Advertisement
ರಿತೇಶ್ ಆರ್. ಸುವರ್ಣ, ಸಾತ್ವಿಕ್ ಪಡಿಯಾರ್ ಕೆ., ವೈಭವ್ ಪ್ರಭು ಅವರು ಜಪಾನ್ ಪ್ರವಾಸ ಕಥನವನ್ನು ಹಂಚಿಕೊಂಡಿದ್ದಾರೆ. ಸ್ಕೌಟ್ಸ್ ಗೈಡ್ಸ್‌ನ ಅಂತಾರಾಷ್ಟ್ರೀಯ ಜಾಂಬೂರಿಯಲ್ಲಿ ಭಾಗವಹಿಸಲು ಸ್ಕೌಟ್ಸ್ ಗೈಡ್ಸ್ ವಿದ್ಯಾರ್ಥಿಗಳು ದಿಲ್ಲಿಯ ಸ್ಕೌಟ್ಸ್ ಭವನದಲ್ಲಿ ಸೇರಿದ್ದೆವು. ಅಲ್ಲಿ ಜಪಾನ್ ದೇಶದ ರೀತಿ ರಿವಾಜುಗಳ ಬಗ್ಗೆ, ಆಹಾರ ಪದ್ಧತಿಯ ಬಗ್ಗೆ ನಮಗೆ ಸಮಗ್ರ ಮಾಹಿತಿ ನೀಡಿ, ಸೂಕ್ತ ತರಬೇತಿ ನೀಡಿದರು.
ದಿಲ್ಲಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಹಾರಿ, ಜಪಾನ್ ರಾಜಧಾನಿ ಟೋಕಿಯೋದಲ್ಲಿಳಿದೆವು. ಅಲ್ಲಿಂದ 9 ಗಂಟೆಗಳ ಬಸ್ ಪ್ರಯಾಣದಲ್ಲಿ 17ನೇ ಅಂತಾರಾಷ್ಟ್ರೀಯ ನಿಪ್ಪೋನ್ ಜಾಂಬೂರಿ ನಡೆಯುತ್ತಿರುವ ಅಚ್ಚಿಗಸಾಕಿ-ಸೂಜು ಎನ್ನುವಲ್ಲಿಗೆ ತಲುಪಿದೆವು. ಬಸ್ ಪ್ರಯಾಣದುದ್ದಕ್ಕೂ ಜಪಾನಿ ಜೀವನ ಶೈಲಿ ಗಮನ ಸೆಳೆಯಿತು. ಸಂಚಾರಿ ನಿಯಮಗಳನ್ನು ಸ್ವಯಂ ಪಾಲಿಸುತ್ತಿರುವ ಅಲ್ಲಿನ ಜನರಿಂದಾಗಿ ರಸ್ತೆ ಸಂಚಾರ ಸುಲಲಿ ತವಾಗಿತ್ತು. ವಾಯು ಮಾಲಿನ್ಯ ತಡೆಗಟ್ಟುವ ಸಲುವಾಗಿ ಬಹುತೇಕರು ಸೈಕಲ್‌ಗಳನ್ನು ಬಳಸುತ್ತಿರುವುದು ಕಂಡುಬಂತು. ದೂರದೂರಿಗೆ ತೆರಳುವುದಿದ್ದರೆ ಮಾತ್ರ ಕಾರು, ಇತರ ವಾಹನಗಳನ್ನು ಬಳಸುತ್ತಾರೆ. ಅನಗತ್ಯವಾಗಿ ಹಾರ್ನ್ ಬಳಸುವುದಿಲ್ಲ. ಪ್ರಯಾಣದಲ್ಲಿ ಶಾಂತಿಯಿಂದ ವರ್ತಿಸುತ್ತಾರೆ. ದಾರಿಯಲ್ಲಿ ವಿಶಾಲವಾದ ಗದ್ದೆಗಳು ಕಂಡವು. ಯಾಂತ್ರಿಕ ಕೃಷಿಗೆ ಜಪಾನ್ ರೈತರು ಆದ್ಯತೆ ಕೊಡುವುದು ಗಮನಕ್ಕೆ ಬಂತು. ಜಪಾನೀಯರ ವ್ಯವಹಾರ ಶೈಲಿ ಸಂತೋಷದಾಯಕವಾಗಿದೆ. ಅವರಿಗೆ ಭಾರತೀಯ ಮೇಲೆ ಅಪಾರ ಪ್ರೀತಿ, ವಿಶ್ವಾಸಗಳಿವೆ. ಅವರೆಲ್ಲರೂ ಎದುರುಗೊಳ್ಳುವಾಗ ನಮ್ಮ ದೇಶದಲ್ಲಿ ಕೈ ಮುಗಿದು ನಮಸ್ಕರಿಸುವಂತೆ, ಅವರು ಒಂದಷ್ಟು ಬಾಗಿ ‘ಕೊನಿಚೀವಾ’ ಎನ್ನುತ್ತಿದ್ದರು.
Related Articles
Advertisement
ಕೈ ಸನ್ನೆಗಳೇ ಭಾಷೆಯಾದವುಬಹುತೇಕ ಜಪಾನಿಗರಿಗೆ ಇಂಗ್ಲಿಷ್ ಗೊತ್ತಿಲ್ಲ. ಜಪಾನಿ ಭಾಷೆ ನಮಗೆ ಬರುವುದಿಲ್ಲ. ಆದರೆ ಅರ್ಥವಾಗುವ ರೀತಿಯಲ್ಲಿ ಕೈ ಸನ್ನೆಗಳೊಂದಿಗೆ ಅವರು ಮಾತನಾಡುತ್ತಿದ್ದರು. ನಮ್ಮೆಲ್ಲ ವ್ಯವಹಾರಗಳು ಬಹುತೇಕ ಕೈಸನ್ನೆಯಲ್ಲೇ ನಡೆದವು. ನಾವು ಮಿಡಿ ಮಾವಿನಕಾಯಿ ಉಪ್ಪಿನಕಾಯಿ ಒಯ್ದಿದ್ದೆವು. ಭಾರತೀಯ ದಿನಾಚರಣೆಯಂದು ನಾವು ಅವರಿಗೆ ಉಪ್ಪಿನಕಾಯಿ ರುಚಿ ಪರಿಚಯಿಸಿದೆವು. ವಿದೇಶಿ ವಿದ್ಯಾರ್ಥಿಗಳು ಉಪ್ಪಿನ ಕಾಯಿಯನ್ನು ಚಪ್ಪರಿಸಿ ತಿಂದರು. ಜಾಂಬೂರಿಯಲ್ಲಿ 11 ಸಾವಿರ ಜಪಾನಿ ಹಾಗೂ 1,890 ವಿದೇಶಿ ವಿದ್ಯಾರ್ಥಿಗಳ ಸಹಿತ ಒಟ್ಟು 12,890 ಮಂದಿ ಸ್ಕೌಟ್ಸ್ – ಗೈಡ್ಸ್ ವಿದ್ಯಾರ್ಥಿಗಳು ಭಾಗವಹಿಸಿದ್ದರು.