Advertisement

Uppunda: ಶ್ರೀದುರ್ಗಾಪರಮೇಶ್ವರಿ ಅಮ್ಮನವರ ಸಂಭ್ರಮದ ಮನ್ಮಹಾರಥೋತ್ಸವ

01:44 AM Nov 17, 2024 | Team Udayavani |

ಉಪ್ಪುಂದ: ಇತಿಹಾಸ ಪ್ರಸಿದ್ಧ ಶ್ರೀ ದುರ್ಗಾಪರಮೇಶ್ವರಿ ಅಮ್ಮನವರ ವಾರ್ಷಿಕ ಮನ್ಮಹಾರಥೋತ್ಸವ “ಉಪ್ಪುಂದ ಕೊಡಿಹಬ್ಬ’ವು ಶನಿವಾರ ಸಡಗರ ಸಂಭ್ರಮದಿಂದ ಜರಗಿತು.

Advertisement

ದೇಗುಲದ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಸತೀಶ ಶೆಟ್ಟಿ, ಪ್ರಭಾರ ಕಾರ್ಯ ನಿರ್ವಹಣಾಧಿಕಾರಿ ಸುದರ್ಶನ ಎಸ್‌. ಇವರ ಉಸ್ತುವಾರಿ ಹಾಗೂ ತಂತ್ರಿ ಶ್ರೀನಿವಾಸ ಅಡಿಗ ಮಾರ್ಗದರ್ಶನದಲ್ಲಿ ಪ್ರಧಾನ ಅರ್ಚಕ ಪ್ರಕಾಶ ಉಡುಪ ನೇತೃತ್ವದ ವೈದಿಕ ತಂಡದವರಿಂದ ದೇವರಿಗೆ ಪಂಚಾಮೃತ ಅಭಿಷೇಕ, ವಿಶೇಷ ಭೂತಬಲಿ, ರಥ ಶುದ್ಧಿಹೋಮ, ಅನಂತರ ರಥಬಲಿ, ರಥಾರೋಹಣ ಸಹಿತ ಹಲವು ಧಾರ್ಮಿಕ ವಿಧಿ ವಿಧಾನಗಳು ನಡೆದವು. ಮಧ್ಯಾಹ್ನ ದೇಗುಲದ ಸಭಾಭವನದಲ್ಲಿ ಸಹಸ್ರಾರು ಸಂಖ್ಯೆಯಲ್ಲಿ ಭಕ್ತರು ಅನ್ನಪ್ರಸಾದ ಸ್ವೀಕರಿಸಿದರು. ಸಂಜೆ ಉಪ್ಪುಂದ ಶ್ರೀ ದುರ್ಗಾಪರಮೇಶ್ವರಿ ದೇವಿಯ ಮನ್ಮಹಾರಥೋತ್ಸವ ನಡೆಯಿತು.

ಕರಾವಳಿಯ ಅತಿದೊಡ್ಡ ಜಾತ್ರೆ
ಕರಾವಳಿಯ ಅತಿದೊಡ್ಡ ಜಾತ್ರೆ ಆಗಿರುವ ಕೋಟೇಶ್ವರದ ಕೊಡಿಹಬ್ಬ ಮತ್ತು ಉಪ್ಪುಂದ ಕೊಡಿಹಬ್ಬ ಈ ಬಾರಿ ಹಿಂದೆ ಮುಂದೆ ಆಗಿದೆ. ಕೋಟೇಶ್ವರ ಕೊಡಿಹಬ್ಬದ ಮರುದಿನವೇ ಉಪ್ಪುಂದ ಕೊಡಿಹಬ್ಬ ನಡೆಯುವುದು ವಾಡಿಕೆ. ಆದರೆ ಈ ಬಾರಿ ಉಪ್ಪುಂದ ಕೊಡಿಹಬ್ಬ ಮೊದಲಿಗೆ ಬಂದಿದ್ದು ತಿಂಗಳ ಬಳಿಕ ಕೋಟೇಶ್ವರ ಕೊಡಿಹಬ್ಬ ನಡೆಯಲಿದೆ. 35 ವರ್ಷಗಳಿಗೊಮ್ಮೆ ಈ ರೀತಿ ಘಟಿಸುತ್ತದೆ ಎಂದು ಹಿರಿಯ ಅರ್ಚಕರು ತಿಳಿಸಿದರು.

ಉಪ್ಪುಂದ ಕೊಡಿಹಬ್ಬವು ಕೊಡಿ ಅರಳಿಸುವ ಹಬ್ಬ ಎಂದೇ ಖ್ಯಾತಿವೆತ್ತಿದೆ. ಈ ಜಾತ್ರೆಯಲ್ಲಿ ಅಸಂಖ್ಯ ಭಕ್ತರು ದೇವರ ಪ್ರೀತ್ಯಾರ್ಥ ಕಬ್ಬು ಖರೀದಿಸಿ ಮನೆಗೆ ಕೊಂಡೊಯ್ಯುವ ಪದ್ಧತಿ ಇದೆ. ಜಾತ್ರೆಗೆ ಹೋಗುವವರು ಕಬ್ಬು (ಕೊಡಿ) ತರುವುದು ಶುಭ. ಅದರಲ್ಲಿ ನವದಂಪತಿ ಕೊಡಿ ತರುವ ಸಂಪ್ರ ದಾಯ ಇಂದಿಗೂ ಚಾಲ್ತಿಯಲ್ಲಿದೆ.

ದೇವಿಗೆ ಹರಕೆ ರೂಪದಲ್ಲಿ ಬಂದ ಸೀರೆಗಳನ್ನು ಬಹಿರಂಗ ಹರಾಜು ಮಾಡಲಾಯಿತು. ಸಂಜೆ ನಡೆದ ರಥೋತ್ಸವದಲ್ಲಿ ಸಹಸ್ರಾರು ಭಕ್ತರು ರಥ ಎಳೆದು ಸಂಭ್ರಮಿಸಿದ್ದಾರೆ. ರಾತ್ರಿ ದೇವರ ಅವಭೃಥ ಸ್ನಾನ ನಡೆಯಿತು. ದೇಗುಲಕ್ಕೆ ಆಗಮಿಸುವ ಎಲ್ಲ ಮಾರ್ಗಗಳಲ್ಲಿ ಪೊಲೀಸರು ಬಂದೋಬಸ್ತ್ ಮಾಡಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next