Advertisement

Uppinangady ಬಿಸಿಲ ಬೇಗೆ: ಬತ್ತುತ್ತಿದೆ ಕೆರೆಮೂಲೆಯ ಕೆರೆ; ಸಾವಿರಾರು ಮೀನುಗಳ ಮಾರಣ

01:02 AM Apr 16, 2024 | Team Udayavani |

ಉಪ್ಪಿನಂಗಡಿ: ಉಪ್ಪಿನಂಗಡಿ ಗ್ರಾಮ ಪಂಚಾಯತ್‌ ಅಧೀನದ ಸಾರ್ವಜನಿಕ ಕೆರೆಯೊಂದು ಬತ್ತಲಾರಂಭಿಸಿದ್ದು, ಇರುವ ಅಲ್ಪ ಪ್ರಮಾಣದ ನೀರು ಸೂರ್ಯನ ಶಾಖಕ್ಕೆ ಬಿಸಿಯೇರುತ್ತಿರುವ ಕಾರಣ ಸಾವಿರಾರು ಸಂಖ್ಯೆಯ ಮೀನುಗಳು ಸಾವನ್ನಪ್ಪುತ್ತಿವೆ.

Advertisement

ಇಲ್ಲಿನ ಮಠ ಸಫಾನಗರದ ಕೆರೆಮೂಲೆಯಲ್ಲಿ ಗ್ರಾ.ಪಂ.ಗೆ ಸೇರಿದ ಕೆರೆಯೊಂದು ಇದ್ದು, ಅನಾದಿ ಕಾಲದಿಂದಲೂ ಪ್ರಾಣಿ-ಪಕ್ಷಿಗಳಿಗೆ, ರೈತರ ಕೃಷಿ ಭೂಮಿಗೆ ಯಥೇತ್ಛವಾಗಿ ನೀರುಣಿಸುತ್ತಿತ್ತು. ಆದರೆ ಆಧುನಿಕತೆಯತ್ತ ಸಾಗುತ್ತಿದ್ದಾಗ ಬಹುತೇಕ ರೈತರು ತಮ್ಮ ಜಮೀನಿನಲ್ಲಿ ಕೊಳವೆ ಬಾವಿ ಕೊರೆದು ಕೃಷಿಗೆ ನೀರು ಉಣಿಸಲಾರಂಭಿಸಿದ್ದರಿಂದ ಈ ಕೆರೆಯ ನೀರಿಗೆ ಬೇಡಿಕೆ ಕಡಿಮೆಯಾಗಿತ್ತು. ನಿರ್ವಹಣೆಯಿಲ್ಲದ ಕಾರಣ ಅಲ್ಲಲ್ಲಿ ಜರಿಯಲಾರಂಭಿಸಿತ್ತು ಹಾಗೂ ಹೂಳು ತುಂಬಿತ್ತು.

50 ಲಕ್ಷ ರೂಪಾಯಿ
ವೆಚ್ಚದಲ್ಲಿ ಅಭಿವೃದ್ಧಿ
10 ವರ್ಷಗಳ ಹಿಂದಿನ ಸರಕಾರ ಎಲ್ಲ ಸರಕಾರಿ ಕೆರೆಗಳನ್ನು ಅಭಿವೃದ್ಧಿಪಡಿಸಲು ಆದೇಶಿಸಿದ ಹಿನ್ನೆಲೆಯಲ್ಲಿ ಆಗಿನ ಶಾಸಕರು 25 ಲಕ್ಷ ರೂ. ಅನುದಾನದಲ್ಲಿ ಈ ಕೆರೆಗೆ ತಡೆಗೋಡೆ ನಿರ್ಮಿಸಿದ್ದರು. ಮುಂದಿನ ದಿನಗಳಲ್ಲಿ ಮತ್ತೆ ಗ್ರಾಮ ಪಂಚಾಯತ್‌ ಮಹಾತ್ಮಾ ಗಾಂಧಿ ಉದ್ಯೋಗ ಖಾತ್ರಿ ಯೋಜನೆಯಡಿ 25 ಲಕ್ಷ ರೂ. ವೆಚ್ಚದಲ್ಲಿ ಹೂಳೆತ್ತಿ ಸಂಪೂರ್ಣ ನವೀಕರಿಸಲಾಗಿತ್ತು. ನೀರು ತುಂಬಿಕೊಂಡ ಕೆರೆ ನಳನಳಿಸುತ್ತಿತ್ತು. ಕೆಲವು ವರ್ಷಗಳಿಂದ ನೀರಿನ ಪ್ರಮಾಣ ಸರಿಸುಮಾರು ಇದ್ದ ಕಾರಣ ಅದನ್ನು ಸದ್ಬಳಕೆ ಮಾಡಿಕೊಳ್ಳುವ ಉದ್ದೇಶದಿಂದ ಸ್ಥಳೀಯ ಗ್ರಾಮಸ್ಥ ಅಬ್ದುಲ್‌ ರಹಿಮಾನ್‌ ಅವರು 8 ತಿಂಗಳ ಹಿಂದೆ ಗ್ರಾ.ಪಂ. ಅನುಮತಿ ಪಡೆದು ಲಕ್ಷಾಂತರ ರೂಪಾಯಿ ವ್ಯಯಿಸಿ ಕೆರೆಯಲ್ಲಿ ಮೀನಿನ ಕೃಷಿ ಆರಂಭಿಸಿದ್ದರು. ಇದೀಗ ಏಕಾಏಕಿ ನೀರು ಬತ್ತತೊಡಗಿದ್ದು, ಮೀನು ಕೃಷಿಕ ತಲೆಗೆ ಕೈಹೊತ್ತುಕೊಳ್ಳುವಂತಾಗಿದೆ.

ಕೆರೆ ವ್ಯಾಪಿಸಿರುವ ಒಟ್ಟು ಪ್ರದೇಶ: 20 ಸೆಂಟ್ಸ್‌
ಉದ್ದ 175 ಅಡಿ
ಅಗಲ 100 ಅಡಿ
ಆಳ 15 ಅಡಿ

Advertisement

Udayavani is now on Telegram. Click here to join our channel and stay updated with the latest news.

Next