Advertisement

UPS: ನಿವೃತ್ತರಿಗೆ ಆರ್ಥಿಕ ಭದ್ರತೆ ಖಾತರಿಪಡಿಸಿದ ಯುಪಿಎಸ್‌

02:31 AM Aug 26, 2024 | Team Udayavani |

ಕೇಂದ್ರ ಸಚಿವ ಸಂಪುಟ ಏಕೀಕೃತ ಪಿಂಚಣಿ ವ್ಯವಸ್ಥೆ(ಯುಪಿಎಸ್‌)ಯನ್ನು ಜಾರಿಗೆ ತರುವ ನಿರ್ಧಾರ ಕೈಗೊಂಡಿದೆ. ಈ ಮೂಲಕ ವರ್ಷಗಳ ಹಿಂದೆ ಸರಕಾರ ಜಾರಿಗೊಳಿಸಿದ್ದ ರಾಷ್ಟ್ರೀಯ ಪಿಂಚಣಿ ವ್ಯವಸ್ಥೆ(ಎನ್‌ಪಿಎಸ್‌)ಯ ವಿರುದ್ಧದ ನೌಕರರ ಆಕ್ರೋಶವನ್ನು ಶಮನಗೊಳಿಸಲು ಮುಂದಾಗಿದೆ.

Advertisement

ಈ ಹಿಂದಿನ ಹಳೆಯ ಪಿಂಚಣಿ ವ್ಯವಸ್ಥೆ(ಒಪಿಎಸ್‌)ಯ ಬದಲಾಗಿ ಕೇಂದ್ರ ಸರಕಾರ ರಾಷ್ಟ್ರೀಯ ಪಿಂಚಣಿ ವ್ಯವಸ್ಥೆಯನ್ನು ಜಾರಿಗೊಳಿಸಿತ್ತು. ಮಾರುಕಟ್ಟೆ ಅಂದರೆ ಷೇರುಪೇಟೆಯಲ್ಲಿನ ಏರಿಳಿತವನ್ನು ಆಧರಿಸಿ ನಿವೃತ್ತ ನೌಕರರಿಗೆ ಪಿಂಚಣಿ ಮೊತ್ತವನ್ನು ನಿಗದಿಪಡಿಸಲಾಗುತ್ತಿತ್ತು. ಈ ಯೋಜನೆಯಲ್ಲಿ ಖಚಿತ ಪಿಂಚಣಿ ಮೊತ್ತದ ಖಾತರಿ ಇರಲಿಲ್ಲ ಮಾತ್ರವಲ್ಲದೆ ವಿವಿಧ ಸೌಲಭ್ಯಗಳಲ್ಲೂ ಸಾಕಷ್ಟು ವ್ಯತ್ಯಾಸಗಳಿದ್ದವು.

ಈ ಹಿನ್ನೆಲೆಯಲ್ಲಿ ನೌಕರ ವರ್ಗದಿಂದ ಎನ್‌ಪಿಎಸ್‌ಗೆ ದೇಶವ್ಯಾಪಿ ವಿರೋಧ ವ್ಯಕ್ತವಾಗಿತ್ತು. ಈ ವಿಷಯ ರಾಜಕೀಯವಾಗಿಯೂ ಭಾರೀ ಚರ್ಚೆಗೆ ಗ್ರಾಸವಾಗಿತ್ತಲ್ಲದೆ ವಿವಿಧ ರಾಜ್ಯಗಳ ವಿಧಾನಸಭೆ ಮತ್ತು ಪ್ರಸಕ್ತ ವರ್ಷ ನಡೆದ ಲೋಕಸಭೆ ಚುನಾವಣೆಯಲ್ಲೂ ಪ್ರಮುಖ ಚುನಾವಣ ವಿಷಯವಾಗಿ ಮಾರ್ಪಟ್ಟಿತ್ತು. ಬಹುತೇಕ ವಿಪಕ್ಷಗಳು ಎನ್‌ಪಿಎಸ್‌ ಅನ್ನು ರದ್ದುಗೊಳಿಸಿ ಒಪಿಎಸ್‌ ಜಾರಿಗೊಳಿಸುವ ಭರವಸೆಯನ್ನು ನೀಡುತ್ತಲೇ ಬಂದಿದ್ದವು.

ಆಡಳಿತಾರೂಢ ಬಿಜೆಪಿ ನೇತೃತ್ವದ ಎನ್‌ಡಿಎ ಮೈತ್ರಿಕೂಟದ ಮಿತ್ರಪಕ್ಷಗಳು ಕೂಡ ಎನ್‌ಪಿಎಸ್‌ನಲ್ಲಿ ಸೂಕ್ತ ಮಾರ್ಪಾಡುಗಳನ್ನು ಮಾಡಿ ಒಪಿಎಸ್‌ನಲ್ಲಿ ನಿವೃತ್ತ ನೌಕರರಿಗೆ ಸಿಗುತ್ತಿದ್ದ ಸೌಲಭ್ಯಗಳನ್ನು ಒದಗಿಸುವ ಭರವಸೆಯನ್ನು ನೀಡಿದ್ದವು. ಹೀಗಾಗಿ ಬಿಜೆಪಿ ಕೂಡ ಎನ್‌ಪಿಎಸ್‌ನ ಗೊಂದಲಗಳನ್ನು ಬಗೆಹರಿಸಲು ಕೇಂದ್ರ ಹಣಕಾಸು ಕಾರ್ಯದರ್ಶಿ ನೇತೃತ್ವದಲ್ಲಿ ಪರಿಶೀಲನೆಗಾಗಿ ಸಮಿತಿಯೊಂದನ್ನು ರಚಿಸಿ, ಅಗತ್ಯ ಬದಲಾವಣೆಗಳನ್ನು ತರುವಂತೆ ಸೂಚಿಸಿತ್ತು. ಈಗ ಕೇಂದ್ರ ಸರಕಾರ ಸಮಿತಿಯ ಶಿಫಾರಸುಗಳನ್ನು ಆಧರಿಸಿ ರೂಪಿಸಲಾದ ಯುಪಿಎಸ್‌ ಜಾರಿಗೊಳಿಸಲು ನಿರ್ಧರಿಸಿದೆ.

ಹೊಸ ಪಿಂಚಣಿ ಯೋಜನೆಯಲ್ಲಿ ನಿವೃತ್ತ ನೌಕರರಿಗೆ ಖಚಿತ ಪಿಂಚಣಿ, ಕುಟುಂಬ ಪಿಂಚಣಿ ಮತ್ತು ಕನಿಷ್ಠ ಪಿಂಚಣಿ ಲಭಿಸುವುದನ್ನು ಖಾತರಿ ಪಡಿಸಲಾಗಿದೆ. ಮುಂದಿನ ಹಣಕಾಸು ವರ್ಷದ ಆರಂಭದಿಂದ ಈ ಯುಪಿಎಸ್‌ ಜಾರಿಯಾಗಲಿದೆ ಎಂದು ಸರಕಾರ ಘೋಷಿಸಿದೆ. ಇದೇ ವೇಳೆ ಯುಪಿಎಸ್‌ ಮತ್ತು ಎನ್‌ಪಿಎಸ್‌ ನಡುವೆ ಯಾವುದಾದರೂ ಒಂದು ವ್ಯವಸ್ಥೆಯನ್ನು ಆಯ್ಕೆ ಮಾಡಿಕೊಳ್ಳುವ ಅವಕಾಶವನ್ನು ಸರಕಾರ ತನ್ನ ನೌಕರರಿಗೆ ನೀಡಿದೆ. ಹೀಗಾಗಿ ಎನ್‌ಪಿಎಸ್‌ ಹಾಗೆಯೇ ಮುಂದುವರಿಯಲಿದೆ.

Advertisement

ಈಗಾಗಲೇ ಎನ್‌ಪಿಎಸ್‌ ಆಯ್ಕೆ ಮಾಡಿಕೊಂಡಿರುವ ನೌಕರರಿಗೆ ಹೊಸ ವ್ಯವಸ್ಥೆಯ ಜಾರಿಯಲ್ಲಿ
ಇದೇ ವೇಳೆ ಯುಪಿಎಸ್‌ ಜಾರಿಗೆ ತರಲು ರಾಜ್ಯಗಳಿಗೂ ಅವಕಾಶ ಮಾಡಿಕೊಟ್ಟಿದ್ದು, ಹೆಚ್ಚುವರಿ ಹೊರೆಯನ್ನು ಆಯಾ ರಾಜ್ಯ ಸರಕಾರಗಳೇ ಭರಿಸಬೇಕಿದೆ. ಎನ್‌ಪಿಎಸ್‌ಗೆ ಹೋಲಿಸಿದಲ್ಲಿ ಯುಪಿಎಸ್‌ ಹೆಚ್ಚು ನೌಕರಸ್ನೇಹಿಯಾಗಿದೆ. ಆದರೆ ಒಪಿಎಸ್‌ ಮಾದರಿಯ ಸೌಲಭ್ಯಗಳು ಲಭ್ಯವಾಗುವುದಿಲ್ಲವಾದರೂ ನಿಗದಿತ ಮತ್ತು ಕನಿಷ್ಠ ಮೊತ್ತವನ್ನು ನಿವೃತ್ತ ನೌಕರರು ಪಿಂಚಣಿಯಾಗಿ ಪಡೆಯುವುದನ್ನು ಖಾತರಿಪಡಿಸಿದಂತಾಗಿದೆ. ಕೌಟುಂಬಿಕ ಪಿಂಚಣಿಯ ಸೌಲಭ್ಯ ಯುಪಿಎಸ್‌ನಲ್ಲಿನ ಮತ್ತೂಂದು ಗಮನಾರ್ಹ ಅಂಶ.

ಯುಪಿಎಸ್‌ ಜಾರಿ ಘೋಷಣೆಯಾಗುತ್ತಲೇ ಸರಕಾರಿ ನೌಕರರ ಸಂಘಟನೆಗಳಿಂದ ವಿಭಿನ್ನ ಪ್ರತಿಕ್ರಿಯೆ ವ್ಯಕ್ತವಾಗಿವೆ. ಕೆಲವು ಸಂಘಟನೆಗಳು ಹಳೆಯ ವ್ಯವಸ್ಥೆಯನ್ನು ಮರು ಜಾರಿಗೊಳಿಸಲು ಪಟ್ಟುಹಿಡಿದಿವೆ. ಯುಪಿಎಸ್‌ ಜಾರಿಗೆ ತರುವುದರಿಂದ ನೌಕರರಿಗೆ ವಿಶೇಷ ಸೌಲಭ್ಯಗಳೇನೂ ಲಭಿಸದು ಎಂಬುದು ಈ ಸಂಘಟನೆಗಳ ವಾದ. ಆದರೆ ಎನ್‌ಪಿಎಸ್‌ ಬಗೆಗಿನ ಕೇಂದ್ರ ಸರಕಾರಿ ನೌಕರರ ಅಸಮಾಧಾನವನ್ನು ತಣಿಸಲು ಯುಪಿಎಸ್‌ ನೆರವಾದೀತು ಎಂಬುದು ಕೇಂದ್ರ ಸರಕಾರದ ನಿರೀಕ್ಷೆ. ರಾಜ್ಯ ಸರಕಾರಗಳು ಕೂಡ ಒಪಿಎಸ್‌ನ ಮರುಜಾರಿಯ ಬದಲಾಗಿ ಯುಪಿಎಸ್‌ ಜಾರಿಗೆ ಮುಂದಾದಲ್ಲಿ ಬೊಕ್ಕಸದ ಮೇಲಿನ ಹೊರೆ ಬಹಳಷ್ಟು ಕಡಿಮೆಯಾಗಲಿದೆ.

Advertisement

Udayavani is now on Telegram. Click here to join our channel and stay updated with the latest news.

Next