ಉಪ್ಪಿನಂಗಡಿ: ವಿದ್ಯುತ್ ಸಮಸ್ಯೆ ನೀಗಿಸುವ ಸಲುವಾಗಿ ಉಪ್ಪಿನಂಗಡಿಯಲ್ಲಿ ವಿದ್ಯುತ್ ಸಬ್‌ಸ್ಟೇಶನ್ ನಿರ್ಮಿ ಸಲು ಕಳೆದ 12 ವರ್ಷಗಳಿಂದ ಬೇಡಿಕೆ ಇದ್ದು, ಮೆಸ್ಕಾಂ ಮುಂದೆ ಬಂದಿತ್ತು. ಆದರೆ ಜಾಗ ನೀಡಲು ಅರಣ್ಯ ಇಲಾಖೆ ಇಲ್ಲಿ ಅಡ್ಡಿಯಾಗಿದೆ.
ಪಟ್ಟಣದ ವಿದ್ಯುತ್ ಸಮಸ್ಯೆ ನಿವಾರಣೆಗೆ ಈ ಹಿಂದೆಯೇ ಸಬ್‌ಸ್ಟೇಶನ್‌ಗಾಗಿ ಗ್ರಾಹಕ ವೇದಿಕೆ ಸಂಘಟನೆಗಳು ರಸ್ತೆ ತಡೆ ಮೆಸ್ಕಾಂಗೆ ನೆರವು ಮುಂತಾದ ಹತ್ತು ಹಲವು ಕಾರ್ಯಕ್ರಮಗಳ ಮೂಲಕ ಮೆಸ್ಕಾಂಗೆ ಬಿಸಿ ಮುಟ್ಟಿಸಿತ್ತು. ಮೆಸ್ಕಾಂ ಸಬ್‌ಸ್ಟೇಶನ್ ಆವಶ್ಯವೆಂದು ಪರಿಗಣಿಸಿ 2007ರಿಂದಲೂ ಕಂದಾಯ ಇಲಾಖೆಗೆ ನಿವೇಶನ ಕೋರಿ ಮನವಿ ಸಲ್ಲಿಸುತ್ತಲೇ ಇತ್ತು. ಇದರಿಂದ ಕಂದಾಯ ಇಲಾಖೆಗೆ ಉಪ್ಪಿನಂಗಡಿ ಕಸಬಾದ ಮಠ ಹಿರ್ತಡ್ಕದಲ್ಲಿ ಸರ್ವೇ ನಂ. 170/ಪಿ1ರಲ್ಲಿ ಒಂದು ಎಕ್ರೆ 30 ಸೆಂಟ್ಸ್ ಜಾಗದ ಕೋರಿಕೆಯನ್ನು ಮೆಸ್ಕಾಂ ಸಲ್ಲಿಸಿತ್ತು.
ಇಲಾಖಾ ನಿಯಮದಂತೆ ಅಕ್ಕಪಕ್ಕದ ಸರಕಾರಿ ಇಲಾಖೆಗಳಾದ ರಾಷ್ಟ್ರೀಯ ಹೆದ್ದಾರಿ ಇಲಾಖೆ ಹಾಗೂ ಅರಣ್ಯ ಇಲಾಖೆಗಳ ನಿರಾಕ್ಷೇಪಣೆ ಪತ್ರಕ್ಕಾಗಿ ಕಂದಾಯ ಅಧಿಕಾರಿಗಳು ಪತ್ರ ಕಳುಹಿಸಿದ್ದರು. ಹೆದ್ದಾರಿ ಇಲಾಖೆ ಸಮ್ಮತಿಸಿದ್ದರೂ, ಅರಣ್ಯ ಇಲಾಖೆ ಎರಡು ಬಾರಿ ವಿವಿಧ ಕಾರಣಗಳಿಂದ ಮೆಸ್ಕಾಂಗೆ ನಿರಾಕ್ಷೇಪಣೆ ನೀಡಲು ತಡೆಯಾಗಿದೆ.
ಮೆಸ್ಕಾಂ ಸಬ್‌ಸ್ಟೇಶನ್ ನಿರ್ಮಾಣಕ್ಕೆ ಕೋಟಿಗೂ ಮಿಕ್ಕಿದ ಅಂದಾಜು ಪಟ್ಟಿಯನ್ನು ತಯಾರಿಸಲಾಗಿದೆ. ವರ್ಷದ ಹಿಂದೆ ಮಳೆಗಾಲದಲ್ಲಿ ನದಿಗಳ ನೀರು ಹಲವು ಮನೆಗಳಿಗೆ ಹರಿದು ವಿದ್ಯುತ್ ಸಮಸ್ಯೆ ಉದ್ಭವಿಸಿದ ಪರಿಣಾಮ ಭೇಟಿ ನೀಡಿದ ಜಿಲ್ಲಾ ಉಸ್ತುವಾರಿ ಸಚಿವರು, ಶಾಸಕರು ಮೆಸ್ಕಾಂ ಸಬ್‌ಸ್ಟೇಶನ್ ನಿರ್ಮಾಣ ಕಡತ ಮರುಪರಿಶೀಲನೆ ನಡೆಸುವಂತೆ ತಾಲೂಕು ದಂಡಾಧಿಕಾರಿಗಳಿಗೆ ಸೂಚನೆ ನೀಡಿದ್ದರು.
ರಾಷ್ಟ್ರೀಯ ಹೆದ್ದಾರಿ ಇಲಾಖೆ ನಿರಾಕ್ಷೇಪಣೆ ಪತ್ರ ನೀಡಿದ್ದರೂ, ಅರಣ್ಯ ಇಲಾಖೆ 170/ಪಿ1ರಲ್ಲಿ ಗೋಮಾಳ ಮಾತ್ರವಲ್ಲದೆ ಬಜತ್ತೂರು ಗ್ರಾಮಕ್ಕೆ ತಾಗಿದ್ದು ಅರಣ್ಯ ಇಲಾಖಾ 7.063 ಎಕ್ರೆ ಜಾಗ ಬರುತ್ತಿದ್ದು, ಅದನ್ನು ಪ್ರತ್ಯೇಕವಾಗಿ ವಿಂಗಡಿಸಿ ಅಳತೆ ಕಾರ್ಯ ನಡೆಸಿ ಪಹಣಿ ಪತ್ರ ಒದಗಿಸಿದ ಬಳಿಕ ನಿರಾಕ್ಷೇಪಣೆ ಪತ್ರ ನೀಡಬಹುದು ಎಂದಿದೆ. ಅರಣ್ಯ ಇಲಾಖೆ ಹೇಳುವಂತೆ ಆಗಬೇಕಾದರೆ ಇನ್ನೂ ಹಲವು ವರ್ಷಗಳೇ ಉರುಳಬಹುದು. ಸ್ಥಳೀಯ ಅರಣ್ಯಾಧಿಕಾರಿಗಳು ಮೆಸ್ಕಾಂಗೆ ಮಂಜೂರಾತಿ ನೀಡಲು ಸಮ್ಮತಿಸಿ ಅಭಿಪ್ರಾಯದ ವರದಿ ನೀಡಿದ್ದರೂ, ಮೇಲಾಧಿಕಾರಿಗಳು ತಾಂತ್ರಿಕ ಕಾರಣಗಳಿಂದ ತಡೆ ಹಿಡಿದಿದ್ದಾರೆ.
ಒಟ್ಟಿನಲ್ಲಿ ಮೆಸ್ಕಾಂ ಸಬ್‌ಸ್ಟೇಶನ್ ನಿರ್ಮಾಣಕ್ಕೆ ನಿವೇಶನ ಮರೀಚಿಕೆಯಾಗಿದೆ. ಉಪ್ಪಿನಂಗಡಿಯಲ್ಲಿ 33 ಕೆ.ವಿ. ಸಬ್‌ಸ್ಟೇಶನ್ ನಿರ್ಮಾಣವಾದರೆ ಉಪ್ಪಿನಂಗಡಿ, 34 ನೆಕ್ಕಿಲಾಡಿ, ಬಜತ್ತೂರು ಹಿರೆಬಂಡಾಡಿ, ಕೊçಲ, ರಾಮಕುಂಜ ಸೇರಿದಂತೆ ಏಳು ಗ್ರಾಮಗಳಿಗೆ ಅನುಕೂಲವಾಗಲಿದೆ ಎನ್ನುವುದು ಸ್ವತಃ ಮೆಸ್ಕಾಂ ಅಧಿಕಾರಿಗಳ ಅಭಿಪ್ರಾಯವಾಗಿದೆ.