Advertisement

ಉಪ್ಪಿನಂಗಡಿ ವಿಜಯ-ವಿಕ್ರಮ ಕಂಬಳ: ಕರೆ ಮುಹೂರ್ತ

03:48 PM Jan 08, 2018 | Team Udayavani |

ಉಪ್ಪಿನಂಗಡಿ: ಇಲ್ಲಿನ ವಿಜಯ-ವಿಕ್ರಮ ಕಂಬಳಕ್ಕಾಗಿ ಹಳೆಗೇಟು ದಡ್ಡುವಿನ ಶ್ರೀ ರಾಜನ್‌ ದೈವ ಕಲ್ಕುಡ ಕಟ್ಟೆಯ ಬಳಿ ನೇತ್ರಾವತಿ ನದಿ ದಡದ ಕಂಬಳ ಕರೆಯಲ್ಲಿ ರವಿವಾರ ಕರೆ ಮುಹೂರ್ತ ನಡೆಯಿತು. ಉಪ್ಪಿನಂಗಡಿಯ ಶ್ರೀ ಮಹಾಕಾಳಿ ದೇವಾಲಯದ ಅರ್ಚಕ ರಮಾನಂದ ರಾವ್‌ ಅವರು ಧಾರ್ಮಿಕ ವಿಧಿವಿಧಾನ ನಡೆಸಿದರು. 

Advertisement

ಕರೆ ಮುಹೂರ್ತ ನೆರವೇರಿಸಿ ಮಾತನಾಡಿದ ವಿಜಯ-ವಿಕ್ರಮ ಜೋಡುಕರೆ ಕಂಬಳ ಸಮಿತಿಯ ಅಧ್ಯಕ್ಷ, ಕಂಬಳ ಪರ ಕಾನೂನು ಹೋರಾಟಗಾರ ಅಶೋಕ್‌ ಕುಮಾರ್‌ ರೈ ಕೋಡಿಂಬಾಡಿ ಅವರು, ರಾಜ್ಯ ಹಾಗೂ ಕೇಂದ್ರ ಸರಕಾರದ ಸ್ಪಂದನೆಯಿಂದಾಗಿ ಕಳೆದ ಎರಡು ವರ್ಷಗಳಿಂದ ಕಂಬಳ ಕ್ರೀಡೆಗಿದ್ದ ಅಡೆತಡೆ ಈ ಬಾರಿ ನಿವಾರಣೆಯಾಗಿದೆ. ಫೆ.24
ಮತ್ತು ಫೆ.25ರಂದು ವಿಜಯ- ವಿಕ್ರಮ ಕಂಬಳವು ನಡೆಯಲಿದ್ದು, ಈ ಬಾರಿ ಕಂಬಳವನ್ನು ಹಲವು ವೈಶಿಷ್ಟ್ಯಗಳೊಂದಿಗೆ ಅದ್ದೂರಿಯಾಗಿ ನಡೆಸಲು ಉದ್ದೇಶಿಸಲಾಗಿದೆ.

ಕರೆ ಮುಹೂರ್ತದ ಮೂಲಕ ಕರೆ ನಿರ್ಮಾಣದ ಕೆಲಸ ಇಂದಿನಿಂದಲೇ ಪ್ರಾರಂಭವಾಗಿದ್ದು, ಈ ಬಾರಿಯೂ ಕಟ್ಟಡ ಕಾರ್ಮಿಕರ ಸಂಘದವರು ಹಾಗೂ ಸಾರ್ವಜನಿಕರು ಶ್ರಮದಾನದಲ್ಲಿ ನಮ್ಮೊಂದಿಗೆ ಪಾಲ್ಗೊಂಡಿದ್ದಾರೆ. ಕಂಬಳ ಕರೆ
ನಿರ್ಮಾಣದ ಕೆಲಸಗಳು ನಡೆದ ಬಳಿಕ ಕರೆಯಲ್ಲಿ ಕಂಬಳ ಕೋಣಗಳ ಮಾಲಕರಿಗೆ ಕುದಿ ಓಡಿಸಲು ಅನುವು ಮಾಡಿಕೊಡಲಾಗುವುದು ಎಂದು ಅಶೋಕ್‌ ಕುಮಾರ್‌ ರೈ ಮಾಹಿತಿ ನೀಡಿದರು.

ವಿಜಯ-ವಿಕ್ರಮ ಜೋಡು ಕರೆ ಕಂಬಳ ಸಮಿತಿಯ ಗೌರವಾಧ್ಯಕ್ಷ ಉಮೇಶ್‌ ಶೆಣೈ ನಂದಾವರ, ಪ್ರಧಾನ ಕಾರ್ಯದರ್ಶಿ ಕೇಶವ ಭಂಡಾರಿ ಕೈಪ ಬೆಳ್ಳಿಪ್ಪಾಡಿ, ಕೋಶಾಧಿಕಾರಿ ಸೀತಾರಾಮ ಶೆಟ್ಟಿ ಹೆಗ್ಡೆಹಿತ್ಲು, ಉಪಾಧ್ಯಕ್ಷ ವಿಟ್ಠಲ ಶೆಟ್ಟಿ ಕುಲ್ಲೊಟ್ಟು, ಕಾರ್ಯದರ್ಶಿ ಚಂದ್ರಶೇಖರ ಮಡಿವಾಳ, ಪ್ರಮುಖರಾದ ರಾಮಚಂದ್ರ ಮಣಿಯಾಣಿ, ಆದರ್ಶ ಶೆಟ್ಟಿ ಕಜೆಕ್ಕಾರು, ಹರಿಪ್ರಸಾದ್‌ ಶೆಟ್ಟಿ ಬೊಳ್ಳಾವು, ಮಹಾಲಿಂಗ ಕಜೆಕ್ಕಾರ್‌, ಹರಿಶ್ಚಂದ್ರ ಆಚಾರ್ಯ, ಕಟ್ಟಡ ಕಾರ್ಮಿಕರ ಸಂಘದ ಮಹಿಳಾ ಘಟಕದ ಭಾರತಿ, ದಾಮಣ್ಣ ಗೌಡ, ಸಾಂತಪ್ಪ ಶೆಟ್ಟಿ, ರವಿ ಮರಿಕೆ ಮೊದಲಾದವರು ಉಪಸ್ಥಿತರಿದ್ದರು. ಬಳಿಕ ಕಟ್ಟಡ ಕಾರ್ಮಿಕರ ಸಂಘ ಹಾಗೂ ಸಾರ್ವಜನಿಕರಿಂದ ಕಂಬಳ ಕರೆಯಲ್ಲಿ ಶ್ರಮದಾನ ನಡೆಯಿತು.

150 ಜತೆ ಕೋಣಗಳು
ಸುಮಾರು ಒಂದು ಲಕ್ಷ ಜನ ಸೇರುವ ನಿರೀಕ್ಷೆ ಇದ್ದು, ಕಂಬಳದಲ್ಲಿ ಸುಮಾರು 150 ಜತೆ ಕೋಣಗಳು ಭಾಗವಹಿಸಲಿವೆ. ಕಂಬಳವು ತುಳುನಾಡ ಸಂಸ್ಕೃತಿಯಾಗಿದ್ದು, ಜಾತಿ, ಮತ, ರಾಜಕೀಯ ಭೇದ ಮರೆತು ಎಲ್ಲರೂ ಒಂದಾಗಿ ಅದನ್ನು ಉಳಿಸಲು ಮುಂದಾಗಬೇಕು. ಸರ್ವರ ಸಹಕಾರ ದೊರೆತಾಗ ಮಾತ್ರ ತುಳುನಾಡ ಸಂಸ್ಕೃತಿಯ ಗತ ಇತಿಹಾಸ ಮತ್ತೆ ಅನಾವರಣಗೊಳ್ಳಲು ಸಾಧ್ಯ ಎಂದು ಅಶೋಕ್‌ ಕುಮಾರ್‌ ರೈ ನುಡಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next