ಹಗಲು-ರಾತ್ರಿ ಬಿಡುವಿಲ್ಲದೆ ಮರಳು ತೆಗೆಯಲಾಗುತ್ತಿದ್ದು, ಹಿಟಾಚಿ ಮೂಲಕ ಲಾರಿಗಳಿಗೆ ತುಂಬಿಸಿ ದಿನನಿತ್ಯ 50ರಿಂದ 60 ಲೋಡ್ ಬೆಂಗಳೂರು ಕಡೆಗೆ ಸಾಗಿಸಲಾಗುತ್ತಿದೆ. ಅಲ್ಲದೆ ಗೋಣಿ ಚೀಲಗಳಲ್ಲಿ ತುಂಬಿಸಿ ಐದಾರು ಲೋಡ್ ಸಾಗಿಸಲಾಗುತ್ತಿದೆ ಎಂಬ ದೂರುಗಳು ಕೇಳಿಬಂದಿವೆ.
Advertisement
ನೂತನ ಸೇತುವೆ ಬಳಿ ಚತುಷ್ಪಥ ಕಾಮಗಾರಿಗಾಗಿ ನಿರ್ಮಿಸಿರುವ ಶೆಡ್ ಬಳಿಯಿಂದ ಖಾಸಗಿ ವ್ಯಕ್ತಿಯೋರ್ವರ ಜಮೀನಿನ ಮೂಲಕ ನದಿಗೆ ರಸ್ತೆ ನಿರ್ಮಿಸಲಾಗಿದ್ದು, ಆ ಮೂಲಕ ಮರಳು ಸಾಗಾಟ ನಡೆಯುತ್ತಿದೆ. 3 ಕಡೆ ಪ್ರತ್ಯೇಕವಾಗಿ ಮರಳು ತೆಗೆಯಲಾಗುತ್ತಿದ್ದು, ಸರಕಾರದ ಬೊಕ್ಕಸಕ್ಕೆ ದಿನಂಪ್ರತಿ ಲಕ್ಷಾಂತರ ರೂಪಾಯಿ ವಂಚನೆ ಆಗುತ್ತಿದೆ ಎಂದು ತಿಳಿಸಿರುವ ಸ್ಥಳೀಯರು, ಸಂಬಂಧಪಟ್ಟ ಇಲಾಖೆಯಾಗಲೀ ಜಿಲ್ಲಾಡಳಿತವಾಗಲೀ ಮೌನವಾಗಿರುವುದೇಕೆ ಎಂದು ಪ್ರಶ್ನಿಸಿದ್ದಾರೆ.
ನೂರಾರು ಲಾರಿಗಳ ಸಂಚಾರದಿಂದ ರಸ್ತೆ ಸಂಪೂರ್ಣವಾಗಿ ಹಾಳಾಗುತ್ತಿದೆ ಎಂದು ಆರೋಪಿಸಿ ನಟ್ಟಿಬೈಲ್ ಗ್ರಾಮಸ್ಥರು ಕೆಲವು ದಿನಗಳ ಹಿಂದೆ ಮರಳು ಸಾಗಾಟಕ್ಕೆ ತಡೆ ಒಡ್ಡಿದ್ದರು. ಬಳಿಕ ನಂದಿನಿ ನಗರದ ಮೂಲಕ ರಸ್ತೆ ಸಂಪರ್ಕ ಮಾಡಿಕೊಂಡು ಹೋಗಲಾರಂಭಿಸಿದ್ದು, ಅಲ್ಲಿನ ಜನರಿಂದಲೂ ಆಕ್ಷೇಪ ವ್ಯಕ್ತವಾಗಿದೆ. ಈಗ ಕುಪೇìಲಿನ ಖಾಸಗಿ ಜಾಗವೊಂದರ ಮೂಲಕ ಲಾರಿಗಳು ರಾಷ್ಟ್ರೀಯ ಹೆದ್ದಾರಿಯನ್ನು ಸೇರುತ್ತಿವೆ.
ಡ್ರೆಜ್ಜಿಂಗ್ ಯಂತ್ರ ಬಳಕೆ
ಒಟ್ಟು ಮೂರು ಕಡೆಗಳಲ್ಲಿ ಅಕ್ರಮ ಮರಳುಗಾರಿಕೆ ನಡೆಯುತ್ತಿದೆ. ಕುಮಾರಧಾರೆಯಲ್ಲಿ ಉಪ್ಪಿನಂಗಡಿ ಗ್ರಾಮದ ಕುಪೇìಲು ಮತ್ತು ನೆಕ್ಕಿಲಾಡಿ ಗ್ರಾಮದ ಬೋಳಂತಿಲ ನಡುವೆ ಪುತ್ತೂರಿಗೆ ಕುಡಿಯುವ ನೀರು ಸರಬರಾಜು ಮಾಡುವ ಅಣೆಕಟ್ಟು ಇದ್ದು, ಅದರ ಸನಿಹದಲ್ಲಿ ಡ್ರೆಜ್ಜಿಂಗ್ ಯಂತ್ರದ ಮೂಲಕ ಮರಳು ತೆಗೆಯಲಾಗುತ್ತಿದೆ.
ಇದರ ಸನಿಹದಲ್ಲೇ ಇನ್ನೊಂದು ಅಡ್ಡೆ ಇದ್ದು, ಅಲ್ಲಿ ಬೋಟ್ ಮೂಲಕ ಉತ್ತರ
ಪ್ರದೇಶ ಮೂಲಕ ಕೆಲಸಗಾರರು ನದಿಯಲ್ಲಿ ಮುಳುಗಿ ಮರಳು ಸಂಗ್ರಹಿಸುತ್ತಿದ್ದಾರೆ. ಮೂರನೇ ಅಡ್ಡೆಯು ಕುಮಾರಧಾರಾ ಸೇತುವೆಯಿಂದಲೇ ಕಾಣುವಂತಿದೆ. ಸೇತುವೆಯಿಂದ ಕೇವಲ 100 ಮೀ. ದೂರದಲ್ಲಿ ಮರಳು ತೆಗೆಯಲಾಗುತ್ತಿದೆ. ಗೋಣಿ ಚೀಲಗಳಲ್ಲಿ ಸಾಗಾಟ!
ಅಕ್ರಮ ಮರಳುಗಾರಿಕೆಯ 3 ಅಡ್ಡೆಗಳ ಮಧ್ಯೆ ಒಂದು ಶೆಡ್ ನಿರ್ಮಿಸಲಾಗಿದ್ದು, ಅಲ್ಲಿ ಮರಳನ್ನು ಗೋಣಿ ಚೀಲದಲ್ಲಿ ತುಂಬಿಸಿ ರಾತ್ರಿ ಹೊತ್ತಿನಲ್ಲಿ ಕಂಟೈನರ್ ಮತ್ತು ಲಾರಿಯ ಮೂಲಕ ಬೆಂಗಳೂರು, ಮೈಸೂರು ಮೊದಲಾದ ಕಡೆಗೆ ಸಾಗಾಟ ಮಾಡುತ್ತಿರುವುದಾಗಿ ಹೇಳಲಾಗುತ್ತಿದೆ. ಸುಮಾರು 15 ಮಂದಿ ಇಲ್ಲಿ ನಿರಂತರವಾಗಿ ಕೆಲಸ ನಿರ್ವಹಿಸುತ್ತಿದ್ದಾರೆ. ಸುಮಾರು 5 ಲಾರಿ ಲೋಡ್ ಮರಳು ಈ ರೀತಿ ಸಾಗಾಟ ಆಗುತ್ತಿದೆ ಎಂದು ಸ್ಥಳೀಯರು ಆರೋಪಿಸಿದ್ದಾರೆ.
Related Articles
ಮರಳು ಸಾಗಾಟದ ಲಾರಿಗಳಿಂದಾಗಿ ರಸ್ತೆಗಳು ಹಾನಿಗೀಡಾಗಿವೆ. ಈಗಾಗಲೇ 2 ಕಡೆಗಳಲ್ಲಿ ಸ್ಥಳೀಯರು ತಡೆ ಒಡ್ಡಿದ್ದಾರೆ. ಆದರೂ ಬೇರೊಂದು ರಸ್ತೆಯ ಮೂಲಕ ಸಾಗಾಟ ನಡೆಯುತ್ತಿದೆ. ಇದೇ ರೀತಿ ಹಲವು ಕಡೆ ನಡೆಯುತ್ತಿದೆ. ಕಣ್ಣೆದುರೇ ನಡೆಯುತ್ತಿರುವ ಅಕ್ರಮವಾಗಿದ್ದರೂ ಪೊಲೀಸ್ ಇಲಾಖೆಯಿಂದ ಹಿಡಿದು ಯಾವೊಬ್ಬ ಅಧಿಕಾರಿಯೂ ಇತ್ತ ತಿರುಗಿಯೂ ನೋಡುವುದಿಲ್ಲ, ಜಿಲ್ಲಾಧಿಕಾರಿಗಳು ಕ್ರಮ ಕೈಗೊಳ್ಳುವಂತೆ ಆಗ್ರಹಿಸುತ್ತೇನೆ ಎಂದು ಉಪ್ಪಿನಂಗಡಿ ಗ್ರಾ.ಪಂ. ಸದಸ್ಯ ಧನಂಜಯ ಕುಮಾರ್ ಆಗ್ರಹಿಸಿದ್ದಾರೆ.
Advertisement
ಅನುಮತಿಯ ದುರುಪಯೋಗ ಪುತ್ತೂರು ನಗರಕ್ಕೆ ನೀರು ಸರಬರಾಜು ಆಗುವ ಅಣೆಕಟ್ಟು ಪ್ರದೇಶದಲ್ಲಿ ತುಂಬಿರುವ ಹೂಳನ್ನು ತೆರವುಗೊಳಿಸಲು ಅನುಮತಿಸುವಂತೆ ಪುತ್ತೂರು ಪುರಸಭೆಯು ಭೂ ವಿಜ್ಞಾನ ಇಲಾಖೆಗೆ ಮನವಿ ಸಲ್ಲಿಸಿದ್ದು, ಅದರಂತೆ ಇಲಾಖೆಯು 34ನೇ ನೆಕ್ಕಿಲಾಡಿ ಗ್ರಾಮ ವ್ಯಾಪ್ತಿಯ ಸರ್ವೇ ನಂ. 68ರಲ್ಲಿರುವ ಅಣೆಕಟ್ಟಿನ ಹಿನ್ನೀರಿನ 1.25 ಎಕರೆ ಪ್ರದೇಶದಲ್ಲಿ ಅಣೆಕಟ್ಟಿಗೆ ಯಾವುದೇ ರೀತಿಯ ಹಾನಿಯಾಗದಂತೆ ಸಾಂಪ್ರದಾಯಿಕವಾಗಿ ಮಾನವ ಶಕ್ತಿಯಿಂದ ತೆಗೆದು ಸೂಕ್ತ ಪ್ರದೇಶದಲ್ಲಿ ದಾಸ್ತಾನು ಮಾಡುವಂತೆ ಆದೇಶಿಸಿದೆ. ಆದರೆ ಇಲ್ಲಿ ಅನುಮತಿಯನ್ನು ದುರುಪಯೋಗಪಡಿಸಿಕೊಳ್ಳಲಾಗಿದೆ ಎಂದು ಹೇಳಲಾಗುತ್ತಿದೆ.