Advertisement

ನಾಡಕಚೇರಿ ಸ್ಥಳಾಂತರಕ್ಕೆ ಸಿಬಂದಿ ನಿರಾಸಕ್ತಿ: ಆರೋಪ

06:24 AM Jan 18, 2019 | |

ಉಪ್ಪಿನಂಗಡಿ: ಅಪಾಯದ ಅಂಚಿನಲ್ಲಿರುವ ಹೋಬಳಿ ಮಟ್ಟದ ನಾಡ ಕಚೇರಿ ಸ್ಥಳಾಂತರಕ್ಕೆ ಸ್ಥಳವಕಾಶ ಒದಗಿಸಿಕೊಟ್ಟರೂ ಅಧಿಕಾರಿಗಳ ನಿರ್ಲಕ್ಷ್ಯದಿಂದ ಬಾಕಿ ಉಳಿದಿದೆ.

Advertisement

ಇಲ್ಲಿನ ನಾಡ ಕಚೇರಿ ಸುಮಾರು 20 ಗ್ರಾಮಗಳಿಗೆ ಸಂಬಂಧಿಸಿದೆ. ಕಟ್ಟಡ ಹಳೆಯದಾಗಿದ್ದು, ಮುರಿದು ಬೀಳುವ ಆತಂಕ ಎದುರಾಗಿತ್ತು. ಕಚೇರಿ ಎತ್ತರವೂ ಕಡಿಮೆಯಿದ್ದು, ತುಸು ಎತ್ತರದ ವ್ಯಕ್ತಿಗಳು ಪ್ರವೇಶಿಸಿದರೆ ಫ್ಯಾನ್‌ ಬಡಿಯುವ ಭೀತಿಯಲ್ಲಿ ಬಗ್ಗಿಯೇ ನಿಲ್ಲಬೇಕು. ಕೈ ಎತ್ತಿದರೆ ಛಾವಣಿಯೇ ಬೀಳುವಂತಿದೆ. ಖುದ್ದು ಜಿಲ್ಲಾಧಿಕಾರಿಗಳೇ ಭೇಟಿ ನೀಡಿ, ಸ್ಥಳಾಂತರಕ್ಕೆ ಜಾಗ ಹುಡುಕುವಂತೆ ಸೂಚನೆಯನ್ನೂ ನೀಡಿದ್ದರು. ಆದರೆ, ಏಳೆಂಟು ತಿಂಗಳಿಂದ ಬದಲಿ ಸರಕಾರಿ ಕಟ್ಟಡಗಳಲ್ಲಿ ಸ್ಥಳಾಂತರಕ್ಕೆ ಕೊಠಡಿಗಳು ಸಿಗದೆ ಸಿಬಂದಿ ಕೈಚೆಲ್ಲಿದ್ದರು. ಇದನ್ನು ಮನಗಂಡ ಪುತ್ತೂರು ಸಹಾಯಕ ಆಯುಕ್ತರು ಪಕ್ಕದಲ್ಲೇ ಇರುವ ಗ್ರಾ.ಪಂ. ಕಟ್ಟಡದಲ್ಲಿ ಅವಕಾಶ ಕೋರಿ, ಲಿಖಿತ ಮನವಿ ಸಲ್ಲಿಸಿದ್ದರು.

ಸ್ಥಳೀಯ ಪಂಚಾಯತ್‌ ಆಡಳಿತ ಸಾಮಾನ್ಯ ಸಭೆಯಲ್ಲಿ ಸದಸ್ಯರ ಮೂಲಕ ಸಾಧಕ-ಬಾಧಕಗಳ ಸುದೀರ್ಘ‌ ಚರ್ಚೆ ನಡೆಸಿ, ಸ್ಥಳಾವಕಾಶಕ್ಕೆ ಅನುಮೋದನೆ ನೀಡುವ ಕುರಿತಾಗಿ ಸದಸ್ಯರು ಸರ್ವಾನುಮತದ ಸಮ್ಮತಿ ಸೂಚಿಸಿದ್ದರು. ಪಂಚಾಯತ್‌ನ ಒಪ್ಪಿಗೆ ಪತ್ರವನ್ನು ಕಂದಾಯ ಇಲಾಖೆಗೆ ಕಳುಹಿಸಿಕೊಟ್ಟು ತಿಂಗಳು ಕಳೆದಿದೆ. ಗ್ರಾಮ ಕರಣಿಕರಿಂದ ತೊಡಗಿ ಹಿರಿಯ ಅಧಿಕಾರಿಗಳ ವರೆಗೆ ಕೊಠಡಿಗಳ ಪರಿಶೀಲನೆಯಲ್ಲೇ ಕಾಲಹರಣವಾಗಿದೆ. ಆದರೆ, ಕಚೇರಿಯನ್ನು ಇನ್ನೂ ಸ್ಥಳಾಂತರಿಸದೇ ಇರುವುದು ವ್ಯಾಪಕ ಚರ್ಚೆಗೆ ಗ್ರಾಸವಾಗಿದೆ. ಕಚೇರಿಯನ್ನು ಶೀಘ್ರ ಸ್ಥಳಾಂತರಿಸಿ ಸಿಬಂದಿಯ ಆತಂಕ ದೂರವಾಗಿ, ಗ್ರಾಹಕರಿಗೆ ನಿಶ್ಚಿಂತೆಯಿಂದ ಸೇವೆ ನೀಡುವಂತಾಗಲಿ ಎಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.

ಅನುದಾನ ನಿರೀಕ್ಷೆ
ನಾಡಕಚೇರಿಯ ಕಟ್ಟಡ ಸಂಪೂರ್ಣ ಶಿಥಿಲಗೊಂಡಿದ್ದು, ಕಳೆದ ಒಂದು ವರ್ಷದಿಂದ ಸರಕಾರಿ ಕಟ್ಟಡವನ್ನು ಹುಡುಕುತ್ತಿದ್ದೆವು. ಆದರೆ, ಮೇಲಧಿಕಾರಿಗಳ ಆದೇಶದಂತೆ ಉಪ್ಪಿನಂಗಡಿ ಗ್ರಾ.ಪಂ.ಗೆ ಸ್ಥಳಾವಕಾಶ ಕೋರಿ ಮನವಿ ಸಲ್ಲಿಸಿದ್ದು, ಅದರಂತೆ ಮನವಿಗೆ ಸ್ಪಂದಿಸಿದ ಪಂಚಾಯತ್‌ ಸ್ಥಳಾವಕಾಶ ಒದಗಿಸುವ ಭರವಸೆ ನೀಡಿತ್ತು. ಸ್ಥಳ ಪರಿಶೀಲನೆ ಮಾಡಿದಾಗ ಗ್ರಾ.ಪಂ. ಆಡಳಿತ ಮೌಖಿಕವಾಗಿ ಹಳೆಯ ಪೀಠೊಪಕರಣಗಳನ್ನು ವಿಲೇವಾರಿ ಮಾಡಿ ಹಾಗೂ ಖಾಲಿ ಇರುವ ಹುದ್ದೆಗಳನ್ನು ಭರ್ತಿಗೊಳಿಸಿ ಪಂಚಾಯತ್‌ಗೆ ಸ್ಥಳಾಂತರಿಸಿ ಎಂದು ಹೇಳಿತ್ತು. ಪೀಠೊಪಕರಣ ವಿಲೇವಾರಿ ಹಾಗೂ ಸಿಬಂದಿ ಹುದ್ದೆ ಭರ್ತಿ ತಯಾರಿಯಲ್ಲಿದ್ದು, ಅನುದಾನದ ನಿರೀಕ್ಷೆಯಲ್ಲಿದ್ದೇವೆ.
 – ಸದಾಶಿವ
ನಾಡಕಚೇರಿ ಸಹಾಯಕ ಉಪತಹಶೀಲ್ದಾರ್‌

Advertisement

Udayavani is now on Telegram. Click here to join our channel and stay updated with the latest news.

Next