ಕೆಲವು ನಟ, ನಿರ್ದೇಶಕರ ಸಿನಿಮಾಗಳು ಬಿಡುಗಡೆಗೆ ಮುನ್ನವೇ ಒಂದಷ್ಟು ಕುತೂಹಲ,
ನಿರೀಕ್ಷೆ ಹುಟ್ಟಿಸಿರುತ್ತವೆ. ಆ ಸಾಲಿಗೆ ಉಪೇಂದ್ರ ಹಾಗೂ ಆರ್.ಚಂದ್ರು ಕೂಡಾ ಸೇರುತ್ತಾರೆ.
ಉಪೇಂದ್ರ ನಾಯಕರಾಗಿರುವ “ಐ ಲವ್ ಯು’ ಚಿತ್ರವನ್ನು ಆರ್.ಚಂದ್ರು ನಿರ್ಮಿಸಿ, ನಿರ್ದೇಶಿಸಿದ್ದಾರೆ. ಚಿತ್ರ ಇಂದು ಬಿಡುಗಡೆಯಾಗುತ್ತಿದೆ. ಕನ್ನಡ ಹಾಗೂ ತೆಲುಗಿನಲ್ಲಿ ಬಿಡುಗಡೆಯಾಗುತ್ತಿರುವ
ಚಿತ್ರದ ಬಗ್ಗೆ ನಿರ್ದೇಶಕ ಆರ್.ಚಂದ್ರು ಇಲ್ಲಿ ಮಾತನಾಡಿದ್ದಾರೆ
ಜನ ನಿಮ್ಮ “ಐ ಲವ್ ಯು’ ಸಿನಿಮಾವನ್ನು ಯಾಕೆ ನೋಡಬೇಕು ಎಂಬ ಪ್ರಶ್ನೆಯನ್ನು ನಿರ್ದೇಶಕ ಆರ್.ಚಂದ್ರು ಮುಂದಿಟ್ಟಾಗ ಚಂದ್ರು ಕೊಡುವ ಐದು ಕಾರಣಗಳಿವು. “ಐ ಲವ್ ಯು’ ಚಿತ್ರದಲ್ಲಿ ಪ್ರೀತಿಗೆ ಹೊಸ ವ್ಯಾಖ್ಯಾನದ ಜೊತೆಗೆ ಟ್ರೆಂಡಿ ಲವ್‌ಸ್ಟೋರಿಯನ್ನು ಚಂದ್ರು ಕೊಡುವ ಪ್ರಯತ್ನ ಮಾಡಿದ್ದಾರಂತೆ. ಹೌದು, ಚಂದ್ರು ಅವರ ಈ ಹಿಂದಿನ ಸಿನಿಮಾಗಳನ್ನು ನೋಡಿಕೊಂಡು ಬಂದವರಿಗೆ, “ಐ ಲವ್ ಯು’ ಚಿತ್ರ ಹೊಸ ಬಗೆಯಲ್ಲಿ ಕಾಣುತ್ತದೆ. ಈಗಾಗಲೇ ಬಿಡುಗಡೆಯಾಗಿರುವ ಟ್ರೇಲರ್, ಹಾಡು ಎಲ್ಲದರಲ್ಲೂ ಚಂದ್ರು ತಮ್ಮ ಸ್ಟೈಲ್ ಜೊತೆ ಇನ್ನೇನೋ ಅಂಶವನ್ನು ಸೇರಿಸಿಕೊಂಡಿದ್ದಾರೆ. ಆ ಅಂಶ ಯಾವುದೆಂಬ ಪ್ರಶ್ನೆಯನ್ನು ಕೇಳಿದರೆ ಉಪ್ಪಿ ಸ್ಟೈಲ್ ಎಂಬ ಉತ್ತರ ಬರುತ್ತದೆ. ಉಪೇಂದ್ರ ನಿರ್ದೇಶನದ ಹಾಗೂ ನಟನೆಯ ಸಿನಿಮಾಗಳನ್ನು ನೀವು ನೋಡಿದ್ದರೆ ಅಲ್ಲಿ ಬೋಲ್ಡ್ ಅಂಶಗಳು ಕಾಣುತ್ತವೆ. ಇದ್ದಿದ್ದನ್ನು ಇದ್ದಂಗೆ ನೇರವಾಗಿ ಹೇಳುವುದು ಉಪ್ಪಿ ಸ್ಟೈಲ್. ಚಂದ್ರು ತಮ್ಮ “ಐ ಲವ್ ಯು’ ಚಿತ್ರದಲ್ಲಿ ಆ ಅಂಶವನ್ನೂ ಸೇರಿಸಿಕೊಂಡು ಸಿನಿಮಾ ಕಟ್ಟಿಕೊಟ್ಟಿದ್ದಾರಂತೆ.
“ಇದು ಹೊಸ ಬಗೆಯ ಲವ್‌ಸ್ಟೋರಿ. ಒಂದು ಪ್ರೀತಿಯನ್ನು ಹೊಸ ವ್ಯಾಖ್ಯಾನದೊಂದಿಗೆ ನೋಡುವ ಪ್ರಯತ್ನ ಮಾಡಿದ್ದೇನೆ. ಟ್ರೇಲರ್ ನೋಡಿದವರು ನಿಮ್ಮ ಸ್ಟೈಲ್ ಬದಲಾಗಿದೆ ಎನ್ನುತ್ತಿದ್ದಾರೆ. ಅದಕ್ಕೆ ಕಾರಣ ಕಥೆ. ಚಿತ್ರದ ಕಥೆ ಆ ತರಹದ ಒಂದು ನಿರೂಪಣೆ ಹಾಗೂ ಸಂಭಾಷಣೆಯನ್ನು ಬಯಸುತ್ತಿತ್ತು. ಅದಕ್ಕೆ ಸರಿಯಾಗಿ ಅದು ಉಪೇಂದ್ರ ಅವರ ಮ್ಯಾನರಿಸಂ, ಇಮೇಜ್‌ಗೆ ಹೆಚ್ಚು ಹೊಂದಿಕೆಯಾಗುತಿತ್ತು. ಹಾಗಾಗಿ, ಈ ಸಿನಿಮಾವನ್ನು ಚಂದ್ರು ಹೃದಯ ಹಾಗೂ ಉಪ್ಪಿ ಬ್ರೇನ್ ಮಿಶ್ರಿತ ಸಿನಿಮಾ ಎನ್ನಬಹುದು. ಚಿತ್ರದಲ್ಲಿ ಒಂದು ಫ್ರೆಶ್ ಲವ್‌ಸ್ಟೋರಿ ಇದೆ. ಜೊತೆಗೆ ನಿಜವಾಗಿಯೂ ಯಾರಿಗೆ “ಐ ಲವ್ ಯು’ ಹೇಳಬೇಕು ಎಂಬುದನ್ನು ಕೂಡಾ ಹೇಳುವ ಪ್ರಯತ್ನ ಮಾಡಿದ್ದೇನೆ. ಚಿತ್ರ ಇಂದಿನ ಯೂತ್ಸ್ ಜೊತೆಗೆ ಫ್ಯಾಮಿಲಿ ಆಡಿಯನ್ಸ್ ಹೆಚ್ಚು ಇಷ್ಟವಾಗುತ್ತದೆ. ಸಿನಿಮಾ ನೋಡಿ ಹೊರಬಂದ ಕೂಡಲೇ ನೀವು ಒಬ್ಬರಿಗೆ ಫೋನ್ ಮಾಡಿ “ಐ ಲವ್ ಯು’ ಎನ್ನುತ್ತೀರಿ. ಅದು ಯಾರಿಗೆ ಎಂಬುದೇ ಹೈಲೈಟ್’ ಎಂದು ಚಿತ್ರದ ಬಗ್ಗೆ ಹೇಳುತ್ತಾರೆ ಚಂದ್ರು. “ಇದು ರಿಯಲ್ ಸ್ಟಾರ್ ಉಪೇಂದ್ರ ಅವರ “ಎ’, “ಉಪೇಂದ್ರ’ ಹಾಗೂ “ಪ್ರೀತ್ಸೆ’ ಶೈಲಿಯ ಲವ್‌ಸ್ಟೋರಿಯ ಸಿನಿಮಾ. ಆ ಸಿನಿಮಾಗಳಲ್ಲಿರುವಂತೆ ಉಪೇಂದ್ರ ಅವರ ಪಾತ್ರ ಕೂಡ ವಿಭಿನ್ನವಾಗಿರಲಿದೆ. ಹೊಸ ರೂಪದಲ್ಲಿ ಉಪ್ಪಿಯ ದರ್ಶನವಾಗಲಿದೆ. ಅದನ್ನು ತೆರೆಮೇಲೆ ನೋಡಬೇಕು’ ಎನ್ನುವುದು ಚಂದ್ರು ಮಾತು.
ಉಪೇಂದ್ರ ಅವರ ಜೊತೆ ಚಂದ್ರು ಅವರಿಗೆ ಇದು ಎರಡನೇ ಸಿನಿಮಾ. ಈ ಹಿಂದೆ “ಬ್ರಹ್ಮ’
ಚಿತ್ರ ಮಾಡಿದ್ದರು. ಈಗ “ಐ ಲವ್ ಯು’. “ನಮ್ಮಿಬ್ಬರ ಕಾಂಬಿನೇಶನ್‌ನ ಮೊದಲ ಚಿತ್ರ ದೊಡ್ಡ ಮಟ್ಟದಲ್ಲಿ ಹಿಟ್ ಆಗಿತ್ತು. ಈಗ “ಐ ಲವ್ ಯು’ ಕೂಡಾ ದೊಡ್ಡ ಮಟ್ಟದಲ್ಲಿ ನಿರೀಕ್ಷೆ ಹುಟ್ಟಿಸಿದೆ. ಕೇವಲ ಕನ್ನಡವಷ್ಟೇ ಅಲ್ಲದೇ, ತೆಲುಗಿನಲ್ಲೂ ದೊಡ್ಡ ಮಟ್ಟದಲ್ಲಿ ಬಿಡುಗಡೆಯಾಗುತ್ತಿದೆ. ಈಗಾಗಲೇ ವೈಜಾಗ್‌ನ ಕಡಲ ತಡಿಯಲ್ಲಿ ಚಿತ್ರದ ಕುರಿತಾದ ಕಾರ್ಯಕ್ರಮ ಕೂಡಾ ನಡೆದಿದೆ. ಚಿತ್ರದಲ್ಲಿ ರಚಿತಾ ರಾಮ್ ನಾಯಕಿ. ಇಲ್ಲಿಯವರೆಗೆ ತನ್ನ ಹೋಮ್ಲಿ ಲುಕ್‌ನಿಂದ, ಗ್ಲಾಮರ್‌ನಿಂದ ಸಿನಿಪ್ರಿಯರ ಫೇವರೆಟ್ ಆಗಿದ್ದ ನಟಿ ರಚಿತಾ ರಾಮ್ “ಐ ಲವ್ ಯು’ ಚಿತ್ರದಲ್ಲಿ ಗ್ಲಾಮರಸ್ ಪಾತ್ರದಲ್ಲಿ ಅಷ್ಟೇ ಬೋಲ್ಡ್ ಆಗಿ ಕಾಣಿಸಿಕೊಳ್ಳುತ್ತಿದ್ದಾರೆ. ಈಗಾಗಲೇ ಬಿಡುಗಡೆಯಾಗಿರುವ ಟ್ರೇಲರ್‌ನಲ್ಲಿ ರಚಿತಾ ರಾಮ್ ಪಾತ್ರದ ಸಣ್ಣ ಝಲಕ್ ನೋಡುಗರ ಗಮನ ಸೆಳೆಯುತ್ತಿದ್ದು, ರಚಿತಾ ಪಾತ್ರದ ಬಗ್ಗೆ ನೋಡುಗರು ಸಾಕಷ್ಟು ಕುತೂಹಲವನ್ನು ವ್ಯಕ್ತಪಡಿಸುತ್ತಿದ್ದಾರೆ. ಈ ಬಗ್ಗೆ ಮಾತನಾಡುವ ಚಂದ್ರು, “ಚಿತ್ರದ ಕಥೆ ಕೇಳಿ ರಚಿತಾ ಅವರು ಖುಷಿಯಿಂದ ಒಪ್ಪಿಕೊಂಡರು. ಹಾಡೊಂದರಲ್ಲಿ ತುಂಬಾ ಬೋಲ್ಡ್ ಆಗಿ ನಟಿಸಿದ್ದಾರೆ. ಅದು ಆ ಕಥೆ ಹಾಗೂ ಪಾತ್ರಕ್ಕೆ ಅನಿವಾರ್ಯವಾಗಿತ್ತು’ ಎನ್ನುತ್ತಾರೆ.
ಪ್ರೀತಿಗೆ ಹೊಸ ವ್ಯಾಖ್ಯಾನ
ಟ್ರೆಂಡಿ ಲವ್‌ಸ್ಟೋರಿ
ಫ್ಯಾಮಿಲಿ ಡ್ರಾಮಾ
ಚಂದ್ರು ಹೃದಯ ಹಾಗೂ
ಉಪ್ಪಿ ಮೆದುಳು ಮಿಶ್ರಿತ ಸಿನಿಮಾ
ಕ್ಲೈಮ್ಯಾಕ್ಸ್ ಹೈಲೈಟ್
ರವಿಪ್ರಕಾಶ್ ರೈ