ಬೆಂಗಳೂರು: ಕಬ್ಜ ಚಿತ್ರೀಕರಣದಲ್ಲಿ ನಡೆದ ಒಂದು ಸಣ್ಣ ಘಟನೆ, ತೊಂದರೆ ಇಲ್ಲ ನಾನು ಆರಾಮಾಗಿದ್ದೇನೆ ಎಂದು ಚಲನಚಿತ್ರ ನಟ ಉಪೇಂದ್ರ ಅಭಿಮಾನಿಗಳಿಗೆ ತಿಳಿಸಿದ್ದಾರೆ.
ಇಂದು ಟ್ವೀಟ್ ಮಾಡಿರುವ ಉಪ್ಪಿ, ಚಿತ್ರೀಕರಣದ ವೇಳೆ ನಡೆದ ಘಟನೆಯಲ್ಲಿ ತಮಗೆ ಯಾವುದೇ ತೊಂದರೆಯಾಗಿಲ್ಲ ಎಂದು ತಿಳಿಸಿದ್ದಾರೆ. ಹಾಗೂ ಅಭಿಮಾನಿಗಳ ಕಾಳಜಿಗೆ ಧನ್ಯವಾದ ಹೇಳಿದ್ದಾರೆ.
ಶುಕ್ರವಾರ ಮಿನರ್ವ ಮಿಲ್ ನಲ್ಲಿ ಕಬ್ಜ ಚಿತ್ರದ ಚಿತ್ರೀಕರಣದ ಸಮಯದಲ್ಲಿ ರಾಡ್ ಬಡಿದು ನಟ ಉಪೇಂದ್ರ ತಲೆಗೆ ಪೆಟ್ಟು ಬಿದ್ದಿದೆ ಎನ್ನುವ ಸುದ್ದಿ ಕೇಳಿ ಬಂದಿತ್ತು. ಇದು ಆ್ಯಕ್ಷನ್ ಸೀನ್ ಆಗಿತ್ತು. ಉಪೇಂದ್ರ ಅವರಿಗೆ ಕಬ್ಬಿಣದ ರಾಡ್ ನಿಂದ ಹೊಡೆಯುವ ದೃಶ್ಯ ಚಿತ್ರೀಕರಿಸಲಾಗುತ್ತಿತ್ತು, ಈ ವೇಳೆ ಅಚಾತುರ್ಯ ನಡೆದಿದೆ. ಫೈಟರ್ ಹಿಂದಿನಿಂದ ಬೀಸಿದ ಚೂಪಾದ ರಾಡ್ ನಿಂದ ತಪ್ಪಿಸಿಕೊಳ್ಳುವಾಗ ಮಿಸ್ ಆಗಿ ಅದು ಉಪೇಂದ್ರ ಅವರ ತಲೆಗೆ ಬಿದ್ದಿದೆ.ಅದೃಷ್ಟವಶಾತ್ ಉಪ್ಪಿ ಅವರಿಗೆ ಯಾವುದೇ ಗಂಭೀರ ಗಾಯವಾಗಿಲ್ಲ.
ಈ ಘಟನೆ ಅಭಿಮಾನಿಗಳಲ್ಲಿ ಗಾಬರಿಯನ್ನುಂಟು ಮಾಡಿತ್ತು. ಈ ಹಿನ್ನೆಲೆ ಇಂದು ಸ್ವತಃ ಉಪೇಂದ್ರ ಅವರೇ ತಮ್ಮದೊಂದು ಫೋಟೊ ಸಮೇತ ಟ್ವೀಟ್ ಮಾಡಿದ್ದು, ಘಟನೆಯಲ್ಲಿ ತಮಗೆ ಯಾವುದೇ ತೊಂದರೆಯಾಗಿಲ್ಲ ಎಂದು ಅಭಿಮಾನಿಗಳಿಗೆ ತಿಳಿಸಿದ್ದಾರೆ.
ಇನ್ನು ಆರ್.ಚಂದ್ರು ನಿರ್ದೇಶನದ ಕಬ್ಜ ಸಿನಿಮಾದಲ್ಲಿ ಉಪೇಂದ್ರ ಅವರು ಮುಖ್ಯ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಕನ್ನಡ ಚಿತ್ರರಂಗದ ಮತ್ತೊಬ್ಬ ಸ್ಟಾರ್ ನಟ ಸುದೀಪ್ ಅವರೂ ಸಹ ಕಬ್ಜ ಸಿನಿಮಾದಲ್ಲಿ ಅಭನಯಿಸುತ್ತಿದ್ದಾರೆ.