Advertisement
ಉಪ್ಪಿನಂಗಡಿ ಗ್ರಾ.ಪಂ. ಅಧ್ಯಕ್ಷ ಕೆ. ಅಬ್ದುಲ್ ರಹಿಮಾನ್ ಅವರ ಅಧ್ಯಕ್ಷತೆಯಲ್ಲಿ ನಡೆದ ಮಕ್ಕಳ ಗ್ರಾಮಸಭೆಯಲ್ಲಿ ಸೈಂಟ್ ಮೇರೀಸ್ ವಿದ್ಯಾ ಸಂಸ್ಥೆಯ ವಿದ್ಯಾರ್ಥಿ ಗುರುಪ್ರಸಾದ್, ಹೆದ್ದಾರಿ ವಿಸ್ತರಣೆ ಕಾಮಗಾರಿಯ ವೇಳೆ ವಿದ್ಯಾ ಸಂಸ್ಥೆಗಳ ವಿದ್ಯಾರ್ಥಿಗಳಿಗೆ ಅನುಕೂಲವಾಗುವಂತೆ ಮೇಲ್ಸೇತುವೆಯ ನಿರ್ಮಾಣ ಕಾರ್ಯ ನಡೆಯಬೇಕಾಗಿದೆ ಎಂದು ಆಗ್ರಹಿಸಿದರು. ಈ ಬೇಡಿಕೆಗೆ ವಿದ್ಯಾರ್ಥಿ ಸಮೂಹದ ಒಕ್ಕೊರಲ ಬೆಂಬಲ ವ್ಯಕ್ತವಾದಾಗ ಪ್ರತಿಕ್ರಿಯಿಸಿದ ಅಧ್ಯಕ್ಷರು, ಈ ಬಗ್ಗೆ ಹೆದ್ದಾರಿ ಇಲಾಖೆ ಪ್ರಾಧಿಕಾರಕ್ಕೆ ವಿನಂತಿಸಲಾಗುವುದೆಂದು ಭರವಸೆ ನೀಡಿದರು.
ಇಂದ್ರಪ್ರಸ್ಥ ವಿದ್ಯಾರ್ಥಿಗಳಾದ ಅನಿಕೇತ್ ಕುಮಾರ್ ಹಾಗೂ ಸಾತ್ವಿಕ್ ತ್ಯಾಜ್ಯ ನಿರ್ಮೂಲನೆಯಲ್ಲಿ ನೈಸರ್ಗಿಕ ವಸ್ತುಗಳ ಬಳಕೆಯ ಸಾಧ್ಯತೆ ಎಂಬ ವಿಚಾರದಲ್ಲಿ ಪ್ರಾಯೋಗಿಕ ವರದಿಯನ್ನು ಮಂಡಿಸಿದರು. ಯು. ಋತ್ವಿಕ್ ಪೈ, ಸಮರ್ಥ್ ಮತ್ತಿತರ ವಿದ್ಯಾರ್ಥಿಗಳು ನೈಸರ್ಗಿಕ ವಸ್ತುಗಳಿಂದಾಗಿ ದಿನನಿತ್ಯದ ಕಾರ್ಯ ಚಟುವಟಿಕೆಗಳಲ್ಲಿ ನೀರಿನ ಮಿತಬಳಕೆ ಸಾಧ್ಯ ಎಂಬ ವಿಷಯದಲ್ಲೂ ಅಧ್ಯಯನ ವರದಿಯ ಮಂಡನೆ ಮಾಡಿ, ಪರಿಸರ ಸ್ವಚ್ಛತೆ ಹಾಗೂ ರಕ್ಷಣೆಗೆ ಎಲ್ಲರೂ ಕೈ ಜೋಡಿಸಬೇಕೆಂದು ವಿನಂತಿಸಿದರು.
Related Articles
ಹೆದ್ದಾರಿ ಹಾಗೂ ರಸ್ತೆ ಬದಿಗಳಲ್ಲಿ ಫಾಸ್ಟ್ ಫುಡ್‌ಗಳ ಹಾವಳಿ ಮೇರೆ ಮೀರಿದ್ದು, ನೂರಾರು ವಿದ್ಯಾರ್ಥಿಗಳು ಇಂತಹ ಆಹಾರಗಳಿಂದ ಆಕರ್ಷಿತರಾಗಿ ಆರೋಗ್ಯವನ್ನು ಕೆಡಿಸಿಕೊಳ್ಳುವ ಸ್ಥಿತಿ ನಿರ್ಮಾಣವಾಗಿದೆ. ಅಸುರಕ್ಷಿತ ಸ್ಥಳಗಳಲ್ಲಿ ಆಹಾರ ವಸ್ತುಗಳ ಮಾರಾಟಕ್ಕೆ ತಡೆಯೊಡ್ಡಬೇಕು. ಆಹಾರ ವಸ್ತುಗಳಿಗೆ ವಿಷಕಾರಿ ರಾಸಾಯನಿಕಗಳನ್ನು ಬೆರೆಸುವುದನ್ನು ತಡೆಗಟ್ಟಬೇಕು. ಈ ಕುರಿತು ಅಗತ್ಯ ಕ್ರಮಗಳನ್ನು ಕೈಗೊಂಡು ವಿಷಕಾರಿ ಆಹಾರ ಪದಾರ್ಥಗಳಿಂದ ಮಕ್ಕಳನ್ನು ರಕ್ಷಿಸಿ ಎಂದು ಇಂದ್ರಪ್ರಸ್ಥ ವಿದ್ಯಾಲಯದ ವಿದ್ಯಾರ್ಥಿ ಸೈಫುದ್ದೀನ್ ಅಗ್ರಹಿಸಿದರು. ಮಕ್ಕಳ ಗ್ರಾಮ ಸಭೆಯಲ್ಲಿ ಕೈಗೊಂಡ ನಿರ್ಣಯಗಳ ಬಗ್ಗೆ ಅರಿವು ಮೂಡಿಸುವ ಕಾರ್ಯವೂ ಆಗಬೇಕೆಂದು ಆಗ್ರಹಿಸಿದರು. ಪ್ರತಿಕ್ರಿಯಿಸಿದ ಗ್ರಾ.ಪಂ. ಅಧ್ಯಕ್ಷರು, ಆಹಾರ ಮತ್ತು ನಾಗರಿಕ ಪೂರೈಕೆ ವಿಭಾಗದ ಅಧಿಕಾರಿಗಳ ಗಮನ ಸೆಳೆಯುವುದಾಗಿ ತಿಳಿಸಿದರು.
Advertisement