ಉಪ್ಪಿನಂಗಡಿ: ಕೃಷಿ ಚಟುವಟಿಕೆ ಹಾಗೂ ಅಂತರ್ಜಲವನ್ನು ವೃದ್ಧಿಸುವ ಮೂಲ ಉದ್ದೇಶದಿಂದ ಉಪ್ಪಿನಂಗಡಿ ಗ್ರಾಮದ ನಾಲಾಯ ಗುಂಡಿ ಎಂಬಲ್ಲಿ ಕಳೆದ ಮೂರು ವರ್ಷಗಳ ಹಿಂದೆ ನಿರ್ಮಾಣವಾದ ಕಿಂಡಿ ಅಣೆಕಟ್ಟಿನಲ್ಲಿ ಮೂಲ ಉದ್ದೇಶವೇ ನೀರು ಪಾಲಾಗಿದೆ.
ಸುಮಾರು 40 ಎಕ್ರೆಯಲ್ಲಿ ಅಂತರ್ಜಲ ಅಭಿವೃದ್ಧಿಯ ಉದ್ದೇಶದಿಂದ ನೇತ್ರಾವತಿ ನದಿಯನ್ನು ಸೇರುವ ಸಣ್ಣ ಹೊಳೆಗೆ ನಾಲಾಯ ಗುಂಡಿ ಎಂಬಲ್ಲಿ ಸಣ್ಣ ನೀರಾವರಿ ಮತ್ತು ಅಂತರ್ಜಲ ಅಭಿವೃದ್ಧಿ ಇಲಾಖೆಯ ವತಿಯಿಂದ ಅಂದಾಜು ಒಂದು ಕೋಟಿ ರೂ. ವೆಚ್ಚದಲ್ಲಿ ಕಿಂಡಿ ಅಣೆಕಟ್ಟೊಂದು ನಿರ್ಮಾಣವಾಗಿ 2019ರ ಡಿಸೆಂಬರ್‌ನಲ್ಲಿ ಉದ್ಘಾಟನೆಗೊಂಡಿತ್ತು.
ಇಲ್ಲಿನ ಹೊಳೆಯಲ್ಲಿ ನೀರಿನ ಹರಿವು ಇರುವ ಸಂದರ್ಭ ಇದಕ್ಕೆ ಹಲಗೆ ಅಳವಡಿಸಿದಾಗ ಮಾತ್ರ ಕಿಂಡಿ ಅಣೆಕಟ್ಟಿನಲ್ಲಿ ಉತ್ತಮ ನೀರು ಶೇಖರಣೆಗೊಳ್ಳಲು ಸಾಧ್ಯ. ಪ್ರತೀ ವರ್ಷ ಇದೇ ರೀತಿ ನಿರ್ವಹಣೆ ಮಾಡಿಕೊಂಡು ಬರಬೇಕಿತ್ತು. ಆದರೆ ಇಲ್ಲಿ ಅದು ಪರಿಪೂರ್ಣವಾಗಿ ನಡೆದದ್ದು ಉದ್ಘಾಟನೆಯ ವರ್ಷ ಮಾತ್ರ. ಈ ವರ್ಷ ಹಲಗೆಯನ್ನೇ ಅಳವಡಿಸಿಲ್ಲ.
ಉದ್ಘಾಟನೆ ಸಂದರ್ಭ ಕಿಂಡಿ ಅಣೆಕಟ್ಟಿನಲ್ಲಿ ನೀರು ಶೇಖರಣೆಗೊಳಿಸಿದ್ದರಿಂದ ಪ್ರತೀ ಬಾರಿಯೂ ಬೇಸಗೆಯಲ್ಲಿ ನೀರಿಲ್ಲದೆ ಬರಡಾಗಿರುತ್ತಿದ್ದ ಇಲ್ಲಿ ನೀರು ಮೈದುಂಬಿಕೊಂಡಿತ್ತು. ಇದು ಪರಿಸರದ ಅಂತರ್ಜಲ ಅಭಿವೃದ್ಧಿಗೆ ಕಾರಣವಾಗಿತ್ತು. ಇನ್ನೊಂದೆಡೆ ಕಿಂಡಿ ಅಣೆಕಟ್ಟಿನೊಳಗೆ ನಿಂತ ಜಲರಾಶಿಯು ಪ್ರವಾಸಿಗರನ್ನೂ ಆಕರ್ಷಿಸಿತ್ತು. ಬಳಿಕ ಬಂದ ಮಳೆಗಾಲದಲ್ಲಿ ಗೇಟಿಗೆ ಅಳವಡಿಸಿದ್ದ ಹಲಗೆಗಳನ್ನು ತೆಗೆಯಲಾಯಿತು. ಮಳೆಗಾಲ ಮುಗಿದು 2021ರಲ್ಲಿ ಮತ್ತೆ ಬೇಸಗೆ ಕಾಲ ಬಂದಾಗ ಮೊದಲಿಗೆ ಕಿಂಡಿ ಅಣೆಕಟ್ಟಿಗೆ ಹಲಗೆ ಅಳವಡಿಸುವ ಕಾರ್ಯ ನಡೆಯದಿದ್ದರೂ, ಮಳೆಗಾಲ ಆರಂಭಕ್ಕೆ ಎರಡು ತಿಂಗಳ ಮೊದಲು ಹಲಗೆ ಅಳವಡಿಸಲಾಗಿತ್ತು. ಆಳೆತ್ತರಕ್ಕಿಂತಲೂ ಹೆಚ್ಚು ನೀರು ಶೇಖರಣೆಗೊಳ್ಳಬೇಕಾದ ಸ್ಥಳದಲ್ಲಿ ಮೊಣಕಾಲು ಪ್ರಮಾಣದ ನೀರು ಸಂಗ್ರಹವಾ ಗುವಂತಾಯಿತು. ಅದಾಗಲೇ ಉದಯವಾಣಿ ಪತ್ರಿಕೆ ವಿಷಯದ ಗಂಭೀರತೆಯನ್ನು ಎತ್ತಿ ತೋರಿಸಿತ್ತು. 2022ರಲ್ಲಿ ಇಲ್ಲಿನ ಪರಿಸ್ಥಿತಿಯೇ ಭಿನ್ನವಾಗಿದೆ. ಕಿಂಡಿ ಅಣೆಕಟ್ಟಿದ್ದರೂ ಅದಕ್ಕೆ ಹಲಗೆ ಅಳವಡಿಸಿ ನೀರನ್ನು ಶೇಖರಿಸಿಡುವ ಕಾರ್ಯ ನಡೆಯದೆ ಹೊಳೆಯು ಸಂಪೂರ್ಣ ಬತ್ತಿದೆ. ಇಲ್ಲಿ ಒಂದು ಕೋಟಿ ರೂ. ಸಾರ್ವಜನಿಕರ ಹಣ ಪೋಲಾಗಿದ್ದು ಬಿಟ್ಟರೆ ನೀರಿಂಗಿಸುವ ಕಾರ್ಯ ಆಗಿಲ್ಲ. ಅಂತರ್ಜಲದ ಅಭಿವೃದ್ಧಿಯೂ ಆಗಿಲ್ಲ. ಈ ಪ್ರದೇಶದ ರೈತರ ಕನಸೂ ಈಡೇರಿಲ್ಲ. ಮುಂದಿನ ಬಾರಿಗಾದರೂ ಅಧಿಕಾರಿಗಳು ಕ್ರಮ ಕೈಗೊಳ್ಳುವಂತೆ ಸ್ಥಳೀಯರು ಆಗ್ರಹಿಸಿದ್ದಾರೆ.