ಲಕ್ನೋ: ತಂಗಿ ಮದುವೆಗೆ ಉಡುಗೊರೆ ನೀಡುವ ವಿಚಾರಕ್ಕೆ ಪತಿ – ಪತ್ನಿ ನಡುವೆ ಉಂಟಾದ ಮನಸ್ತಾಪ ಕೊಲೆಯಲ್ಲಿ ಅಂತ್ಯವಾದ ಘಟನೆ ಉತ್ತರ ಪ್ರದೇಶದ ಬಾರಾಬಂಕಿಯಲ್ಲಿ ನಡೆದಿದೆ.
ಏ. 26 ರಂದು ಚಂದ್ರ ಪ್ರಕಾಶ್ ಮಿಶ್ರಾ(35) ಅವರ ತಂಗಿಯ ಮದುವೆ ನಿಗದಿಯಾಗಿತ್ತು. ಸಹೋದರಿಯ ಮದುವೆಗೆ ತಾನು ಉಡುಗೊರೆಯಾಗಿ ಟಿವಿ ಹಾಗೂ ಆಕೆಗೆ ಚಿನ್ನದ ಉಂಗುರ ಹಾಕಬೇಕೆಂದು ಚಂದ್ರ ಪ್ರಕಾಶ್ ಬಯಸಿದ್ದರು.
ಈ ವಿಚಾರವನ್ನು ಚಂದ್ರ ಪ್ರಕಾಶ್ ತನ್ನ ಪತ್ನಿ ಚಾಬಿಗೆ ಹೇಳಿದ್ದರು. ತಂಗಿಯ ಮದುವೆಗೆ ಟಿವಿ ಹಾಗೂ ಚಿನ್ನದ ಉಂಗುರವನ್ನು ಚಂದ್ರ ಪ್ರಕಾಶ್ ತಂದಿದ್ದರು. ಆದರೆ ಈ ವಿಚಾರ ಪತ್ನಿ ಚಾಬಿಗೆ ಇಷ್ಟವಿರಲಿಲ್ಲ. ಇದರಿಂದಾಗಿ ಚಾಬಿ ಪತಿಯ ಜೊತೆ ಜಗಳ ಮಾಡಿದ್ದಳು. ಉಡಗೊರೆ ವಿಚಾರದಲ್ಲಿ ಪತಿ – ಪತ್ನಿಯ ನಡುವೆ ಮನಸ್ತಾಪ ಉಂಟಾಗಿದೆ.
ಚಾಬಿ ಪತಿಗೆ ಬುದ್ಧಿ ಕಲಿಸಬೇಕೆನ್ನುವ ನಿಟ್ಟಿನಲ್ಲಿ ಈ ವಿಚಾರವನ್ನು ತನ್ನ ಸಹೋದರರಿಗೆ ಹೇಳಿದ್ದರು. ಚಾಬಿಯ ಮನೆಗೆ ಬಂದ ಆಕೆಯ ಸಹೋದರರು ಚಂದ್ರ ಪ್ರಕಾಶ್ ಮೇಲೆ ಹಲ್ಲೆ ನಡೆಸಿದ್ದಾರೆ. ಕೋಲಿನಿಂದ ನಿರಂತರವಾಗಿ ಹಲ್ಲೆ ನಡೆಸಿದ ಪರಿಣಾಮ ಚಂದ್ರ ಪ್ರಕಾಶ್ ಗಂಭೀರ ಗಾಯಗೊಂಡಿದ್ದಾರೆ.
ಗಾಯಗೊಂಡ ಚಂದ್ರ ಪ್ರಕಾಶ್ ಅವರನ್ನು ಕುಟುಂಬಸ್ಥರು ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದರೆ ಚಿಕಿತ್ಸೆ ಫಲಿಸದೆ ಅವರು ಮೃತಪಟ್ಟಿದ್ದಾರೆ.
ಈ ಸಂಬಂಧ ಪೊಲೀಸರು ಚಾಬಿ ಮತ್ತು ಆಕೆಯ ಸಹೋದರರು ಸೇರಿದಂತೆ ಐವರನ್ನು ಬಂಧಿಸಿ ಪ್ರಕರಣ ದಾಖಲಿಸಿದ್ದಾರೆ.
ಆರೋಪಿಗಳನ್ನು ಬಂಧಿಸಿ, ಹೆಚ್ಚಿನ ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸರು ಹೇಳಿದ್ದಾರೆ.