Advertisement

ಉಪ್ಪಿನಂಗಡಿ: ಬಾರ್‌ ತೆರವಿಗೆ ಆಗ್ರಹಿಸಿ ಪ್ರತಿಭಟನೆ 

03:25 PM Oct 19, 2017 | Team Udayavani |

ಉಪ್ಪಿನಂಗಡಿ: ಕೆಂಪಿ ಮಜಲಿನಲ್ಲಿ ಕಾರ್ಯಾಚರಿಸುತ್ತಿರುವ ಬಾರ್‌ ಆ್ಯಂಡ್‌ ರೆಸ್ಟೋರೆಂಟ್‌ನ್ನು ತೆರವು ಮಾಡಿ ಬೇರೆ ಕಡೆಗೆ ಸ್ಥಳಾಂತರಕ್ಕೆ ಆಗ್ರಹಿಸಿ, ನಾಗರಿಕ ಕ್ರಿಯಾ ಸಮಿತಿ ಆಶ್ರಯದಲ್ಲಿ ಸ್ಥಳೀಯರು ಅ. 17ರಂದು ಪ್ರತಿಭಟನೆ ನಡೆಸಿದರು.

Advertisement

ಈ ಬಾರ್‌ ಆ್ಯಂಡ್‌ ರೆಸ್ಟೋರೆಂಟ್‌ ಜನ ವಸತಿ ಪ್ರದೇಶದಲ್ಲಿ ಕಾರ್ಯಾಚರಿಸುತ್ತಿದೆ. ಬಾರ್‌ನಲ್ಲಿ ಪಾನಮತ್ತರಾಗಿ ಹೋಗುವ ಮಂದಿ ಮನೆಗಳ ಮುಂದೆ ಮೂತ್ರ ವಿಸರ್ಜನೆ ಮಾಡುವುದು ಮತ್ತು ಅಸಭ್ಯವಾಗಿ ವರ್ತಿಸುತ್ತಾರೆ. ಇದರಿಂದಾಗಿ ಮಹಿಳೆಯರಿಗೆ ಮತ್ತು ಮಕ್ಕಳಿಗೆ ಮಾನಸಿಕವಾಗಿ ತೊಂದರೆ ಉಂಟಾಗಿದ್ದು, ಇದನ್ನು ತೆರವು ಮಾಡಬೇಕು ಎಂದು ಆಗ್ರಹಿಸಿದರು. 

ತೆರವು ಮಾಡಿ
ಕಾಂಗ್ರೆಸ್‌ ಕಾರ್ಮಿಕ ಘಟಕದ ರಾಜ್ಯ ಕಾರ್ಯದರ್ಶಿ ನಝೀರ್‌ ಮಠ ಮಾತನಾಡಿ, ಸಾರ್ವಜನಿಕರ ವಿರೋಧ ಇದ್ದಾಗ್ಯೂ ಅಧಿಕಾರಿಗಳು ಹಣ ಪಡೆದು ಪರವಾನಿಗೆ ನೀಡಿದ್ದಾರೆ, ಜಿಲ್ಲಾಧಿಕಾರಿ ಪುನರ್‌ ಪರಿಶೀಲನೆ ನಡೆಸಿ ಇದನ್ನು ತೆರವು ಮಾಡಬೇಕು ಎಂದರು.

ಪ್ರತಿಭಟನ ಸಭೆಯಲ್ಲಿ ಗ್ರಾ.ಪಂ. ಮಾಜಿ ಸದಸ್ಯ ಜಲೀಲ್‌ ಮುಕ್ರಿ ಮಾತನಾಡಿ, ಇಲ್ಲಿ ಮಹಿಳೆರಿಗೆ ತೀರಾ ಸಮಸ್ಯೆ ಉಂಟಾಗಿದ್ದು, ಸಾರ್ವಜನಿಕ ಹಿತದೃಷ್ಠಿಯಿಂದ ಇದನ್ನು ತೆರವು ಮಾಡಬೇಕು ಎಂದರು.

ಗ್ರಾ.ಪಂ. ಅಧ್ಯಕ್ಷ ಕೆ. ಅಬ್ದುಲ್‌ ರಹಿಮಾನ್‌ ಮಾತನಾಡಿ, ಬಾರ್‌ ಆ್ಯಂಡ್‌ ರೆಸ್ಟೋರೆಂಟ್‌ಗೆ ಪಂ.ಯಿಂದ ಪರವಾನಿಗೆ ನೀಡಲಾಗಿದೆ ಎಂದು ಹೇಳಲಾಗುತ್ತಿದೆ, ಆದರೆ ಹೊಟೇಲ್‌ ಉದ್ಯಮ ರೆಸ್ಟೋರೆಂಟ್‌ ಗೆ ಮಾತ್ರ ಪಂ. ಪರವಾನಿಗೆ ನೀಡಿದ್ದು, ಬಾರ್‌ ನಡೆಸುವುದಕ್ಕೆ ನೇರವಾಗಿ ಜಿಲ್ಲಾಧಿಕಾರಿ
ಪರವಾನಿಗೆ ನೀಡುತ್ತಿದ್ದು, ಇದರಲ್ಲಿ ಪಂ. ಹಸ್ತಕ್ಷೇಪ ಮಾಡಲು ಆಗುವುದಿಲ್ಲ, ನಾನೂ ವಿರೋಧ ಇದ್ದು, ನಿಮ್ಮ ಯಾವುದೇ ಕಾನೂನು ಬದ್ಧ ಹೋರಾಟಕ್ಕೆ ನಿಮ್ಮೊಂದಿಗೆ ಇರುವುದಾಗಿ ತಿಳಿಸಿದರು.

Advertisement

ಬೇರೊಂದು ಕಾರ್ಯಕ್ರಮಕ್ಕೆ ಉಪ್ಪಿನಂಗಡಿಗೆ ಆಗಮಿಸಿದ್ದ ಕೆಪಿಸಿಸಿ ಕಾರ್ಯದರ್ಶಿ ಕವಿತಾ ರಮೇಶ್‌ ಮತ್ತು ಉಪ್ಪಿನಂಗಡಿ-ವಿಟ್ಲ ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ಮುರಳೀಧರ ರೈ ಪ್ರತಿಭ ಟನ ಸ್ಥಳಕ್ಕೆ ಭೇಟಿ ನೀಡಿ ಮಾತನಾಡಿ, ತಮ್ಮ ಬೆಂಬಲ ವ್ಯಕ್ತಪಡಿಸಿದರು.

ಎಸ್‌ಡಿಪಿಐನ ಸೀಮಾ ರಜಾಕ್‌, ಅಜೀಜ್‌ ನಿನ್ನಿಕಲ್‌ ಮಾತನಾಡಿದರು. ಗ್ರಾ. ಪಂ.ಸದಸ್ಯೆ ಝರೀನ, ಇಕ್ಬಾಲ್‌ ಕೆಂಪಿ ಮಜಲು, ಮಹಮ್ಮದ್‌ ಕೆಂಪಿ, ಸಿದ್ದಿಕ್‌ ಕೆಂಪಿ, ಯುವ ಕಾಂಗ್ರೆಸ್‌ ಕಾರ್ಯದರ್ಶಿ ನಝೀರ್‌ ಬೆದ್ರೋಡಿ ಉಪಸ್ಥಿತರಿದ್ದರು. ಶಬ್ಬೀರ್‌ ಕೆಂಪಿ ಸ್ವಾಗತಿಸಿ, ಜಮಾಲು ಕೆಂಪಿ ವಂದಿಸಿದರು.

ರಸ್ತೆ ಬಂದ್‌: ಆಕ್ಷೇಪ
 ಪ್ರತಿಭಟನಕಾರರು ಕೆಂಪಿಮಜಲು ರಸ್ತೆಯಲ್ಲಿ ಕುಳಿತಿದ್ದರು. ಈ ಬಗ್ಗೆ ಪೊಲೀಸರಿಗೆ ಮಾಹಿತಿ ಹೋಗಿ ಸ್ಥಳಕ್ಕೆ ಎಸ್‌.ಐ. ನಂದಕುಮಾರ್‌ ಮತ್ತು ಸಿಬಂದಿ ಭೇಟಿ ನೀಡಿ ಪ್ರತಿಭಟನೆ ನಡೆಸಲು ಪೊಲೀಸ್‌ ಅನುಮತಿ ಪಡೆದಿಲ್ಲ, ಅದಾಗ್ಯೂ ರಸ್ತೆ ಬಂದ್‌ ಮಾಡಿದ್ದೀರಿ, ರಸ್ತೆ ತೆರವು ಮಾಡಬೇಕು ಎಂದರು. ಅಷ್ಟರಲ್ಲಿ ಸ್ಥಳಕ್ಕೆ ಉಪ ತಹಶೀಲ್ದಾರ್‌ ಸದಾಶಿವ ನಾಯ್ಕ ಮತ್ತು ಕಂದಾಯ ನಿರೀಕ್ಷಕ ಪ್ರಮೋದ್‌ ಪಕ್ಕಳ ಸ್ಥಳಕ್ಕೆ ಆಗಮಿಸಿ ಪ್ರತಿಭಟನಕಾರರಿಂದ ಅಹವಾಲು ಸ್ವೀಕರಿಸಿ, ಸರಕಾರಕ್ಕೆ ಸಲ್ಲಿಸುವ ಬಗ್ಗೆ ತಿಳಿಸಿದರು. ಬಳಿಕ ಪ್ರತಿಭಟನೆಯಿಂದ ಹಿಂದೆ ಸರಿದರು. 

Advertisement

Udayavani is now on Telegram. Click here to join our channel and stay updated with the latest news.

Next