Advertisement

Uppinangady: ಹೆದ್ದಾರಿ ಸಂಚಾರ ಅಡ್ಡಾದಿಡ್ಡಿ!

12:58 PM Oct 24, 2024 | Team Udayavani |

ಪುತ್ತೂರು: ಐವತ್ತು ವರ್ಷಗಳ ಹಿಂದೆ ಮಾರಿ ಬೊಲ್ಲಕ್ಕೆ ಸಾಕ್ಷಿಯಾಗಿದ್ದ ಉಪ್ಪಿನಂಗಡಿ ಸಂಗಮ ತಾಣಕ್ಕೆ ಕಳೆದ ನಾಲ್ಕೈದು ವರ್ಷಗಳಿಂದ ಟ್ರಾಫಿಕ್‌ ಬೊಲ್ಲ ಅಪ್ಪಳಿಸಿದೆ..! ಕುಮಾರಧಾರೆ, ನೇತ್ರಾವತಿ ನದಿಗಳೆರಡು ಉಕ್ಕಿ ಹರಿಯುವ ಬೊಲ್ಲದ ನೀರು ಕೆಲವು ತಾಸಿನಲ್ಲಿ ಇಳಿಯಬಹುದು, ಆದರೆ ಇಲ್ಲಿನ ಟ್ರಾಫಿಕ್‌ ಬೊಲ್ಲ ಕೆಲವು ತಿಂಗಳು ಕಳೆದರೂ ಇಳಿಯುವುದು ಅನುಮಾನ. ಇದಕ್ಕೆ ಮುಖ್ಯ ಕಾರಣ ರಾಷ್ಟ್ರೀಯ ಹೆದ್ದಾರಿ ಚತುಷ್ಪಥ ಕಾಮಗಾರಿಯ ಅವ್ಯವಸ್ಥೆ.

Advertisement

ಬಿ.ಸಿ.ರೋಡು-ಅಡ್ಡಹೊಳೆ ರಾಷ್ಟ್ರೀಯ ಹೆದ್ದಾರಿಯ ಚತುಷ್ಪಥ ಕಾಮಗಾರಿಯಲ್ಲಿ ಕಲ್ಲಡ್ಕದ ಅನಂತರ ಎದುರಾಗುವ ಪಟ್ಟಣ ಉಪ್ಪಿನಂಗಡಿ. ಧಾರ್ಮಿಕ ಹಿನ್ನೆಲೆಯಲ್ಲಿಯೂ ಮಹತ್ವದ ಕ್ಷೇತ್ರ ಇದಾಗಿದ್ದು ದಿನಂಪ್ರತಿ ಜನದಟ್ಟಣೆಯಿಂದ ತುಂಬಿರುತ್ತದೆ. ಹೀಗಾಗಿ ಹೆದ್ದಾರಿ ಮತ್ತು ಆಸುಪಾಸಿನಲ್ಲಿ ಸಂಚಾರ ಸಂಪೂರ್ಣ ಅಡ್ಡಾ ದಿಡ್ಡಿಯಾಗಿದೆ.

ಸಾಮರ್ಥ್ಯ ಇಲ್ಲದ ಸರ್ವೀಸ್‌ ರಸ್ತೆ..!
5 ಪ್ರಮುಖ ರಸ್ತೆಗಳು ಸಂಗಮವಾಗುವ ಸ್ಥಳ ಉಪ್ಪಿ ನಂಗಡಿ ಜಂಕ್ಷನ್‌. ಪುತ್ತೂರು, ಮಂಗಳೂರು ಭಾಗದಿಂದ, ನೆಲ್ಯಾಡಿ, ಕಡಬ ಭಾಗದಿಂದ, ಬೆಳ್ತಂಗಡಿ ಭಾಗದಿಂದ ಬರುವ ವಾಹನಗಳು ಉಪ್ಪಿನಂಗಡಿ ಪಟ್ಟಣದ ಮಧ್ಯಭಾಗದಲ್ಲಿ ಹಾದು ಹೋಗಿರುವ ರಾ.ಹೆ.ಯಲ್ಲಿ ಸಾಗುತ್ತವೆ. ಈ ಐದು ದಿಕ್ಕಿನಿಂದ ಏಕಕಾಲಕ್ಕೆ ಬರುವ ವಾಹನಗಳು ಜಂಕ್ಷನ್‌ನಲ್ಲಿ ನಿರ್ಮಾಣ ಹಂತದಲ್ಲಿರುವ ವೆಹಿಕಲ್‌ ಅಂಡರ್‌ಪಾಸ್‌(ವಿಯುಪಿ)ನ ಎರಡು ಬದಿಯಲ್ಲಿ ನಿರ್ಮಿಸಿರುವ ಸರ್ವೀಸ್‌ ರಸ್ತೆಯ ಮೂಲಕವೇ ಸಂಚರಿಸಬೇಕು. ಆದರೆ ಐದು ದಿಕ್ಕಿನಿಂದ ಬರುವ ವಾಹನವನ್ನು ತಡೆದುಕೊಳ್ಳುವ ಸ್ಥಿತಿ ಸರ್ವೀಸ್‌ ರಸ್ತೆಗೆ ಇಲ್ಲದಿರುವುದೇ ವಾಹನ ದಟ್ಟಣೆಗೆ ಕಾರಣಗಳಲ್ಲಿ ಒಂದು. ಎರಡು ಬದಿಯಲ್ಲಿ ಸರ್ವೀಸ್‌ ರಸ್ತೆ ಇದ್ದು ಏಕಮುಖ ಸಂಚಾರ ಇರಬೇಕಿದ್ದರೂ ಸ್ಥಳವಕಾಶ ಕೊರತೆಯಿಂದ ಒಂದೇ ಬದಿಯಲ್ಲಿಯೇ ಎರಡು ದಿಕ್ಕಿನ ವಾಹನಗಳು ನುಗ್ಗುತ್ತಿವೆ. ಪುತ್ತೂರು ಭಾಗದಿಂದ ಬೆಳ್ತಂಗಡಿ ಹೋಗುವವರು ಸರ್ವೀಸ್‌ ರಸ್ತೆಯಿಂದ ಪಾರಾಗಲು ರಾ. ಹೆ.ಗೆ ತಾಗಿಕೊಂಡು ದೇವಾಲಯಕ್ಕೆ ಇರುವ ಸಂಪರ್ಕ ರಸ್ತೆಯಲ್ಲಿ ಸಂಚರಿಸಿ ಬಸ್‌ ನಿಲ್ದಾಣಕ್ಕೆ ಬಂದು ಸಂಚಾರ ಮುಂದುವರಿಸುತ್ತಿರುವ ದೃಶ್ಯ ಕಂಡು ಬರುತ್ತಿದೆ.

ಸಮಸ್ಯೆಗಳು ಹಲವಾರು
– ಗಾಂಧಿ ಪಾರ್ಕ್‌ ಸಮೀಪ ಲಘು ವಾಹನಗಳ ಸಂಚಾರಕ್ಕೆಂದು ಇರುವ ಅಂಡರ್‌ಪಾಸ್‌ ಕಾಮಗಾರಿ ಅರ್ಧದಲ್ಲೇ ನಿಂತಿದೆ. ಇದು ಶಾಲಾ ಕಾಲೇಜು ವಿದ್ಯಾರ್ಥಿಗಳ ಸಂಚಾರಕ್ಕೆ, ಉಪ್ಪಿನಂಗಡಿ ಪೇಟೆಗೆ, ಹಿರೇಬಂಡಾಡಿ ರಸ್ತೆಗೆ ಸಂಪರ್ಕ ರಸ್ತೆಯಾಗಿ ಬಳಕೆಯ ಉದ್ದೇಶ ಹೊಂದಲಾಗಿತ್ತು.
– ಮೊನ್ನೆ ಮೊನ್ನೆಯ ತನಕ ಕೆಸರಿನ ಅಭಿಷೇಕವಾಗುತ್ತಿದ್ದ ರಸ್ತೆಯಲ್ಲಿ ಈಗ ಧೂಳಿನ ಅಭಿಷೇಕವಾಗುತ್ತಿದೆ. ಟ್ಯಾಂಕರ್‌ನಲ್ಲಿ ನೀರು ಹಾಯಿಸಿದರೂ ಪ್ರಯೋಜನವಿಲ್ಲ.
– ಉಪ್ಪಿನಂಗಡಿ ಪೇಟೆ, ಗಾಂಧಿ  ಪಾರ್ಕ್‌, ರಾಮನಗರ ಪ್ರದೇಶದ ಮೋರಿಯಲ್ಲಿ ಹರಿದು ಬರುವ ನೀರು ನಟ್ಟಿಬೈಲುನಲ್ಲಿ ತೋಡಿಗೆ ಸೇರಿಕೊಂಡು ನದಿಗೆ ಸೇರುತ್ತಿದ್ದು ತೋಡಿಗೆ ಮಣ್ಣು ಬಿದ್ದ ಪರಿಣಾಮ ಕೃಷಿ ತೋಟಕ್ಕೆ ಹಾನಿಯಾಗಿದೆ.

ಉಪ್ಪಿನಂಗಡಿ ಕಾಮಗಾರಿ ಮುಖ್ಯಾಂಶಗಳು
– ಉಪ್ಪಿನಂಗಡಿ ವೆಹಿಕಲ್‌ ಅಂಡರ್‌ಪಾಸ್‌: ಕೆಲಸ ಪೂರ್ಣ ಆಗಿಲ್ಲ
– ಉಪ್ಪಿನಂಗಡಿ ಸೇತುವೆ: ಪ್ರಗತಿಯಲ್ಲಿದೆ
– ಉಪ್ಪಿನಂಗಡಿ ಸರ್ವಿಸ್‌ ರಸ್ತೆ: ಅಪೂರ್ಣ, ಅವ್ಯವಸ್ಥೆ

Advertisement

ಅಂಡರ್‌ಪಾಸ್‌: ಕೆಲಸಗಾರರೇ ಇಲ್ಲ!
ವೆಹಿಕ್ಯುಲಾರ್‌ ಅಂಡರ್‌ಪಾಸ್‌(ವಿಯುಪಿ)ನ ಇಕ್ಕೆಲಗಳಲ್ಲಿ ಮೇಲ್‌ ಸೇತುವೆ ಸಂಪರ್ಕ ರಸ್ತೆ ನಿರ್ಮಾಣ ಅಪೂರ್ಣ ಸ್ಥಿತಿಯಲ್ಲಿ ಇದೆ. ಕೆಲವೆಡೆ ಕೆಸರು ನೀರು ನಿಂತಿದೆ. ಸರ್ವೀಸ್‌ ರಸ್ತೆಗಳಲ್ಲಿ ಹೊಂಡಗಳು ತುಂಬಿವೆ. ಮೆಷಿನ್‌ಗಳು ನಿಂತಲ್ಲೇ ನಿಂತು ತಿಂಗಳುಗಳೇ ಕಳೆದಂತಿದೆ. ಸ್ಥಳೀಯರು ನೀಡಿದ ಮಾಹಿತಿ ಪ್ರಕಾರ ಕಾಮಗಾರಿ ಮಾಡಲು ಇಲ್ಲಿ ಕೆಲಸಗಾರರೇ ಇಲ್ಲ. ಅವರು ಬೇರೆಡೆಗೆ ಹೋಗಿ ಕೆಲವು ದಿನಗಳೆ ಕಳೆದಿದೆ. ಅವರು ಬಂದ ಬಳಿಕವಷ್ಟೇ ಮತ್ತೆ ಕೆಲಸ ಆರಂಭವಾಗಬೇಕಿದೆ. ಕೆಲಸಗಾರರು ಯಾಕೆ ಹೋಗಿದ್ದಾರೆ ಅನ್ನುವ ಉತ್ತರ ಯಾರ ಬಳಿಯು ಇಲ್ಲ. ಹಾಗಾಗಿ ಸದ್ಯದಲ್ಲಿ ಇಲ್ಲಿ ಅಂಡರ್‌ಪಾಸ್‌ ಅವ್ಯವಸ್ಥೆಗೆ ಮುಕ್ತಿ ಸಿಗದು.

ಮಾಯವಾಗಿದೆ ಗಾಂಧಿ ಪಾರ್ಕ್‌!
ಉಪ್ಪಿನಂಗಡಿ ಹೆದ್ದಾರಿ ಬದಿಯಲ್ಲಿ 1971ರಲ್ಲಿ ಗಾಂಧೀಜಿ ಪ್ರತಿಮೆ ಯಿಟ್ಟು ಗಾಂಧಿ ಪಾರ್ಕ್‌ ಸ್ಥಾಪಿಸಲಾಗಿತ್ತು. ಚತುಷ್ಪಥ ರಸ್ತೆಯ ಒಂದು ಭಾಗದ ದ್ವಿಪಥ ರಸ್ತೆ ಪಾರ್ಕ್‌ ಜಾಗವನ್ನು ಪೂರ್ಣ ಪ್ರಮಾಣದಲ್ಲಿ ಆವರಿಸಿದೆ. ಅಚ್ಚರಿಯೆಂದರೆ ದ್ವಿಪಥ ರಸ್ತೆಯ ನಿರ್ಮಾಣವೇ ಆಗಿಲ್ಲ. ರಸ್ತೆಗಾಗಿ ಅಗೆದು ಹಾಕಿದ್ದಷ್ಟೇ ಇಲ್ಲಿನ ಸಾಧನೆ. ಅಂದ ಹಾಗೆ, 1995ರಲ್ಲಿ ಸಮಾನ ಮನಸ್ಕ ಯುವಕರ ‘ಗಾಂಧಿ ಪಾರ್ಕ್‌ (ಗಾಂಪಾ) ಗೆಳೆಯರು’ ಸಂಘಟನೆ ಅನ್ಯಾ ಯದ ವಿರುದ್ಧ ಹೋರಾಟ ನಡೆಸಿತ್ತು. ಕಾಲ ಕಳೆದಂತೆ ಗೆಳೆಯರೆಲ್ಲ ಚದುರಿ ಹೋಗಿದ್ದಾರೆ. ಗಾಂಧಿ ಪಾರ್ಕ್‌ ಅನ್ನು ಹೆದ್ದಾರಿ ಚದುರಿಸಿದೆ.

-ಕಿರಣ್‌ ಪ್ರಸಾದ್‌ ಕುಂಡಡ್ಕ

Advertisement

Udayavani is now on Telegram. Click here to join our channel and stay updated with the latest news.

Next