Advertisement

ಬತ್ತಿ ಹೋಗುವ ಹಂತದಲ್ಲಿದೆ ಬಂದಾರು ಕೆರೆ

12:28 PM Apr 01, 2019 | Team Udayavani |

ಉಪ್ಪಿನಂಗಡಿ : ಇಲ್ಲಿಗೆ ಸಮೀಪದ ಬಂದಾರು ಎನ್ನುವಲ್ಲಿನ ಬಿಸಿ ನೀರ ಚಿಲುಮೆಯ ಕೆರೆಯು ಈ ಬಾರಿಯ ಸುಡು ಬಿಸಿಲ ತಾಪಕ್ಕೆ ಬತ್ತಿ ಹೋಗುವ ಹಂತಕ್ಕೆ ತಲುಪಿದೆ.

Advertisement

ಬಂದಾರಿನ ಈ ಕೆರೆಯು ವರ್ಷದ ಮಳೆಗಾಲ, ಚಳಿಗಾಲ, ಬೇಸಗೆ ಕಾಲದುದ್ದಕ್ಕೂ ಸುಮಾರು 36 ಡಿಗ್ರಿ ಸೆಲ್ಸಿಯಸ್‌ ಉಷ್ಣಾಂಶದೊಂದಿಗೆ ಬಿಸಿಯಾಗಿದ್ದು, ಈ ನೀರಿನಲ್ಲಿ ಗಂಧಕದ ಅಂಶ ಹೇರಳವಾಗಿರುವುದರಿಂದ ಹಲವಾರು ಬಗೆಯ ಚರ್ಮವ್ಯಾಧಿಗಳು ನಿವಾರಣೆಯಾಗುತ್ತಿವೆ.

ಈ ಹಿನ್ನೆಲೆಯಲ್ಲಿ ದೂರದ ಕೇರಳ, ತಮಿಳುನಾಡು, ಬೆಂಗಳೂರು ಸೇರಿದಂತೆ ವಿವಿಧೆಡೆಗಳಿಂದ ಹಲವಾರು ಮಂದಿ ಬಂದು ಈ ಕೆರೆಯಲ್ಲಿ ಸ್ನಾನ ಮಾಡಿ ಇಲ್ಲಿನ ನೀರನ್ನು ಕೊಂಡೊಯ್ಯುತ್ತಾರೆ.

ಈ ಕೆರೆಯ ನೀರನ್ನು ಕೃಷಿಗೆ ಬಳಸಿದಾಗ ಯಾವುದೇ ಅನ್ಯ ಗೊಬ್ಬರ ಬಳಕೆ ಮಾಡದೆ ಹೆಚ್ಚಿನ ಕೃಷಿ ಇಳುವರಿಯನ್ನು ಪಡೆಯಲು ಸಾಧ್ಯವಾಗಿದೆ. ಈ ಎಲ್ಲ ಕಾರಣಗಳಿಂದ ಕೇಂದ್ರೀಯ ಅಧ್ಯಯನ ವಿಭಾಗದ ವಿಜ್ಞಾನಿಗಳು ಇಲ್ಲಿಗೆ ಆಗಮಿಸಿ ಕೆರೆಯ ನೀರನ್ನು ಅಧ್ಯಯನಕ್ಕೆ ಒಳಪಡಿಸಿದ್ದರು.

ಪ್ರಾಕೃತಿಕ ಅಸಮತೋಲನ
ಈ ಎಲ್ಲ ವೈಶಿಷ್ಟ್ಯಗಳನ್ನು ಹೊಂದಿರುವ ಕೆರೆಯು ಈ ವರ್ಷ ಸಂಪೂರ್ಣ ಬತ್ತುವ ಭೀತಿಗೆ ಒಳಗಾಗಿರುವುದು ಪ್ರಕೃತಿಯಲ್ಲಿ ಸಮತೋಲನ ತಪ್ಪುತ್ತಿರುವ ವಿದ್ಯಮಾನವಾಗಿದೆ ಎಂದು ಪರಿಸರ ಪ್ರೇಮಿ, ಗೃಹರಕ್ಷಕ ದಳದ ಘಟಕಾಧಿಕಾರಿ ದಿನೇಶ್‌ ಅವರು ಹೇಳಿದ್ದಾರೆ.

Advertisement

ವರ್ಷದ ಎಲ್ಲ ದಿನಗಳಲ್ಲಿಯೂ ನೀರಿನ ಮಟ್ಟವನ್ನು ಕಾಯ್ದುಕೊಂಡಿದ್ದ ಈ ಕೆರೆಯ ನೀರು ಈ ಬಾರಿ ಬತ್ತಿ ಹೋಗುವ ಹಂತಕ್ಕೆ ಸಿಲುಕಿರುವುದು ಕಳವಳಕಾರಿ ಎಂದು ಸ್ಥಳೀಯ ನಿವಾಸಿ ಮಹಮ್ಮದ್‌ ಬಂದಾರು ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next