ಉಪ್ಪಿನಂಗಡಿ: ಮಗಳನ್ನು ಮದುವೆ ಮಾಡಿಕೊಡಲು ನಿರಾಕರಿಸಿದ ವ್ಯಕ್ತಿಯ ಮನೆಗೆ ತಂಡ ಕಟ್ಟಿಕೊಂಡು ನುಗ್ಗಿದ್ದಲ್ಲದೆ, ಮಾರಕಾಯುಧಗಳಿಂದ ಹಲ್ಲೆ ನಡೆಸಿ ಕೊಲೆಗೆ ಯತ್ನಿಸಿದ ಆರು ಮಂದಿಯ ಪೈಕಿ ನಾಲ್ವರನ್ನು ಉಪ್ಪಿನಂಗಡಿ ಪೊಲೀಸರು ಬಂಧಿಸಿದ್ದಾರೆ.
ಬಂಟ್ವಾಳ ತಾಲೂಕು ಬಿಳಿಯೂರು ಗ್ರಾಮದ ಆಯೋಧ್ಯಾ ನಗರ ನಿವಾಸಿ ತಾಹೀರಾ (38) ಪೊಲೀಸರಿಗೆ ದೂರು ನೀಡಿದ್ದು, ದೂರಿನಲ್ಲಿ ಶುಕ್ರವಾರ ರಾತ್ರಿ 11.15ರ ಸುಮಾರಿಗೆ ಮಹಮ್ಮದ್ ನಿಝಾಮುದ್ದೀನ್ (25) ಬಿನ್ ಶಾಹುಲ್ ಹಮೀದ್, ತೌಫೀಕ್ (20) ಬಿನ್ ಇಸ್ಮಾಯಿಲ್, ಅಬ್ದುಲ್ ಸಲೀಂ (23) ಬಿನ್ ಮಹಮ್ಮದ್, ಮಹಮ್ಮದ್ ಸಫೀಕ್ (22) ಬಿನ್ ಹಸೈನಾರ್ ಮತ್ತು ನಾಸೀರ್ ಮತ್ತು ಸಮೀರ್ ಅವರನ್ನು ಒಳಗೊಂಡ ತಂಡ ಮನೆಗೆ ಅಕ್ರಮ ಪ್ರವೇಶ ಮಾಡಿದ್ದಲ್ಲದೆ, ನನಗೆ ಮತ್ತು ಪತಿ, ಮಕ್ಕಳಿಗೆ ಅವಾಚ್ಯ ಪದಗಳಿಂದ ಬೈದು, ಮೈದುನ ಯೂಸುಫ್ ಅವರನ್ನು ಫೋನ್ ಮಾಡಿ ಕರೆಯಿಸಿ ಅವರ ಮೇಲೆ ಹಲ್ಲೆ ನಡೆಸಿದ್ದಾರೆ.
ಈ ವೇಳೆ ನಾನು ಮತ್ತು ನನ್ನ ಪತಿ ಉಸ್ಮಾನ್ ಬ್ಯಾರಿ ಬಿಡಿಸಲು ಹೋದಾಗ, ನಿಝಾಮುದ್ದೀನನು ತಂದಿದ್ದ ಚೂರಿಯಿಂದ ಪತಿಯವರನ್ನು ಕೊಲೆ ಮಾಡುವ ಉದ್ದೇಶದಿಂದ ಅವರ ಎದೆಗೆ ಚೂರಿಯಿಂದ ಇರಿದಿದ್ದ. ಉಳಿದ ಆರೋಪಿಗಳು ದೊಣ್ಣೆ, ಕಲ್ಲು, ಕೈಗಳಿಂದ ಹೊಡೆದು ನಿಮ್ಮೆಲ್ಲರನ್ನೂ ಜೀವ ಸಹಿತ ಬದುಕಲು ಬಿಡುವುದಿಲ್ಲವೆಂದು ಬೆದರಿಕೆಯೊಡ್ಡಿ, ತಾವು ಬಂದಿದ್ದ ಬೈಕು ಮತ್ತು ಸ್ಕೂಟರ್‌ಗಳಲ್ಲಿ ಹಿಂತಿರುಗಿದ್ದಾರೆ.
ಮರಣಾಂತಿಕ ಹಲ್ಲೆಯಿಂದ ಗಾಯ ಗೊಂಡ ಉಸ್ಮಾನ್ ಬ್ಯಾರಿಯವರನ್ನು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ತಾಹೀರಾ ಅವರು ದೂರಿನಲ್ಲಿ ಉಲ್ಲೇಖೀಸಿದ್ದಾರೆ.
ಉಸ್ಮಾನ್ ಬ್ಯಾರಿಯವರ ಮಗಳನ್ನು ತನಗೆ ವಿವಾಹ ಮಾಡಿಕೊಡಬೇಕೆಂದು ನಿಝಾಮುದ್ದೀನ್‌ನ ಕೋರಿಕೆಯನ್ನು ನಿರಾಕರಿಸಿದ ಕೋಪಕ್ಕೆ ನಿಝಾಮುದ್ದೀ ನನು ತಂಡ ಕಟ್ಟಿಕೊಂಡು ಕೊಲೆಗೈ ಯಲು ಬಂದಿರುವುದಾಗಿ ದೂರಿನಲ್ಲಿ ಆಪಾದಿಸಲಾಗಿದೆ.
ಪ್ರಕರಣ ದಾಖಲಿಸಿಕೊಂಡ ಉಪ್ಪಿ ನಂಗಡಿ ಪೊಲೀಸರು ಆರೋಪಿತರ ಪೈಕಿ ನಿಝಾಮುದ್ದೀನ್, ಸಲೀಂ, ತೌಫಿಕ್ ಹಾಗೂ ಸಫೀಕ್ ಎನ್ನುವವರನ್ನು ಬಂಧಿಸಿದ್ದು, ಉಳಿದಿಬ್ಬರ ಪತ್ತೆಗೆ ಶೋಧ ಕಾರ್ಯಾಚರಣೆ ನಡೆಸುತ್ತಿದ್ದಾರೆ. ಬಂಧಿತರನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ.