Advertisement
ಬೆಳ್ತಂಗಡಿ ತಾಲೂಕು ಕಣಿಯೂರು ಗ್ರಾಮದ ಮಲೆಂಗಲ್‌ನ ಆನಂದ ಮೂಲ್ಯ ಅವರ ಮನೆಗೆ ಬೆಂಕಿ ತಗುಲಿದ್ದು, ಸ್ಥಳೀಯರು ಕಾರ್ಯಾಚರಣೆ ನಡೆಸಿ ಬೆಂಕಿಯನ್ನು ನಂದಿಸಿದ್ದರು. ಆದರೆ ಆ ವೇಳೆಗಾಗಲೇ ಮನೆಯಲ್ಲಿದ್ದ ಬಟ್ಟೆ ಬರೆ, ಕೆಮರಾದ ಪರಿಕರಗಳು ಸುಟ್ಟು ಹೋಗಿದ್ದು, ಕಪಾಟಿನಲ್ಲಿದ್ದ ಚಿನ್ನ ಇಡುವ ಬಾಕ್ಸ್ ಮತ್ತು ದಾಖಲೆ ಪತ್ರಗಳು ಯಥಾಸ್ಥಿತಿಯಲ್ಲಿದ್ದವು. ಮೇ 30ರಂದು ವಸ್ತುಗಳನ್ನು ಜೋಡಿಸಿ ಇಡುವಾಗ ಚಿನ್ನ ಇಡುವ ಬಾಕ್ಸ್‌ನೊಳಗಿದ್ದ ವಿವಿಧ ಆಭರಣಗಳು ಸೇರಿದಂತೆ ಒಟ್ಟು 2.50 ಲಕ್ಷ ಮೌಲ್ಯದ ಚಿನ್ನಾಭರಣವು ಕಳವಾಗಿರುವುದು ಕಂಡುಬಂದಿದೆ.
ಆನಂದ ಮೂಲ್ಯರವರ ಮನೆಗೆ ಬೆಂಕಿ ತಗಲಿದಾಗ ಮನೆ ಮಂದಿ ಮನೆಯ ಹೊರಗಡೆ ಇದ್ದರು. ಸ್ಥಳೀಯರು ಬೆಂಕಿ ನಂದಿಸಿ ಹೆಚ್ಚಿನ ಅನಾಹುತವನ್ನು ತಪ್ಪಿಸಿದ್ದರು. ಇದೀಗ ಅವರ ಮನೆಯ ಚಿನ್ನದ ಆಭರಣ ಇಡುವ ಪೆಟ್ಟಿಗೆಯಲ್ಲಿದ್ದ ಚಿನ್ನಾಭರಣ ನಾಪತ್ತೆಯಾಗಿರುವುದರಿಂದ ಮನೆಗೆ ಬೆಂಕಿ ತಗಲಿದ ಪ್ರಕರಣವೇ ನಾನಾ ಸಂಶಯಕ್ಕೆ ಕಾರಣವಾಗಿದೆ. ಚಿನ್ನಾಭರಣ ಕದಿಯಲು ಬಂದಾತ ತನ್ನ ಕೃತ್ಯವನ್ನು ಮರೆ ಮಾಚಲು ಮನೆಗೆ ಬೆಂಕಿ ಹಚ್ಚಿರುವ ಸಾಧ್ಯತೆ ಇದೆ ಎನ್ನುವುದು ಒಂದು ಕಡೆಯಾದರೆ, ಅಗ್ನಿ ಅವಘಡ ಸಂಭವಿಸಿದ ವೇಳೆ ಬೆಂಕಿ ನಂದಿಸುವ ಕಾರ್ಯಾಚರಣೆ ನಡೆಯುತ್ತಿದ್ದ ವೇಳೆ ಚಿನ್ನಾಭರಣ ಕದ್ದಿರಬಹುದೇ ಎನ್ನುವ ಇನ್ನೊಂದು ಸಂಶಯ ಮೂಡಿದೆ. ಪ್ರಕರಣ ದಾಖಲಿಸಿಕೊಂಡಿರುವ ಉಪ್ಪಿನಂಗಡಿ ಪೊಲೀಸರು ವಿವಿಧ ಆಯಾಮಗಳಲ್ಲಿ ತನಿಖೆ ನಡೆಸುತ್ತಿದ್ದಾರೆ.