Advertisement

ಮಂಗಳೂರಿಗೆ ಬರಲಿದೆ ಯುಪಿಎಸ್‌ಸಿ ಪರೀಕ್ಷಾ ಕೇಂದ್ರ

06:35 AM Aug 06, 2017 | Team Udayavani |

ಉಡುಪಿ: ಹೊಸದಿಲ್ಲಿ, ಚೆನ್ನೈ, ಬೆಂಗಳೂರು, ಮೈಸೂರಿನಲ್ಲಿ ಇರುವಂತೆ ಕೇಂದ್ರೀಯ ಲೋಕಸೇವಾ ಆಯೋಗದ (ಯುಪಿಎಸ್‌ಸಿ) ಭಾರತೀಯ ಆಡಳಿತಾತ್ಮಕ ಸೇವೆ (ಐಎಎಸ್‌) ಪರೀಕ್ಷಾ ಕೇಂದ್ರವು ಮಂಗಳೂರಿನಲ್ಲಿ ಆಗಲಿದೆ ಎಂದು ಐಎಎಸ್‌ ಪರೀಕ್ಷೆಯಲ್ಲಿ 37ನೇ ರ್‍ಯಾಂಕ್‌ ಗಳಿಸಿರುವ ಡಾ| ನವೀನ್‌ ಭಟ್‌ ಅವರು ಹೇಳಿದರು.ಅವರು ಶನಿವಾರ ಉಡುಪಿಯ ಎಂಜಿಎಂ ಕಾಲೇಜಿನಲ್ಲಿ ಮತ್ತು ಪೃಥ್ವಿ ಇನ್‌ಸ್ಟಿಟ್ಯೂಟ್‌ ಆಫ್ ಮ್ಯಾನೇಜ್‌ ಮೆಂಟ್‌ (ಪ್ರೈಮ್‌)ನಲ್ಲಿ ವಿದ್ಯಾರ್ಥಿಗಳ ಜತೆ ಸಂವಾದ ನಡೆಸಿದರು.

Advertisement

ದೇಶದ ಎಲ್ಲ ಸ್ಮಾರ್ಟ್‌ ಸಿಟಿಗಳಲ್ಲಿ ಯುಪಿಎಸ್‌ಸಿ ಪರೀಕ್ಷಾ ಕೇಂದ್ರಗಳನ್ನು ತೆರೆಯಲು ಕೇಂದ್ರ ಸರಕಾರ ನಿರ್ಧರಿಸಿದೆ. ಮಂಗಳೂರು ಸ್ಮಾರ್ಟ್‌ ಸಿಟಿಗೆ ಆಯ್ಕೆಯಾದ ಕಾರಣ ಮಂಗಳೂರಿನಲ್ಲಿ ಪರೀಕ್ಷಾ ಕೇಂದ್ರ ತೆರೆಯಲಿದೆ. ಹೀಗಾಗಿ ಕರಾವಳಿಯ ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಐಎಎಸ್‌ ಪರೀಕ್ಷೆ ಬರೆಯಲು ಮುಂದೆ ಬರಬೇಕು. ಕನಿಷ್ಠ ಯಾವುದಾದರೂ ಒಂದು ಪದವಿ ಪಡೆದಿದ್ದು, 21 ವರ್ಷ ವಯಸ್ಸಾಗಿದ್ದರೆ ಪರೀಕ್ಷೆ ಬರೆಯಲು ಅವರು ಅರ್ಹ ರಾಗಿರುತ್ತಾರೆ ಎಂದರು.

ಎಂಜಿಎಂ ಕಾಲೇಜಿನಲ್ಲಿ ಪದವಿ ಕಾಲೇಜಿನ ಪ್ರಾಂಶುಪಾಲೆ ಪ್ರೊ| ಕುಸುಮಾ ಕಾಮತ್‌ ಅಧ್ಯಕ್ಷತೆ ವಹಿಸಿದ್ದರು. ಪ.ಪೂ. ಕಾಲೇಜು ಪ್ರಾಂಶುಪಾಲೆ ಮಾಲತಿದೇವಿ, ಐಕ್ಯೂಎಸಿ ಘಟಕದ ಸಂಯೋಜಕ ಪ್ರೊ| ಅರುಣ್‌ ಕುಮಾರ್‌ ಬಿ. ಉಪಸ್ಥಿತರಿದ್ದರು. ಎಂಜಲಿನ್‌ ಫ್ಲೇವಿಯಾ ಡಿ’ಸೋಜಾ ಸ್ವಾಗತಿ ಸಿದರು. ರಾಜ್ಯಶಾಸ್ತ್ರ ವಿಭಾಗದ ಮುಖ್ಯಸ್ಥ ಕೊಕ್ಕರ್ಣೆ ಸುರೇಂದ್ರನಾಥ ಶೆಟ್ಟಿ ಪರಿಚಯಿಸಿದರು. ಮೈತ್ರೇಯಿ ಕಾರ್ಯಕ್ರಮ ನಿರೂಪಿಸಿದರು. ರಶ್ಮಿ ಶೆಣೈ ವಂದಿಸಿದರು.ಪ್ರೈಮ್‌ ಸಂಸ್ಥೆಯಲ್ಲಿ ಸ್ಥಾಪಕ ರತ್ನಕುಮಾರ್‌, ಕರ್ಣಾಟಕ ಬ್ಯಾಂಕಿನ ನಿವೃತ್ತ ಪ್ರಬಂಧಕ ರಘುಪತಿ ರಾವ್‌ ಉಪಸ್ಥಿತರಿದ್ದರು. ನಿರ್ದೇಶಕ ಪ್ರೊ| ರಾಧಾಕೃಷ್ಣ ಆಚಾರ್ಯ ಸ್ವಾಗತಿಸಿದರು. ಪ್ರೊ| ಎ.ಪಿ. ಕೊಡಂಚ ವಂದಿಸಿದರು.

ಕನ್ನಡದಲ್ಲೂ  ಪರೀಕ್ಷೆ  ಬರೆಯಬಹುದು
ಯುಪಿಎಸ್‌ಸಿಯಲ್ಲಿ 100 ರ್‍ಯಾಂಕ್‌ನ ಒಳಗೆ ಬಂದರೆ ಮೊದಲ ಸೇವಾ ಕ್ಷೇತ್ರದ ಆಯ್ಕೆಗೆ ಆದ್ಯತೆ ಸಿಗುತ್ತದೆ. ಐಎಎಸ್‌ ಸಿಗದಿದ್ದರೆ ಐಎಫ್ಎಸ್‌, ಐಪಿಎಸ್‌, ಐಆರ್‌ಎಸ್‌ ಮೊದಲಾದ ಉತ್ತಮ ಸೇವಾ ಕ್ಷೇತ್ರಗಳನ್ನು ಆಯ್ಕೆ ಮಾಡಿಕೊಳ್ಳಲು ಅವಕಾಶವಿದೆ. ಯುಪಿಎಸ್‌ಸಿ ಪರೀಕ್ಷೆಯಲ್ಲಿ ಈ ಬಾರಿ 1,000 ರ್‍ಯಾಂಕ್‌ ಪಡೆದವರ ಪೈಕಿ 60 ಮಂದಿ ಕರ್ನಾಟಕದವರಾಗಿದ್ದಾರೆ. ಅದರಲ್ಲೂ ಐವರು ಕನ್ನಡದಲ್ಲಿಯೇ ಪರೀಕ್ಷೆ ಬರೆದಿದ್ದಾರೆ ಎಂದು ಹೇಳಿದ ಡಾ| ನವೀನ್‌ ದೇಶ-ವಿದೇಶಗಳ ಪ್ರಸ್ತುತ ವಿದ್ಯಮಾನ, ಇತಿಹಾಸ, ಅದರ ಬಗೆಗಿನ ತುಲನಾತ್ಮಕ ವಿಶ್ಲೇಷಣೆ ಬಗ್ಗೆ ಜ್ಞಾನ ಬೆಳೆಸಿಕೊಳ್ಳಬೇಕು. ಅದಕ್ಕಾಗಿ ದಿನಂಪ್ರತಿ ಪತ್ರಿಕೆಗಳನ್ನು ಓದಬೇಕು. ಸುದ್ದಿ ವಾಹಿನಿಗಳನ್ನು ನೋಡಬೇಕು ಎಂದವರು ಕರೆ ಇತ್ತರು.

Advertisement

Udayavani is now on Telegram. Click here to join our channel and stay updated with the latest news.

Next