ನವದೆಹಲಿ: ಕೇಂದ್ರ ಲೋಕಸೇವಾ ಆಯೋಗದ ಅಧ್ಯಕ್ಷರಾಗಿದ್ದ ಮನೋಜ್ ಸೋನಿ ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದಾರೆ.
ಇತ್ತ ಟ್ರೈನಿ ಐಎಎಸ್ ಅಧಿಕಾರಿ ಪೂಜಾ ಖೇಡ್ಕರ್ ವಿವಾದದ ಬೆನ್ನಲ್ಲೇ ಮನೋಜ್ ಸೋನಿ ರಾಜೀನಾಮೆ ನೀಡಿರುವುದು ಊಹಾಪೋಹಗಳಿಗೆ ಕಾರಣವಾಗಿದ್ದರೂ ಪೂಜಾ ಖೇಡ್ಕರ್ ವಿವಾದಕ್ಕೂ ಸೋನಿ ರಾಜೀನಾಮೆಗೂ ಯಾವುದೇ ಸಂಬಂಧ ಇಲ್ಲ ಎನ್ನಲಾಗಿದೆ.
ಮನೋಜ್ ಸೋನಿ ಅವರ ಅಧಿಕಾರ ಅವಧಿ 2029ಕ್ಕೆ ಕೊನೆಗೊಳ್ಳಬೇಕಿತ್ತು ಅಂದರೆ ಇನ್ನೂ ಐದು ವರ್ಷಗಳು ಇತ್ತು ಆದರೆ ವೈಯಕ್ತಿಕ ಕಾರಣಗಳಿಂದ ಅಧಿಕಾರಾವಧಿ ಮುಗಿಯುವ ಮೊದಲೇ ರಾಜೀನಾಮೆ ಕೊಟ್ಟಿದ್ದಾರೆ.
2017ರಲ್ಲಿ ಆಯೋಗದ ಸದಸ್ಯರಾಗಿ ಸೇರಿದ್ದ ಸೋನಿ ಅವರನ್ನು ಮೇ 16, 2023ರಂದು ಯುಪಿಎಸ್ಸಿ ಅಧ್ಯಕ್ಷರನ್ನಾಗಿ ನೇಮಕ ಮಾಡಲಾಯಿತು. ಇದರ ಬೆನ್ನಲ್ಲೇ ವೈಯಕ್ತಿಕ ಕಾರಣಗಳಿಂದ ಇದೀಗ ತಮ್ಮ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ ಎನ್ನಲಾಗಿದ್ದು ಸೋನಿ ಅವರ ರಾಜೀನಾಮೆ ಇನ್ನೂ ಅಂಗೀಕಾರಗೊಂಡಿಲ್ಲ ಎನ್ನಲಾಗಿದೆ.
ಯುಪಿಎಸ್‌ಸಿಗೆ ನೇಮಕಗೊಳ್ಳುವ ಮೊದಲು ಸೋನಿ ಅವರು ಡಾ ಬಾಬಾಸಾಹೇಬ್ ಅಂಬೇಡ್ಕರ್ ಮುಕ್ತ ವಿಶ್ವವಿದ್ಯಾಲಯದಲ್ಲಿ (BAOU) ಎರಡು ಅವಧಿಗಳನ್ನು ಒಳಗೊಂಡಂತೆ ಗುಜರಾತ್‌ನ ಎರಡು ವಿಶ್ವವಿದ್ಯಾಲಯಗಳಲ್ಲಿ ಮೂರು ಅವಧಿಗೆ ಉಪಕುಲಪತಿಯಾಗಿ ಸೇವೆ ಸಲ್ಲಿಸಿದ್ದರು.
ಇದನ್ನೂ ಓದಿ: Bangla: ಹಿಂಸಾಚಾರಕ್ಕೆ ನಲುಗಿದ ಬಾಂಗ್ಲಾ-ದೇಶಾದ್ಯಂತ ಕರ್ಫ್ಯೂ ಜಾರಿ: ಭಾರತೀಯರು ವಾಪಸ್