Advertisement

ಉಪ್ಪಿನಂಗಡಿ: ಘನ ತ್ಯಾಜ್ಯ ವಿಲೇವಾರಿ ಕಗ್ಗಂಟು

11:34 AM Nov 02, 2018 | Team Udayavani |

ಉಪ್ಪಿನಂಗಡಿ: ಸ್ಥಳೀಯಾಡಳಿತಕ್ಕೆ ಘನತ್ಯಾಜ್ಯ ವಿಲೇವಾರಿ ಕಗ್ಗಂಟಾಗಿ ಪರಿಣಮಿಸಲಿದೆ. ವಿಲೇಯನ್ನು ಸ್ಥಗಿತಗೊಳಿಸುವ ಪರಿಸ್ಥಿತಿ ಸದ್ಯ ನಿರ್ಮಾಣವಾಗಲಿದೆ. ಉಪ್ಪಿನಂಗಡಿ ಗ್ರಾ.ಪಂ. ಆದಾಯದಲ್ಲಿ ತಾಲೂಕಿನಲ್ಲೇ ಪ್ರಥಮ ಸ್ಥಾನದಲ್ಲಿದ್ದರೂ ತ್ಯಾಜ್ಯ ವಿಲೇವಾರಿಗೆ ಗ್ರಾಮಸ್ಥರ ಸಹಕಾರವಿಲ್ಲದೆ ಕೃತಕ ಸಮಸ್ಯೆ ಉದ್ಭವಗೊಂಡಿದೆ. ಕಂದಾಯ ಇಲಾಖೆ ಹಾಗೂ ಎಲ್ಲ ಸಂಘ ಸಂಸ್ಥೆಗಳು ಒಗ್ಗಟ್ಟಿನ ನಿರ್ಧಾರವನ್ನು ಕೈಗೊಂಡರೆ ಮಾತ್ರ ಈ ಸಮಸ್ಯೆ ಬಗೆಹರಿಯಲು ಸಾಧ್ಯವಾಗಲಿದೆ. ನೇತ್ರಾವತಿ ನದಿ ತಟದಲ್ಲಿ ತ್ಯಾಜ್ಯ ವಿಲೇವಾರಿಯನ್ನು ಪಂ. ವ್ಯವಸ್ಥಿತವಾಗಿ ನಡೆಸುತ್ತಿದ್ದರೂ, ಘಟಕ ತ್ಯಾಜ್ಯಕ್ಕೆ ಸೂಕ್ತ ವ್ಯವಸ್ಥೆಗಳಿಲ್ಲದೆ ಕೈ ಚೆಲ್ಲಿ ಕುಳಿತುಕೊಳ್ಳುವಂತಾಗಿದೆ.

Advertisement

ಘನತ್ಯಾಜ್ಯ ವಿಲೇವಾರಿಗೆ ಈ ಹಿಂದೆ ಉಪ್ಪಿನಂಗಡಿ ಹಾಗೂ ಹಿರೇಬಂಡಾಡಿ ಗಡಿ ಪ್ರದೇಶದಲ್ಲಿ ವಿಶೇಷ ಘಟಕ ತೆರೆಯಲಾಗಿತ್ತು. ಅಲ್ಲಿ ನಿರ್ವಹಣೆ ಗುತ್ತಿಗೆ ವಹಿಸಿದವರ ನಿರ್ಲಕ್ಷ್ಯದಿಂದಾಗಿ ಸ್ಥಳೀಯರು ಪ್ರತಿಭಟಿಸಿ ಜಿಲ್ಲಾಧಿಕಾರಿಗಳಿಗೆ ದೂರು ನೀಡಿದ ಬೆನ್ನಲ್ಲೇ ಸ್ಥಗಿತಗೊಳಿಸಬೇಕಾದ ಅನಿವಾರ್ಯತೆ ಮೂಡಿಬಂತು. ಆನಂತರ ಕುಮಾರಧಾರಾ ನದಿ ತಟದಲ್ಲಿ ಪಂಚಾಯತ್‌ನ 16 ಸೆಂಟ್ಸ್‌ ಸ್ವಂತ ನಿವೇಶನವಿತ್ತು. ಆ ಜಾಗದಲ್ಲಿ ತ್ಯಾಜ್ಯ ಸಂಗ್ರಹಿಸುತ್ತಿದ್ದರೂ, ರಾಷ್ಟ್ರೀಯ ಹೆದ್ದಾರಿ ವಿಸ್ತರಣೆಗೆ 6 ಸೆಂಟ್ಸ್‌ ಜಾಗ ಹೋಗಿದೆ. ಉಳಿದ ಜಾಗದಲ್ಲಿ ತ್ಯಾಜ್ಯ ಹಾಕುವ ಮೂಲಕ ಹೆದ್ದಾರಿ ಗುತ್ತಿಗೆದಾರರಿಗೆ ಕಾಮಗಾರಿ ನಡೆಸಲು ತೊಂದರೆಯಾಗುತ್ತಿದ್ದು, ಅತಂತ್ರ ಸ್ಥಿತಿ ನಿರ್ಮಾಣವಾಗಿದೆ. ತ್ಯಾಜ್ಯ ಗಳನ್ನು ಸಂಗ್ರಹಿಸಲು 65 ಸಾವಿರ ಶುಲ್ಕ ಪಡೆದುಕೊಂಡರೆ, ಗುತ್ತಿಗೆದಾರರಿಗೆ ವಿಲೇವಾರಿ ವ್ಯವಸ್ಥೆ ಖರ್ಚು ಎಂದು 82 ಸಾವಿರ ರೂ. ನೀಡಬೇಕಾಗುತ್ತದೆ.

ಉಪ್ಪಿನಂಗಡಿ ಪೇಟೆ ಅಭಿವೃದ್ಧಿಗೊಳ್ಳುತ್ತಿದ್ದು, ಅತೀ ಹೆಚ್ಚು ಘನತ್ಯಾಜ್ಯ ಸಂಗ್ರಹವಾಗುತ್ತಿದೆ. ಆಧುನಿಕ ಯಂತ್ರವನ್ನು ಖರೀದಿಸಿ ಘನ ತ್ಯಾಜ್ಯ ವಿಲೇ ಮಾಡಬೇಕು ಎಂದು ಸಾಮಾಜಿಕ ಕಾರ್ಯಕರ್ತ ನಝೀರ್‌ ಮಠ ಅಭಿಪ್ರಾಯಿಸಿದ್ದಾರೆ. ತ್ಯಾಜ್ಯ ನಿರ್ವಹಣೆಗೆ ಸ್ಥಳೀಯಾಡಳಿತದ ಜನಪ್ರತಿನಿಧಿಗಳು ಸಾಧಕ ಭಾಧಕಗಳ ಕುರಿತು ಚರ್ಚೆ ನಡೆಸಬೇಕು ಎಂದು ವಾಣಿಜ್ಯ ಹಾಗೂ ಕೈಗಾರಿಕೆ ಸಂಘದ ಅಧ್ಯಕ್ಷ ಪ್ರಶಾಂತ್‌ ಡಿ’ಕೋಸ್ಟ ಹೇಳಿದ್ದಾರೆ.

ತಡೆಯಾಜ್ಞೆ ತಂದಿದ್ದರು
ಪಂಚಾಯತ್‌ ಈ ಹಿಂದೆಯೇ ಬದಲಿ ಜಾಗವನ್ನು ಮಠ ಎನ್ನುವಲ್ಲಿ ಗುರುತಿಸಿದ್ದು, ಸರಕಾರದಿಂದಲೂ ಮಂಜೂರಾತಿ ದೊರೆತು ಪಂ. ಖರೀದಿಸಿತ್ತು. ಆದರೆ ಪಕ್ಕದ ಖಾಸಗಿ ಜಾಗದ ವ್ಯಕ್ತಿಯೋರ್ವರು ಮಂಜೂರಾತಿ ಆದೇಶದ ಮೇಲೆ ಘನತ್ಯಾಜ್ಯ ಘಟಕಕ್ಕೆ ಕೆ.ಎ.ಟಿ.ಯಿಂದ ತಡೆಯಾಜ್ಞೆ ತಂದಿದ್ದರು. ಇದು ನ್ಯಾಯಾಲಯದಲ್ಲಿ ತನಿಖೆಯಲ್ಲಿದೆ.

ಸಹಕಾರದಿಂದ ಮಾತ್ರ ಸಾಧ್ಯ
ಗ್ರಾಮದಲ್ಲಿ ಘನತ್ಯಾಜ್ಯ ವಿಲೇವಾರಿಗೆ ನಿವೇಶನ ನಿಗದಿಪಡಿಸಲು ಎಲ್ಲ ಸಂಘಸಂಸ್ಥೆ ಹಾಗೂ ಗ್ರಾಮಸ್ಥರ ಸಹಕಾರದಿಂದ ಮಾತ್ರ ಸಾಧ್ಯ. ಗ್ರಾಮದ ಜನಹಿತಕ್ಕೆ ಆದ್ಯತೆ ನಮ್ಮದು. ಕುಮಾರಧಾರೆಯ ಪಕ್ಕ ಹಾಕಿದರೆ ಕಿಡಿಕೇಡಿಗಳು ಬೆಂಕಿ ಹಚ್ಚುವುದರಿಂದ ನಾಗರಿಕರ ಆರೋಗ್ಯದ ಮೇಲೆ ಪರಿಣಾಮ ಬೀರುವ ಕಾರಣ ಬದಲಿ ಜಾಗ ಹುಡುಕಿದರೆ ಅದಕ್ಕೂ ಅಡ್ಡಿಯಾದರೆ ಏನೂ ತಾನೆ ಮಾಡಲು ಸಾಧ್ಯ? ಆದರೂ ಒಂದು ತಿಂಗಳಲ್ಲಿ ತ್ಯಾಜ್ಯ ಸಮಸ್ಯೆ ಮುಕ್ತಗೊಳಿಸಲು ಪ್ರಯತ್ನಿಸುವೆ.
– ಅಬ್ದುಲ್‌ ರಹಿಮಾನ್‌ 
ಉಪ್ಪಿನಂಗಡಿ ಗ್ರಾ.ಪಂ. ಅಧ್ಯಕ್ಷರು

Advertisement

ಸಮಸ್ಯೆ ಚರ್ಚೆಯಲ್ಲಿದೆ
ಪಂಚಾಯತ್‌ ಜನಪ್ರತಿನಿಧಿಗಳು ಘನತ್ಯಾಜ್ಯ ವಿಲೇವಾರಿಗೆ ಹಲವು ಸಾಮಾನ್ಯ ಸಭೆಯಲ್ಲಿ ಚರ್ಚೆ ನಡೆಸಿದ್ದಾರೆ. ಯಾರಿಗೂ ತೊಂದರೆಯಾಗದಂತೆ ಘನತ್ಯಾಜ್ಯ ಸಂಪೂರ್ಣ ಭಸ್ಮಗೊಳಿಸುವ ಯಂತ್ರ ಖರೀದಿಸುವ ಪ್ರಕ್ರಿಯೆ ಚಾಲ್ತಿಯಲ್ಲಿದೆ. ಆದರೆ ಅದನ್ನು ಖರೀದಿಸಲು ಹಣದ ಕೊರತೆ ಇದ್ದು, ಮುಂದಿನ ದಿನಗಳಲ್ಲಿ ಆಡಳಿತದೊಂದಿಗೆ ಚರ್ಚಿಸಬೇಕಾದ ಅನಿವಾರ್ಯತೆ ಒದಗಿಬಂದಿದೆ.
– ಅಬ್ದುಲ್‌ ಆಸಫ್,
ಪಂಚಾಯತ್‌ ಅಭಿವೃದ್ಧಿ ಅಧಿಕಾರಿ

Advertisement

Udayavani is now on Telegram. Click here to join our channel and stay updated with the latest news.

Next