Advertisement

Uppinangady: ಲಾರಿಯೊಳಗೆ ಚಾಲಕ ಸಾವು- ಎರಡು ದಿನದ ಬಳಿಕ ಪ್ರಕರಣ ಬೆಳಕಿಗೆ

11:12 PM Dec 29, 2023 | Team Udayavani |

ಉಪ್ಪಿನಂಗಡಿ: ಇಲ್ಲಿನ ಮಂಗಳೂರು- ಬೆಂಗಳೂರು ರಾಷ್ಟ್ರೀಯ ಹೆದ್ದಾರಿ ಬದಿಯಲ್ಲಿ ಲಾರಿ ನಿಲ್ಲಿಸಿ ಮಲಗಿದ್ದ ಲಾರಿ ಚಾಲಕ ಹೃದಯಾಘಾತದಿಂದ ಲಾರಿಯಲ್ಲೇ ಮೃತಪಟ್ಟಿದ್ದು, ಎರಡು ದಿನಗಳ ಬಳಿಕ ಪ್ರಕರಣ ಬೆಳಕಿಗೆ ಬಂದಿದೆ.

Advertisement

ಚನ್ನಪಟ್ಟಣದ ಖಲೀಲ್‌ ಖಾನ್‌ (58) ಮೃತ ವ್ಯಕ್ತಿ. ಮೈಸೂರಿನಿಂದ ಬಿ.ಸಿ. ರೋಡಿಗೆ ಹಾಸಿಗೆಯ ಲೋಡನ್ನು ಲಾರಿಯಲ್ಲಿ ತಂದಿದ್ದ ಅವರು ಅದನ್ನು ಖಾಲಿ ಮಾಡಿ ಎರಡು ದಿನಗಳ ಹಿಂದೆ ರಾತ್ರಿ ಉಪ್ಪಿನಂಗಡಿಯ ರಾಷ್ಟ್ರೀಯ ಹೆದ್ದಾರಿ ಬದಿಯಲ್ಲಿ ಲಾರಿ ನಿಲ್ಲಿಸಿ ಮಲಗಿದ್ದ ಸ್ಥಿತಿಯಲ್ಲಿಯೇ ಮೃತಪಟ್ಟಿರುವುದು ಕಂಡು ಬಂದಿದೆ.

ಮೃತ ಖಲೀಲ್‌ ಖಾನ್‌ ಬುಧವಾರ ರಾತ್ರಿ ತನ್ನ ಮನೆಗೆ ಪೋನಾಯಿಸಿ ತನಗೆ ಎದೆ ನೋವು ಕಾಣಿಸಿರುವುದರಿಂದ ಉಪ್ಪಿನಂಗಡಿಯಲ್ಲಿ ವಿಶ್ರಾಂತಿ ಪಡೆದು ನಾಳೆ ಬರುವೆನೆಂದು ತಿಳಿಸಿದ್ದು, ಗುರುವಾರ ಅವರು ಮನೆಗೆ ಹಿಂತಿರುಗದೇ ಇದ್ದ ಕಾರಣ ಅವರ ಪತ್ತೆಗಾಗಿ ಸಾಮಾಜಿಕ ಜಾಲತಾಣದ ಮೊರೆ ಹೋಗಲಾಯಿತು. ಈ ವೇಳೆ ಉಪ್ಪಿನಂಗಡಿಯ ರಾ.ಹೆ. 75ರಲ್ಲಿನ ಲೋಬೊ ಕಾಂಪ್ಲೆಕ್ಸ್‌ ಮುಂಭಾಗದಲ್ಲಿ ನಿಲ್ಲಿಸಲಾದ ಲಾರಿಯನ್ನು ಪರಿಶೀಲಿಸಿದಾಗ ಅದರಲ್ಲಿ ವ್ಯಕ್ತಿಯೋರ್ವರು ಮಲಗಿದ್ದ ಸ್ಥಿತಿಯಲ್ಲಿಯೇ ಮೃತಪಟ್ಟಿರುವುದು ಕಂಡುಬಂತು.

ಸದಾ ಜನ ಸಂಚಾರವಿರುವ ಸ್ಥಳದಲ್ಲಿ ಲಾರಿಯೊಂದು ದಿನವಿಡೀ ನಿಂತಿರುವುದನ್ನು ಯಾರೂ ಗಮನಿಸದ ಕಾರಣಕ್ಕೆ ಲಾರಿಯೊಳಗೆ ಶವ ಎರಡು ದಿನಗಳ ಕಾಲ ಇರುವಂತಾಯಿತು. ಬಳಿಕ ಉಪ್ಪಿನಂಗಡಿಯ ಸಾಮಾಜಿಕ ಕಾರ್ಯಕರ್ತ ಫಾರೂಕ್‌ ಜಿಂದಗಿ ಹಾಗೂ ಉಪ್ಪಿನಂಗಡಿ ಎಸ್ಕೆಎಸ್ಸೆಸ್ಸೆಫ್ ವಿಖಾಯ ತಂಡದವರು ಲಾರಿಯಿಂದ ಮೃತದೇಹವನ್ನು ತೆಗೆದು, ಉಪ್ಪಿನಂಗಡಿ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಸಿ, ಇಲ್ಲಿನ ಮಾಲೀಕುದ್ದೀನಾರ್‌ ಮಸೀದಿಯಲ್ಲಿ ಮೃತದೇಹದ ಅಂತಿಮ ವಿಧಿ-ವಿಧಾನಗಳನ್ನು ನಡೆಸಿ, ಅವರ ಊರಿಗೆ ಮೃತದೇಹವನ್ನು ಕಳುಹಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next