಯ ಸಿಲ್ಲೋದ್ ಕ್ಷೇತ್ರದ ಶಾಸಕರಾಗಿದ್ದರು. ಅಲ್ಲದೇ ವಿಧಾನಸಭಾ ಚುನಾವಣೆಗೂ ಮೊದಲು ಕಾಂಗ್ರೆಸ್ ಪಕ್ಷ ತೊರೆದು ಶಿವಸೇನಾಕ್ಕೆ ಸತ್ತಾರ್ ಸೇರ್ಪಡೆಗೊಂಡಿದ್ದರು. ಇತ್ತೀಚೆಗೆ ಸತ್ತಾರ್ ರಾಜ್ಯ ಖಾತೆ ಸಚಿವರಾಗಿ ಪ್ರಮಾಣವಚನ ಸ್ವೀಕರಿಸಿದ್ದರು. ಆದರೆ ಆದಿತ್ಯ ಠಾಕ್ರೆ ಹಾಗೂ ಮತ್ತಿತರ ಮುಖಂಡರು ಕ್ಯಾಬಿನೆಟ್ ದರ್ಜೆ ಸಚಿವರಾಗಿ ಪ್ರಮಾಣವಚನ ಸ್ವೀಕರಿಸಿದ್ದರು.
ಪಕ್ಷದ ನಾಯಕತ್ವದ ಬಗ್ಗೆ ಅಸಮಾಧಾನವಿದೆ. ತನಗೆ ಸಂಪುಟದಲ್ಲಿ ಕ್ಯಾಬಿನೆಟ್ ದರ್ಜೆ ಕೊಟ್ಟಿಲ್ಲ ಎಂದು ಸತ್ತಾರ್ ಆರೋಪಿಸಿದ್ದಾರೆ. ಆದರೆ ಸಚಿವ ಸತ್ತಾರ್ ರಾಜೀನಾಮೆ ಬಗ್ಗೆ ಮುಖ್ಯಮಂತ್ರಿ ಕಚೇರಿಯಾಗಲಿ, ರಾಜಭವನವಾಗಲಿ ಖಚಿತಪಡಿಸಿಲ್ಲ. ಅಲ್ಲದೇ ಸ್ವತಃ ಸತ್ತಾರ್ ಕೂಡಾ ಈ ಬಗ್ಗೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ ಎಂದು ವರದಿ ತಿಳಿಸಿದೆ.
ಶಿವಸೇನಾದ ಹಿರಿಯ ಮುಖಂಡರಿಗೂ ಸತ್ತಾರ್ ರಾಜೀನಾಮೆ ಬಗ್ಗೆ ತಿಳಿದಿಲ್ಲ. ಶಿವಸೇನಾದ ಅನಿಲ್ ದೇಸಾಯಿ ಅವರು ಸತ್ತಾರ್ ರಾಜೀನಾಮೆ ಕೊಟ್ಟಿಲ್ಲ ಎಂದು ತಿಳಿಸಿದ್ದಾರೆ. ಏತನ್ಮಧ್ಯೆ ಶಿವಸೇನಾದ ಅರ್ಜುನ್ ಖೋಟ್ಕರ್ ಅವರನ್ನು ಸತ್ತಾರ್ ಬಳಿ ಚರ್ಚೆ ನಡೆಸಲು ಕಳುಹಿಸಿಕೊಟ್ಟಿದೆ ಎಂದು ವರದಿ ವಿವರಿಸಿದೆ.
ಶನಿವಾರ ಬೆಳಗ್ಗೆ ಔರಂಗಬಾದ್ ಹೋಟೆಲ್ ನಲ್ಲಿ ಖೋಟ್ಕರ್ ಅವರು ಸತ್ತಾರ್ ಅವರನ್ನು ಭೇಟಿಯಾಗಿ ಮಾತಕತೆ ನಡೆಸಿದ್ದರು. ಆದರೆ ಭೇಟಿಯ ನಂತರ ಈ ವಿಷಯದ ಬಗ್ಗೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ ಎಂದು ವರದಿ ಹೇಳಿದೆ.