Advertisement

‘ನಿಮ್ಮ ಕಣ್ಣಲ್ಲಿ ಕಣ್ಣಿಟ್ಟು ಮಾತನಾಡುವ ಬಯಕೆಯಾಗುತ್ತಿದೆ!’

08:24 AM Jul 26, 2019 | Hari Prasad |

ನವದೆಹಲಿ: ಸದಾ ತನ್ನ ವಿವಾದಾತ್ಮಕ ಹೇಳಿಕೆಗಳಿಂದಲೇ ವಿವಾದ ಸೃಷ್ಟಿಸುತ್ತಿರುವ ಸಮಾಜವಾದಿ ಪಕ್ಷದ ಸಂಸದ ಅಜಂ ಖಾನ್ ಅವರು ಇಂದು ಲೋಕಸಭೆಯಲ್ಲಿ ತಪ್ಪಿ ಮಾತನಾಡಿ ಪೇಚಿಗೆ ಸಿಲುಕಿಕೊಂಡಿದ್ದಾರೆ.

Advertisement

ತ್ರಿವಳಿ ತಲಾಖ್ ಮೇಲಿನ ಚರ್ಚೆಯಲ್ಲಿ ಭಾಗವಹಿಸಿ ಮಾತನಾಡುತ್ತಿದ್ದ ಸಂದರ್ಭದಲ್ಲಿ ಅಜಂ ಖಾನ್ ಅವರ ಮಾತಿಗೆ ಆಡಳಿತ ಪಕ್ಷದ ಸದಸ್ಯರು ಪದೇ ಪದೇ ಅಡ್ಡಿಪಡಿಸುತ್ತಿದ್ದರು. ಆಗ ಸಭಾದ್ಯಕ್ಷರ ಸ್ಥಾನದಲ್ಲಿದ್ದ ಭಾರತೀಯ ಜನತಾ ಪಕ್ಷದ ಸಂಸದೆ ರಮಾ ದೇವಿ ಅವರು ಸದಸ್ಯರ ಗದ್ದಲಕ್ಕೆ ಗಮನಕೊಡದೇ ತಮ್ಮನ್ನು ಉದ್ದೇಶಿಸಿ ಮಾತನಾಡುವಂತೆ ತಿಳಿಸಿದರು.

ಈ ಸಂದರ್ಭದಲ್ಲಿ ಅಜಂ ಖಾನ್ ಅವರಿಂದ ಈ ಆಕ್ಷೇಪಾರ್ಹ ಮಾತು ಹೊರಬಂತು. ಸಭಾಧ್ಯಕ್ಷೆ ರಮಾದೇವಿಯವರನ್ನು ಉದ್ದೇಶಿಸಿ ಅಜಂ ಖಾನ್ ಅವರು ‘ಆಪ್ ಕೀ ಆಂಖೋ ಮೇ ಆಂಖೇ ಡಾಲ್ ಕೇ ಬಾತ್ ಕರ್ ನೇ ಕಾ ಮನ್ ಕರ್ ತಾ ಹೈ’ (ನಿಮ್ಮ ಕಣ್ಣಲ್ಲಿ ಕಣ್ಣನಿಟ್ಟು ಮಾತನಾಡುವ ಬಯಕೆ ಉಂಟಾಗುತ್ತಿದೆ) ಎಂದು ಹೆಳಿದರು.

ಇದಕ್ಕೆ ತಕ್ಷಣ ಪ್ರತಿಕ್ರಿಯಿಸಿದ ಸಭಾಧ್ಯಕ್ಷರ ಪೀಠದಲ್ಲಿದ್ದ ರಮಾದೇವಿ ಅವರು ‘ಇದು ಮಾತನಾಡುವ ರೀತಿ ಅಲ್ಲ, ಮತ್ತು ಈ ಮಾತುಗಳನ್ನು ಕಡತದಿಂದ ತೆಗೆದು ಹಾಕಿ’ ಎಂದು ಸೂಚನೆ ಕೊಟ್ಟರು. ತಕ್ಷಣ ತನ್ನ ತಪ್ಪನ್ನು ಅರ್ಥ ಮಾಡಿಕೊಂಡ ಸಂಸದ ಅಜಂ ಖಾನ್ ‘ನಿಮ್ಮ ಬಗ್ಗೆ ಅಪಾರವಾದ ಗೌರವ ಇದೆ ; ನೀವು ನನ್ನ ಸಹೋದರಿ ಇದ್ದ ಹಾಗೆ’ ಎಂದು ಹೇಳಿ ಪ್ರಕರಣಕ್ಕೆ ತೆರ ಎಳೆಯಲು ಪ್ರಯತ್ನಿಸಿದರು.

ಆದರೆ ಅಜಂ ಖಾನ್ ಅವರ ಈ ಹೇಳಿಕೆ ಬಿಜೆಪಿ ಸಂಸದರನ್ನು ಕೆರಳಿಸಿತು ಮತ್ತು ಸಂಸತ್ ಗದ್ದಲದ ಗೂಡಾಯಿತು. ಆದರೆ ಅಜಂ ಖಾನ್ ಅವರು ಮಾತನಾಡಿ ನಾನು ಯಾವುದೇ ರೀತಿಯಲ್ಲಿ ಅಸಾಂವಿಧಾನಕ ಪದ ಬಳಕೆ ಮಾಡಿಲ್ಲ ಹಾಗೇನಾದರೂ ಮಾಡಿದ್ದಲ್ಲಿ ನನ್ನ ಸಂಸದ ಸ್ಥಾನಕ್ಕೆ ಈಗಲೇ ರಾಜೀನಾಮೆ ಕೊಡುತ್ತೇನೆ ಎಂದು ಹೇಳಿದರು. ಅಜಂ ಖಾನ್ ಅವರನ್ನು ಸಮಾಜವಾದಿ ಪಕ್ಷದ ನಾಯಕ ಅಖಿಲೇಶ್ ಯಾದವ್ ಅವರೂ ಸಹ ಸಮರ್ಥಿಸಿಕೊಂಡಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next