Advertisement
ಉಪ್ಪಿನಂಗಡಿ ಬ್ಯಾಂಕ್ ರಸ್ತೆಯಲ್ಲಿನ ಮಡಿಕೆ ಮತ್ತಿತರ ವಸ್ತುಗಳನ್ನು ಮಾರಾಟ ಮಾಡುವ ಅಂಗಡಿಗೆ ಬಂದ ಸುಮಾರು 60ರ ವಯೋಮಾನದ ವ್ಯಕ್ತಿ ಹತ್ತು ರೂ. ಮೌಲ್ಯದ ಪಾನೀಯವನ್ನು ಖರೀದಿಸಿ, ಅಂಗಡಿ ಮಾಲಕ ಅನ್ಯ ಗ್ರಾಹಕರೊಂದಿಗೆ ವ್ಯವಹರಿಸುತ್ತಿರುವ ವೇಳೆ ಅಂಗಡಿಯ ಕ್ಯಾಶ್ ಕೌಂಟರ್ ನಲ್ಲಿದ್ದ ಪರ್ಸನ್ನೇ ಎಗರಿಸಿ ಪರಾರಿಯಾಗಿದ್ದಾನೆ. ಪರ್ಸ್ ಎಗರಿಸಿದ ಕಳ್ಳ ಅಟೋ ರಿಕ್ಷಾವೊಂದರಲ್ಲಿ ನೆಕ್ಕಿಲಾಡಿ ವರೆಗೆ ಪ್ರಯಾಣಿಸಿ ಅಲ್ಲಿಂದ ತಪ್ಪಿಸಿಕೊಂಡಿದ್ದಾನೆ ಎನ್ನಲಾಗಿದೆ.
ಉಪ್ಪಿನಂಗಡಿ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಇತ್ತೀಚಿನ ಕೆಲ ತಿಂಗಳಲ್ಲಿ ಹಲವಾರು ಕಳ್ಳತನದ ಪ್ರಕರಣಗಳು ನಡೆದಿದ್ದರೂ ಯಾವೊಂದೂ ಪ್ರಕರಣಗಳಲ್ಲಿಯೂ ತನಿಖಾ ಪ್ರಗತಿ ಸಾಧಿಸದಿರುವ ಉಪ್ಪಿನಂಗಡಿ ಪೊಲೀಸರ ಬಗ್ಗೆ ಸಾರ್ವಜನಿಕ ವಿಶ್ವಾಸವೇ ಕುಸಿದಿದ್ದು, ಒರ್ವ ವೃತ್ತ ನಿರೀಕ್ಷಕ, ಮೂವರು ಎಸೈ ಗಳನ್ನು ಹಲವು ಎ ಎಸೈಗಳನ್ನು ಹೊಂದಿರುವ ಪೊಲೀಸ್ ಠಾಣೆ ಸಾರ್ವಜನಿಕರ ಹಿತಾಸಕ್ತಿಗಿಂತ ಸ್ವ ಹಿತಾಸಕ್ತಿಯನ್ನು ಕೇಂದ್ರೀಕರಿಸಿ ಕಾರ್ಯ ನಿರ್ವಹಿಸುತ್ತಿದೆ ಎಂಬ ಆಪಾದನೆಗೆ ತುತ್ತಾಗಿದೆ. ಈ ಹಿನ್ನೆಲೆಯಿಂದ ಯಾವುದೇ ಕಳವು ಪ್ರಕರಣಗಳಲ್ಲಿ ಪೊಲೀಸರಿಗೆ ದೂರು ಸಲ್ಲಿಸುವುದು ಎಂದರೆ ವ್ಯರ್ಥ ಕಸರತ್ತು ಎಂದು ಭಾವಿಸಿ ಜನತೆ ಮೌನವಾಗಿದ್ದಾರೆ. ತತ್ ಪರಿಣಾಮ ಉಪ್ಪಿನಂಗಡಿ ಪರಿಸರದಲ್ಲಿ ಕಳವು, ವಂಚನೆ ಪ್ರಕರಣಗಳು ಯಾವುದೇ ಅಡೆತಡೆಯಿಲ್ಲದೆ ನಡೆಯುವಂತಾಗಿದೆ.