Advertisement

ಅಧಿಕಾರಿಗಳ ವಿರುದ್ಧ ಅಸಮಾಧಾನ

12:48 PM Aug 21, 2019 | Team Udayavani |

ರೋಣ: ಪ್ರತಿಯೊಂದು ಸಭೆಯಲ್ಲಿ ನಡೆದಂತಹ ಸಭೆ ನಡಾವಳಿ ಮತ್ತು ಸದಸ್ಯರೆಲ್ಲ ಪ್ರಸ್ತಾಪಿಸಿದ ವಿಷಯ ಠರಾವಿನಲ್ಲಿ ಇರುವುದಿಲ್ಲ. ಅಧಿಕಾರಿಗಳು ಏನು ಮಾಡುತ್ತಿದ್ದಿರಿ? ಸಭೆಯಲ್ಲಿ ನಡೆದ ಘಟನೆಗಳ ಕುರಿತು ಸರಿಯಾಗಿ ಬರೆಯಲು ಬರದಿದ್ದರೆ ನಾಚಿಕೆ ಆಗಬೇಕು ಎಂದು ತಾಪಂ ಸದಸ್ಯ ಪ್ರಭು ಮೇಟಿ ತಾಪಂ ಅಧಿಕಾರಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

Advertisement

ಮಂಗಳವಾರ ತಾಪಂ ಸಭಾಭವನದಲ್ಲಿ ಜರುಗಿದ ಸಾಮಾನ್ಯ ಸಭೆಯಲ್ಲಿ ಹಿಂದಿನ ಸಭೆಯಲ್ಲಿ ಚರ್ಚಿಸಿದ ವಿಷಯಗಳನ್ನು ಪ್ರಸ್ತಾಪಿಸಿ ಮಾತನಾಡಿ, ಹಿಂದಿನ ಸಭೆಯಲ್ಲಿ ಮಂಡಿಸಿದ ವಾದ ವಿವಾದಗಳನ್ನು ಠರಾವಿನಲ್ಲಿ ಸರಿಯಾಗಿ ಬರೆಯುವುದಿಲ್ಲ. ಅಲ್ಲದೆ ಸಭೆಯಲ್ಲಿ ಅಧಿಕಾರಿಗಳ ಗಮನವೇ ಇರುವುದಿಲ್ಲ. ಇದರಿಂದ ಸಭೆ ಯಾವ ಪುರುಷಾರ್ಥಕ್ಕೆ ನಡೆಸಬೇಕು ಎಂದು ತಾಪಂ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.

ಮೂರು ವರ್ಷಗಳು ಕಳೆಯುತ್ತಾ ಬಂದರೂ ಇದುವರೆಗೂ ಸಭೆಯಲ್ಲಿ ನಡೆದ ನಡಾವಳಿಗಳನ್ನು ಠರಾವಿನಲ್ಲಿ ಬರೆಯಲು ಅಧಿಕಾರಿಗಳಿಗೆ ಬರುತ್ತಿಲ್ಲವೆಂದರೆ ಏನು ಅರ್ಥ. ಪ್ರತಿ ಬಾರಿ ಸಭೆ ನಡೆದಾಗಲೂ ಈ ವಿಷಯ ಪ್ರಸ್ತಾಪಿಸುತ್ತ ಬಂದಿದ್ದರೂ ಮತ್ತೆ ಮತ್ತೆ ಅದೇ ತಪ್ಪುಗಳು ಮರುಕಳಿಸುತ್ತಿವೆ. ಹಿಂದಿನ ಸಭೆಯಲ್ಲಿ ನಾನು ಡಿಬಿಓಟಿ(24/7) ಕುಡಿಯುವ ನೀರಿನ ವಿಷಯ ಪ್ರಸ್ತಾಪಿಸಿದ್ದು, ಅದರ ಬಗ್ಗೆ ಠರಾವಿನಲ್ಲಿ ಏನು ಬರೆದಿಲ್ಲ. ಸದಸ್ಯರ ಕೆಲಸ ಬಿಟ್ಟು ನಾವು ಕ್ಲರ್ಕ್‌ ಕೆಲಸ ಮಾಡಬೇಕಾಗಿದೆ. ನಾವೇ ಖುದ್ದು ವಿದ್ಯಾರ್ಥಿಗಳಿಗೆ ಹೇಳಿದಂತೆ ಠರಾವು ಬರೆಯುವುದನ್ನು ಹೇಳಿಕೊಡಬೇಕಾಗಿದೆ ಎಂದು ತಾಪಂ ಅಧಿಕಾರಿಗಳಿಗೆ ಪಾಠ ಮಾಡಿದರು.

29 ಇಲಾಖೆಗಳು ಇದ್ದು, ಕೇವಲ 18 ಇಲಾಖೆ ಮಾಹಿತಿ ನೀಡಲಾಗಿದೆ. ಉಳಿದ ಇಲಾಖೆಯವರು ತಮ್ಮ ಇಲಾಖೆ ಮಾಹಿತಿ ನೀಡಿಲ್ಲ. ಅಂತಹ ಅಧಿಕಾರಿಗಳ ವಿರುದ್ಧ ಏನು ಕ್ರಮ ಕೈಗೊಂಡಿದ್ದಿರೀ?ಎಂದು ತಾಪಂ ಕಾರ್ಯನಿರ್ವಾಹಕ ಅಧಿಕಾರಿಯನ್ನು ಪ್ರಶ್ನಿಸಿದರು. ನಿಯಮದ ಪ್ರಕಾರ ಸಭೆ ನಡೆಯುವ ಹತ್ತು ದಿನಗಳ ಮುಂಚಿತವಾಗಿವೇ ಎಲ್ಲ ಇಲಾಖೆ ಅಧಿಕಾರಿಗಳು ಮಾಹಿತಿ ಒದಗಿಸಬೇಕು. ಆ ಪ್ರತಿಗಳನ್ನು ಎಲ್ಲ ಸದಸ್ಯರಿಗೂ ಎಂಟು ಹತ್ತು ದಿನಗಳ ಮುಂಚಿತವಾಗಿಯೇ ಸದಸ್ಯರಿಗೆ ನೀಡಬೇಕು. ಆದರೆ ಸಭೆ ಪ್ರಾರಂಭವಾದರೂ ಅನೇಕ ಇಲಾಖೆ ಅಧಿಕಾರಿಗಳು ಮಾಹಿತಿಯನ್ನು ಇನ್ನೂ ಸಲ್ಲಿಕೆ ಮಾಡಿಲ್ಲ ಎಂದರು.

ಇದಕ್ಕೆ ಪ್ರತಿಕ್ರಿಯೆ ನೀಡಿದ ತಾಪಂ ಇಒ ಸಂತೋಷ ಪಾಟೀಲ, ಮುಂದಿನ ಬಾರಿ ಈ ರೀತಿಯಾಗದಂತೆ ನೋಡಿಕೊಳ್ಳುತ್ತೇವೆ. ಸಭೆ ನಡೆಯುವ ಎಂಟು ದಿನಗಳ ಮುಂಚಿತವಾಗಿಯೇ ಎಲ್ಲ ಇಲಾಖೆ ವರದಿಯನ್ನು ಸದಸ್ಯರಿಗೆ ಸಲ್ಲಿಸುವುದಾಗಿ ತಿಳಿಸಿದರು.

Advertisement

ತಾಪಂ ಸದಸ್ಯ ಜಗದೀಶ ಬ್ಯಾಡಗಿ ಮಾತನಾಡಿ, ಪ್ರವಾಹದಿಂದಾಗಿ ಹೊಳೆಆಲೂರಿನ ಅನೇಕ ಮನೆಗಳು ಬಿದ್ದಿವೆ. ಅಲ್ಲದೇ ಬಹುತೇಕ ವ್ಯಾಪಾರಿಗಳ ಅಂಗಡಿಗಳಿಗೆ ನೀರು ನುಗ್ಗಿದ್ದು, ಕೇವಲ ಬಿದ್ದ ಮನೆಗಳ ಸರ್ವೇ ಕಾರ್ಯ ಮಾಡುತ್ತಿದ್ದು, ವ್ಯಾಪಾರಿಗಳಿಗೆ ಆದ ಹಾನಿಗೆ ಏನು ಮಾಡಬೇಕು. ಈ ಕುರಿತಾಗಿ ಏನು ಕ್ರಮ ಕೈಗೊಂಡಿದ್ದಿರಿ ಎಂದು ತಹಶೀಲ್ದಾರ್‌ ಶರಣಮ್ಮ ಕಾರಿ ಅವರನ್ನು ಪ್ರಶ್ನಿಸಿದರು. ತಹಶೀಲ್ದಾರ್‌ ಶರಣಮ್ಮ ಕಾರಿ ಮಾತನಾಡಿ, ಮೇಲಾಧಿಕಾರಿಗಳಿಂದ ಈಗಾಗಲೇ ಸೂಚನೆ ಬಂದಿದ್ದು, ವ್ಯಾಪಾರಸ್ಥರಿಗೆ ಆಗಿರುವ ಹಾನಿಯನ್ನು ಸಮೀಕ್ಷೆ ನಡೆಸಿ ಸೂಕ್ತ ಪರಿಹಾರ ಒದಗಿಸಿ ಕೊಡಲಾಗುವುದು ಎಂದರು.

ಪ್ರಭು ಮೇಟಿ ಮಾತನಾಡಿ, ಪ್ರವಾಹದಿಂದಾಗಿರುವ ಮನೆ, ಬೆಳೆ ಹಾನಿಗಳನ್ನು ಪಾರದರ್ಶಕವಾಗಿ ಯಾವುದೇ ಒತ್ತಡಕ್ಕೆ ಮಣಿಯದೇ ಸರ್ವೇ ಕಾರ್ಯವನ್ನು ಕೈಗೊಳ್ಳಿ. ನಂತರ ಕೈಗೊಂಡ ಕ್ರಮ ಹಾಗೂ ವಿತರಣೆ ಮಾಡಿರುವ ಪರಿಹಾರದ ಬಗ್ಗೆ ಮುಂದಿನ ಸಭೆಯಲ್ಲಿ ಮಾಹಿತಿ ನೀಡಬೇಕು. ರಸ್ತೆಗಳು ಹಾಳಾಗಿರುವ ಬಗ್ಗೆ ಸಂಬಂಧಿಸಿದ ಇಲಾಖೆ ಸೂಚಿಸುವಂತೆ ತಹಶೀಲ್ದಾರರಿಗೆ ಹೇಳಿದರು.

ಈ ಕುರಿತು ಪ್ರತಿಕ್ರಿಯೆ ನೀಡಿದ ತಹಶೀಲ್ದಾರ್‌ ಶರಣಮ್ಮ ಕಾರಿ, ಈಗಾಗಲೇ ರಸ್ತೆ ಹಾಳಾಗಿರುವ ಬಗ್ಗೆ ಆಯಾ ಇಲಾಖೆಗೆ ಸೂಚನೆ ನೀಡಲಾಗಿದ್ದು, ತಾತ್ಕಾಲಿಕವಾಗಿ ರಸ್ತೆ ನಿರ್ಮಾಣ ಮಾಡಿ ತದನಂತರ ಸಮರ್ಪಕ ರಸ್ತೆ ನಿರ್ಮಾಣ ಮಾಡುವಂತೆ ಸಂಬಂಧಿಸಿದ ಇಲಾಖೆಗೆ ಸೂಚನೆ ನೀಡಲಾಗಿದೆ ಎಂದು ತಿಳಿಸಿದರು.

ತಾಪಂ ಅಧ್ಯಕ್ಷೆ ಪ್ರೇಮವ್ವ ನಾಯಕ, ಉಪಾಧ್ಯಕ್ಷೆ ಇಂದಿರಾ ತೇಲಿ, ಸಾಮಾಜಿಕ ನ್ಯಾಯ ಸಮಿತಿ ಅಧ್ಯಕ್ಷ ವಿ.ಎಫ್‌. ಪಾಟೀಲ, ಬಿ.ಆರ್‌. ಬೇವಿನಮರದ ಸೇರಿದಂತೆ ವಿವಿಧ ಇಲಾಖೆ ಅಧಿಕಾರಿಗಳು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next