Advertisement

Uppunda: ಪಾಳು ಕೆರೆ ಈಗ ಈಜುಕೊಳ!; ಚೌಂಡಿ ಕೆರೆಗೆ ಊರಿನ ಯುವಕರಿಂದ ಕಾಯಕಲ್ಪ

01:25 PM Dec 26, 2024 | Team Udayavani |

ಉಪ್ಪುಂದ: ಸ್ಥಳೀಯ ಯುವಕರು ಹಾಗೂ ಸಂಘ ಸಂಸ್ಥೆಗಳು ಮನಸ್ಸು ಮಾಡಿದರೆ ಕ್ರಾಂತಿಯನ್ನೇ ಮಾಡಬಹುದು ಎನ್ನುವುದಕ್ಕೆ ಉದಾಹರಣೆ ಉಪ್ಪುಂದದ ಚೌಂಡಿಕೆರೆ! ದಂಡೆ ಒಡೆದು ಉಪ್ಪು ನೀರು ತುಂಬಿ ಪಾಳು ಬಿದ್ದಿದ್ದ ಕೆರೆಯನ್ನು ಇದೀಗ ಯುವಕರು ಸೇರಿ ಸಿಹಿ ನೀರ ಕೊಳಗವಾಗಿ ಪರಿವರ್ತಿಸಿದ್ದಾರೆ. ಇದು ಈಗ ಇಲ್ಲಿನ ಯುವಕರ ಪಾಲಿಗೆ ಈಜುಕೊಳವಾಗಿದೆ.

Advertisement

ಉಪ್ಪುಂದ ಗ್ರಾ.ಪಂ. ವ್ಯಾಪ್ತಿಯ 4ನೇ ವಾರ್ಡ್‌ನಲ್ಲಿ ಇರುವ ಚೌಂಡಿ ಕೆರೆಗೆ ಕಾಯಕಲ್ಪ ನೀಡಿದವರು ಫಿಶರೀಸ್‌ ಕಾಲನಿಯ ಆಸರೆ ಬಳಗದ ಅಧ್ಯಕ್ಷ ಜಯರಾಮ ಖಾರ್ವಿ ಹಾಗೂ ಯುವಕ ತಂಡ.

ಚೌಂಡಿ ಕೆರೆ ಹಿಂದಿನಿಂದಲೂ ನಿರ್ಲಕ್ಷ್ಯ ದಿಂದ ಮೂಲೆಗುಂಪಾಗಿತ್ತು. ಕೆರೆಯ ದಂಡೆಗಳು ಒಡೆದು ಹೋಗಿ ಉಪ್ಪು ನೀರು ತುಂಬಿ ಬಳಕೆಗೆ ಅಯೋಗ್ಯವಾಗಿತ್ತು. ಕೆರೆಯ ತುಂಬ ಪ್ಲಾಸ್ಟಿಕ್‌ ತ್ಯಾಜ್ಯ ತುಂಬಿತ್ತು. ಕಸ ಕಡ್ಡಿಗಳು ತುಂಬಿ ಕೊಳಚೆ ಗುಂಡಿಯಂತಾಗಿತ್ತು. ಇದನ್ನು ಗಮನಿಸಿದ ಜಯರಾಮ ಖಾರ್ವಿ ಅವರು ಆಡಳಿತ ಗಮನಕ್ಕೆ ತಂದರೂ ಯಾವುದೇ ಪ್ರಯೋಜನವಾಗಿರಲಿಲ್ಲ. ಕೊನೆಗೆ ಆಸರೆ ಬಳಗದವರು ವಿಶೇಷ ಮತುವರ್ಜಿ ವಹಿಸಿ, ಸ್ಥಳೀಯ ಯುವಕರನ್ನು ಒಗ್ಗೂಡಿಸಿಕೊಂಡು ಕೆರೆಗೆ ಕಾಯಕಲ್ಪ ನೀಡಿದರು.

ಕಾಯಕಲ್ಪದ ಸಾಹಸ ನಡೆದದ್ದು ಹೀಗೆ!
– ಕೆರೆಗೆ ಹೊಸ ಸ್ಪರ್ಶ ನೀಡಬೇಕು ಎನ್ನುವ ಆಲೋಚನೆ ಇದ್ದರೂ ಅದು ಅಷ್ಟು ಸುಲಭವಾಗಿರಲಿಲ್ಲ.
– ಅದೆಷ್ಟೋ ವರ್ಷಗಳಿಂದ ತುಂಬಿದ ಹೂಳು, ಒಡೆದುಹೋದ ಕೆರೆಯ ದಂಡೆ, ಸುತ್ತಲೂ ಬೆಳೆದ ಗಿಡ ಗಂಟಿಗಳನ್ನು ಸ್ವತ್ಛಗೊಳಿಸುವುದೇ ಸಾಹಸವಾಗಿತ್ತು.
– ಸಮುದ್ರ ವ್ಯಾಪ್ತಿಯ ಪ್ರದೇಶವಾಗಿರುವುದರಿಂದ ಭರತ-ಇಳಿತದ ವೇಳೆ ನುಗ್ಗುತ್ತಿದ್ದ ಉಪ್ಪು ನೀರನ್ನು ತಡೆಯಲು ತಡೆಗೋಡೆ ಗಟ್ಟಿಗೊಳಿಸಬೇಕಿತ್ತು.
– ತಡೆಗೋಡೆಗೆ ಸಾಕಷ್ಟು ಮಣ್ಣಿನ ಆವಶ್ಯಕತೆ ಇದಾಗ ನಾಗಪ್ಪ ಗಾಣಿಗ ಅವರು ಸೇವಾ ರೂಪದಲ್ಲಿ ಮಣ್ಣು ನೀಡಿದರು.
– ನಿರಂತರ ಪ್ರಯತ್ನದ ಮೂಲಕ ಹಲವು ದಿನಗಳ ಶ್ರಮದಾನದ ಮೂಲಕ ಕೆರೆಗೆ ಕಾಯಕಲ್ಪ ನೀಡಲಾಗಿದೆ.

ಆಸನ ವ್ಯವಸ್ಥೆ ಆಗಬೇಕಿದೆ
ಈ ಕೆರೆಯನ್ನು ಸಂರಕ್ಷಣೆ ಮಾಡಿದರೆ ಈ ಭಾಗದಲ್ಲಿನ ಬಾವಿಗಳಲ್ಲಿನ ಉಪ್ಪು ನೀರಿನ ಸಮಸ್ಯೆಗೆ ಪರಿಹಾರ ದೊರೆಯಲಿದೆ. ಸುತ್ತಲು ಕಲ್ಲಿನ ತಡಗೋಡೆ ನಿರ್ಮಾಣ, ವಿದ್ಯುತ್‌ ದೀಪದ ವ್ಯವಸ್ಥೆ, ಕೆರೆಯ ಸುತ್ತಲೂ ವಾಯು ವಿಹಾರಕ್ಕೆ ಅವಕಾಶವಿದೆ. ಕುಳಿತುಕೊಳ್ಳಲು ಆಸನದ ವ್ಯವಸ್ಥೆ ಮಾಡಿದರೆ ಸಹಾಯಕ. ಇದಕ್ಕೆ ಸಂಬಂಧಪಟ್ಟ ಇಲಾಖೆಯವರು ಗಮನ ಹರಿಸಬೇಕು.
– ಜಯರಾಮ ಖಾರ್ವಿ ಉಪ್ಪುಂದ, ಆಸರೆ ಬಳಗದ ಅಧ್ಯಕ್ಷ

Advertisement

ಪಾಳುಬಿದ್ದಿದ್ದ ಕೆರೆ ಈಗ ಹೇಗಿದೆ?
– ಕೆರೆಗೆ ಬರುತ್ತಿದ್ದ ಉಪ್ಪು ನೀರನ್ನು ತಡೆಗಟ್ಟಿದ್ದರಿಂದ ಸಿಹಿ ನೀರಿನ ಸಂಗ್ರಹ ಹೆಚ್ಚಳವಾಗಿದೆ. ಪರಿಸರದ ಬಾವಿಗಳ ನೀರಿನ ಮಟ್ಟ ಹೆಚ್ಚಲಿದೆ.
– ಕೆರೆಯ ಹೂಳುಗಳನ್ನು ತೆಗೆದು ದಂಡೆಗೆ ಬಳಸಿ ಕೊಂಡ ಪರಿಣಾಮ ಕೆರೆಯ ಗಾತ್ರ ಹೆಚ್ಚಿದೆ.
– ಸಿಹಿ ನೀರಿನ ಸಂಗ್ರಹವಾಗಿದ್ದರಿಂದ ಕೃಷಿಕರು ನೀರನ್ನು ತೋಟಗಳಿಗೆ ಬಳಕೆ ಮಾಡಿಕೊಳ್ಳುತ್ತಿದ್ದಾರೆ.
ಮುಂದೇನು ಆಗಬೇಕು?
– ಕೆರೆಯ ದಂಡೆಯನ್ನು ಇನ್ನಷ್ಟು ವಿಸ್ತರಿಸಿದರೆ ನೀರಿನ ಸಂಗ್ರಹ ಹೆಚ್ಚಲಿದ್ದು, ಕೃಷಿ ಬಳಕೆಗೆ ಸಹಾಯಕ.
– ಭರತದ ವೇಳೆ ತಡೆಗಳು ಒಡೆದು ಹೋಗಿ ಉಪ್ಪು ನೀರು ನುಗ್ಗುತ್ತದೆ. ಶಾಶ್ವತ ತಡೆಗೋಡೆ ಬೇಕಾಗಿದೆ.

ಕೃಷ್ಣ ಬಿಜೂರು

Advertisement

Udayavani is now on Telegram. Click here to join our channel and stay updated with the latest news.

Next