Advertisement

ಉಪ್ಪುಂದ: ಶಿಥಿಲ ಕಟ್ಟಡದಲ್ಲಿ ಅಂಗನವಾಡಿ ಕೇಂದ್ರ

12:30 AM Jan 18, 2019 | |

ಉಪ್ಪುಂದ: ಉಪ್ಪುಂದ ಗ್ರಾಮ ಪಂಚಾಯತ್‌ನ ತುಮಿನಹಿತ್ಲು ಸಮೀಪ ಶಿಥಿಲ ಗೊಂಡ ಹಳೆಯ ಕಟ್ಟಡದಲ್ಲೇ ಅಂಗನವಾಡಿ ಕೇಂದ್ರ ಕಾರ್ಯನಿರ್ವ ಹಿಸುತ್ತಿದ್ದು, ಮಕ್ಕಳು ಅಪಾಯದಲ್ಲೇ ಇರುವಂತಾಗಿದೆ.
  
9ನೇ ವಾರ್ಡ್‌ನ ಸುತ್ತಮುತ್ತಲಿನ ಪ್ರದೇಶದ ಸುಮಾರು 45 ಪುಟಾಣಿ ಮಕ್ಕಳು ಕಳೆದ 2ವರ್ಷಗಳಿಂದ ಶಿಥಿಲಗೊಂಡಿರುವ ಹಳೆಯ ಕಟ್ಟಡದಲ್ಲಿಯೇ ಶಿಕ್ಷಣ ಪಡೆಯುತ್ತಿದ್ದಾರೆ.

Advertisement

ಬಿರುಕುಬಿಟ್ಟ ಗೋಡೆ 
ಗೋಡೆಗಳಲ್ಲಿ ಬಿರುಕುಬಿಟ್ಟಿದ್ದು, ಅಲ್ಲಲ್ಲಿ ಗಾರೆ ಕಳಚಿ ಬಿದ್ದಿದೆ. ಮೇಲ್ಭಾಗ ತಗಡಿನ ಮೇಲೆ ಪ್ಲಾಸ್ಟಿಕ್‌ ಹೊದಿಕೆ ಇದ್ದು ಹಾರಿ ಹೋಗ ದಂತೆ ಶಿಲೆ ಕಲ್ಲುಗಳನ್ನು ಇಡಲಾಗಿದ್ದು, ತೀರ ಅಪಾಯಕಾರಿಯಾಗಿದೆ.  

ಹಳೆಯ ಕಟ್ಟಡದಿಂದ ಶಿಫ್ಟ್  
ಮೊದಲು ನದಿಕಂಠ ಬಳಿಯ ಕಟ್ಟಡದಲ್ಲಿ ಅಂಗನವಾಡಿ ಕೇಂದ್ರ ಕಾರ್ಯನಿರ್ವಹಿಸುತ್ತಿತ್ತು. ಕಟ್ಟಡವು ಅಪಾಯದ ಸ್ಥಿತಿಗೆ ತಲುಪಿದ ಪರಿಣಾಮ ಕಟ್ಟಡದ ಮಾಲಕ ಫಿಲಿಪ್‌ ಲೋಬೋ ಅವರು ಮಕ್ಕಳನ್ನು ಸ್ಥಳಾಂತರಿಸಲು ಸೂಚಿಸಿದರು. ಬೇರೆ ಸ್ಥಳಾವಕಾಶ ಸಿಗದೇ ಈ ಹಳೆಯ ಕಟ್ಟಡದಲ್ಲಿ ತಾತ್ಕಾಲಿಕವಾಗಿ ಅಂಗನವಾಡಿ ತೆರೆಯಲಾಗಿತ್ತು. ಕಟ್ಟಡದ ಸುತ್ತಲೂ ನೀರು ನಿಲ್ಲುವ ಜಾಗವಿದ್ದು, ಮಕ್ಕಳು ಹೋಗದಂತೆ ಕೆಂಪು ಕಲ್ಲು ಇಡಲಾಗಿದೆ. ಮಕ್ಕಳು ಹೊರಹೋಗದಂತೆ ಕಾಯಬೇಕಾದ ಪರಿಸ್ಥಿತಿ ಇದೆ.  

ಅಂಗನವಾಡಿಯಲ್ಲಿ ಸೂಕ್ತ ಶೌಚಾಲಯ ವ್ಯವಸ್ಥೆಯೂ ಇಲ್ಲ. ಕಟ್ಟಡದ ಹಿಂಭಾಗದಲ್ಲಿ ಒಂದು ಶೌಚಾಲಯ ಇದ್ದರೂ ಬೀಳುವ ಹಂತದಲ್ಲಿದೆ. 
 
ವಿದ್ಯುತ್‌ ಇಲ್ಲ
ಮಳೆಗಾಲದಲ್ಲಿ ಮಳೆ ನೀರು ಸೋರುತ್ತಿದ್ದರೆ, ಎಪ್ರಿಲ್‌, ಮೇ ತಿಂಗಳು ಬಂದರೆ ಮಕ್ಕಳು ಸೆಕೆಯಲ್ಲಿ ಬೇಯುವಂತಾಗಿದೆ. ಸಿಮೆಂಟ್‌ ಶೀಟ್‌ ಹಾಕಿರುವುದರಿಂದ ಇಲ್ಲಿ ಕೂರುವುದೇ ಅಸಾಧ್ಯವಾಗಿದೆ. ಜತೆಗೆ ವಿದ್ಯುತ್‌ ಇಲ್ಲದ್ದರಿಂದ ಫ್ಯಾನ್‌ ವ್ಯವಸ್ಥೆಯೂ ಇಲ್ಲ.  ಉಪ್ಪುಂದ ಗ್ರಾ.ಪಂ. ವತಿಯಿಂದ ಒಂದು ನಳ್ಳಿ ಹಾಗೂ ನೆಲ ಹಾಸು ಹಾಕಿಸಿಕೊಟ್ಟಿರುವುದು ಎರಡು ವರ್ಷಗಳಲ್ಲಿ ಆದ ಪ್ರಗತಿ ಬಿಟ್ಟರೆ ಬೇರೆ ಏನೂಆಗಿಲ್ಲ.

ಅಂಗನವಾಡಿ ಕಟ್ಟಡ ನಿರ್ಮಿಸಲು ಸ್ಥಳೀಯರಾದ ತುಮಿನಹಿತ್ಲು ಮರ್ಲಿ ಅವರ ಮಕ್ಕಳು 10 ಸೆಂಟ್ಸ್‌ ಜಾಗವನ್ನು ದಾನವಾಗಿ ನೀಡಲು ಮುಂದೆ ಬಂದಿದ್ದಾರೆ. ಆದರೆ ದಾನಪತ್ರಕ್ಕೆ ದಾಖಲೆ ಬದಲಾವಣೆ ಮಾಡಬೇಕಿದ್ದು, ಇದಕ್ಕಾಗಿ ಇಲಾಖೆಗೆ ಅರ್ಜಿ ಸಲ್ಲಿಸಲಾಗಿದೆ. ಆರ್‌ಟಿಸಿ ಬದ ಲಾವಣೆಗೆ ಇಲಾಖೆಯಲ್ಲಿ ವಿಳಂಬಧೋರಣೆ ಅನುಸರಿಸ ಲಾಗುತ್ತಿದೆ ಎನ್ನಲಾಗಿದೆ.  
2 ವರ್ಷಗಳಿಂದ ಮಕ್ಕಳು ಅಪಾಯದಲ್ಲೇ ಶಿಕ್ಷಣ ಪಡೆಯುತ್ತಿದ್ದರೂ ಸಮಸ್ಯೆ ಬಗೆಹರಿಸಲು ಸಂಬಂಧಪಟ್ಟ ಇಲಾಖಾ ಅಧಿಕಾರಿಗಳು, ಜನಪ್ರತಿನಿಧಿಗಳು ತುರ್ತು ಕ್ರಮ ಕೈಗೊಳ್ಳದಿರುವುದು ಗ್ರಾಮಸ್ಥರಿಗೆ ತೀವ್ರ ಅಸಮಾಧಾನ ಮೂಡಿಸಿದೆ. 

Advertisement

ಅನುದಾನ ಸಿಕ್ಕಿಲ್ಲ
ಅಂಗನವಾಡಿಗೆ ದಾನವಾಗಿ ನೀಡಿದ ಜಾಗದ ಆರ್‌ಟಿಸಿ ಬದಲಾವಣೆ ಆಗಿಲ್ಲ. ಇದಕ್ಕಾಗಿ ಅರ್ಜಿ ಸಲ್ಲಿಸಿ ಒಂದು ವರ್ಷ ಕಳೆದಿದೆ. ಈ ಸಮಸ್ಯೆ ಬಗೆಹರಿದ ಅನಂತರವೇ ಕಟ್ಟಡ ನಿರ್ಮಿಸಲು ಅನುದಾನ ದೊರೆಯಲು ಸಾಧ್ಯ ಎನ್ನುತ್ತಾರೆ ಇಲಾಖೆಯವರು.
– ಚಂದ್ರಮತಿ, ಅಂಗನವಾಡಿ ಶಿಕ್ಷಕಿ

ಬೇರೆ ಸರಕಾರಿ ಕಟ್ಟಡವಿಲ್ಲ
ಗ್ರಾ.ಪಂ.ವ್ಯಾಪ್ತಿಯಲ್ಲಿ ಇತರೆ ಯಾವುದೇ ಸರಕಾರಿ ಕಟ್ಟಡ ಇಲ್ಲದಿರುವುದರಿಂದ ಅದೇ ಕಟ್ಟಡದಲ್ಲಿ ಮಕ್ಕಳ ಶಿಕ್ಷಣ ಮುಂದುವರಿಸುವುದು ಅನಿವಾರ್ಯ. ಜಾಗ ಕೊಡುವವರು ದಾನ ಪತ್ರವನ್ನು ಪಂಚಾಯತ್‌ಗೆ ಹಸ್ತಾಂತರಿಸಬೇಕು. ಆರ್‌ಟಿಸಿ ಬದಲಾವಣೆಗಾಗಿ ಕಂದಾಯ ಇಲಾಖೆಗೆ ಅರ್ಜಿ ನೀಡಲಾಗಿದ್ದು  4 ತಿಂಗಳಲ್ಲಿ ಪೂರ್ಣಗೊಳ್ಳಬಹುದು. ಬಳಿಕ ಸರಕಾರಕ್ಕೆ ಹೊಸ ಕಟ್ಟಡ ರಚನೆಯ ಅನುದಾನಕ್ಕಾಗಿ ಪ್ರಸ್ತಾವನೆ ಸಲ್ಲಿಸಲು ಸಾಧ್ಯ.
 - ಹರೀಶ ಮೋಗವಿರ ,
ಪಿಡಿಒ, ಗ್ರಾ.ಪಂ.ಉಪ್ಪುಂದ

– ಕೃಷ್ಣ ಬಿಜೂರು

Advertisement

Udayavani is now on Telegram. Click here to join our channel and stay updated with the latest news.

Next