Advertisement
ಹಿಂಗಾರು ಅಥವಾ ವೈಶಾಖದಲ್ಲಿ ನೀರಿನ ಸಮಸ್ಯೆಯಿಂದಾಗಿ ಅಥವಾ ಉಪ್ಪು ನೀರಿನ ಪ್ರಭಾವದಿಂದಾಗಿ ನೆಟ್ಟ ನೇಜಿ ಕರಟಿ ಹೋಗುವುದು ಸಾಮಾನ್ಯ. ಆದರೆ ಈ ಬಾರಿ ತಲ್ಲೂರು ಗ್ರಾಮದ ಉಪ್ಪಿನಕುದ್ರು ಭಾಗದ ಗದ್ದೆಗಳಲ್ಲಿ ಮುಂಗಾರಿನಲ್ಲೇ ನೇಜಿ ಕರಟಿ ಹೋಗಿದೆ.
ಮಳೆಗಾಲ ತಡವಾಗಿ ಆರಂಭ ವಾಗಿದ್ದು, ಈಗ ತಾನೇ ಮುಂಗಾರು ಸ್ವಲ್ಪ ಮಟ್ಟಿಗೆ ಬಿರುಸು ಪಡೆದಿದೆ. ಆದರೆ ಇದಕ್ಕೂ ಮೊದಲೇ ಈ ಭಾಗದಲ್ಲಿ ನೇಜಿ ನೇಡುವ ಕಾರ್ಯ ಮಾಡಿರುವುದರಿಂದ, ಅದಕ್ಕೆ ಉಪ್ಪು ನೀರು ಪ್ರವೇಶಿಸಿ ನೇಜಿ ಕರಟಿದೆ. ಇದಕ್ಕೆ ಪರಿಹಾರವೆಂದರೆ ಗದ್ದೆ ಬದಿಯ ದಂಡೆಯನ್ನು ಏರಿಸಿದರೆ ಅಮಾವಾಸ್ಯೆ – ಹುಣ್ಣಿಮೆ ಸಮಯದಲ್ಲಿ ಉಬ್ಬರವಿಳಿತ ಉಂಟಾ ದಾಗ ಗದ್ದೆಗಳಿಗೆ ಉಪ್ಪು ನೀರು ನುಗ್ಗುವುದು ಕಡಿಮೆಯಾಗಬಹುದು. ಉಪ್ಪಿನಕುದ್ರು ಸಮೀಪದ ನಾಗಿಮನೆ ಸಮೀಪದ ಸುಮಾರು 20 ರೈತ ಕುಟುಂಬದ ಹತ್ತಾರು ಎಕರೆ ಗದ್ದೆಗಳಲ್ಲಿ ಬೆಳೆದ ನೇಜಿ, ಬೇಡರಕೊಟ್ಟಿಗೆ ಸಮೀಪದ ಗದ್ದೆಗಳಿಗೂ ಉಪ್ಪು ನೀರಿನ ಹಾವಳಿಯಿಂದ ಹಾನಿಯಾಗಿದೆ.
Related Articles
ಕಳೆದ ಬಾರಿ ಹಿಂಗಾರು ಹಂಗಾಮಿನಲ್ಲೂ ಉಪ್ಪಿನಕುದ್ರು ಭಾಗದ ರೈತರು ಉಪ್ಪು ನೀರಿನ ಸಮಸ್ಯೆಯಿಂದಾಗಿ ಕಟಾವಿನ ವೇಳೆಯಲ್ಲಿ ಕರಟಿ ಹೋಗಿದ್ದರಿಂದ ಏನೂ ಫಸಲು ಸಿಗದೇ ನಷ್ಟ ಅನುಭವಿಸಿದ್ದರು.
Advertisement
ಕಡಲ ತೀರದ ಅದರಲ್ಲೂ ಕುಂದಾಪುರ ತಾಲೂಕಿನ ಉಪ್ಪಿನಕುದ್ರು, ಹೆಮ್ಮಾಡಿ, ಕಟ್ಟು, ಹೊಸಾಡು ಭಾಗದಲ್ಲಿ ಉಪ್ಪು ನೀರಿನ ಪ್ರಮಾಣ ಹೆಚ್ಚಿರುವ ಕಾರಣ ಭತ್ತದ ಇಳುವರಿ ಹಾಗೂ ಉತ್ಪಾದನೆ ಕುಂಠಿತಗೊಳ್ಳುತ್ತಿದೆ. ಈ ಪ್ರದೇಶಗಳಲ್ಲಿ ಉಪ್ಪು ನೀರಿನ ಸಮಸ್ಯೆ ಎನ್ನುವುದು ಭತ್ತದ ಕೃಷಿಗೆ ಅಂಟಿದ ಶಾಪವಾಗಿದೆ. ಇದರಿಂದ ಭತ್ತದ ಬೆಳೆಯನ್ನೇ ನಂಬಿಕೊಂಡಿರುವ ಸಾವಿರಾರು ರೈತ ಕುಟುಂಬಗಳು ಕಂಗಾಲಾಗಿವೆ.
ಹೊಸ ತಳಿಯ ಸಂಶೋಧನೆಕರಾವಳಿ ಭಾಗದ ಗದ್ದೆಗಳಲ್ಲಿ ಉಪ್ಪು ನೀರಿನಲ್ಲಿ ಬೆಳೆಯಬಹುದಾದ ಭತ್ತದ ಹೊಸ ತಳಿಯ ಕುರಿತಂತೆ ಕೃಷಿ ಇಲಾಖೆ ಹಾಗೂ ಚೆನ್ನೈಯ ಎಂ.ಎಸ್. ಸ್ವಾಮಿನಾಥನ್ ಸಂಶೋಧನಾ ಪ್ರತಿಷ್ಠಾನದ ಸಹಯೋಗದಲ್ಲಿ ಸಂಶೋಧನೆ ಮಾಡಲಾಗುತ್ತಿದೆ. ಸುಧಾರಿತ ಭತ್ತದ ತಳಿ ಅಭಿವೃದ್ಧಿಗೆ 3 ವರ್ಷದ ಯೋಜನೆ ರೂಪಿಸಲಾಗಿದೆ. ಅದು ಆದಷ್ಟು ಶೀಘ್ರದಲ್ಲಿ ಅನುಷ್ಠಾನಕ್ಕೆ ಬಂದಲ್ಲಿ ಕರಾವಳಿ ಜಿಲ್ಲೆಗಳಲ್ಲಿರು ಉಪ್ಪು ನೀರು ಬಾಧಿತ ಗದ್ದೆಗಳಲ್ಲಿ ಬೇಸಾಯ ಮಾಡುವ ರೈತರಿಗೆ ಪ್ರಯೋಜನವಾಗಲಿದೆ. ಪರ್ಯಾಯ ತಳಿಗೆ ಪ್ರಯತ್ನ
ಉಪ್ಪು ನೀರಿನಲ್ಲಿಯೂ ಕೂಡ ಬೆಳೆಯುವಂತಹ ಭತ್ತದ ತಳಿಯನ್ನು ಈಗ ಪ್ರಾಯೋಗಿಕವಾಗಿ ಉತ್ತರ ಕನ್ನಡ ಜಿಲ್ಲೆಯ ಕುಮಟಾ ಭಾಗದಲ್ಲಿ ಬೆಳೆಸಲಾಗಿದೆ. ಅಲ್ಲಿ ಯಶಸ್ವಿಯಾದರೆ ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಯಲ್ಲಿಯೂ ಕೂಡ ಬೆಳೆಯಲಾಗುವುದು. ಹೊಳೆ ದಂಡೆ ಏರಿಸುವ ಕುರಿತಂತೆ ರೈತರು ಇಲಾಖೆಗೆ ಮನವಿ ಸಲ್ಲಿಸಿದಲ್ಲಿ ಅದನ್ನು ಸಂಬಂಧಪಟ್ಟವರಿಗೆ ಪ್ರಸ್ತಾವನೆ ಸಲ್ಲಿಸಲಾಗುವುದು.
-ಚಂದ್ರಶೇಖರ್,ಉಪ ನಿರ್ದೇಶಕರು,ಕೃಷಿ ಇಲಾಖೆ ಉಡುಪಿ ಹೊಳೆ ದಂಡೆ ಏರಿಸಲಿ
ಪ್ರತಿ ವರ್ಷ ನಾವು ಈ ಸಮಸ್ಯೆಯನ್ನು ಎದುರಿಸುತ್ತಿದ್ದೇವೆ. ಈ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳು, ಜನಪ್ರತಿನಿಧಿಗಳಿಗೆ ಎಷ್ಟು ಹೇಳಿದರೂ ನಮ್ಮ ಮನವಿಗೆ ಸ್ಪಂದಿಸಲೇ ಇಲ್ಲ. ಗದ್ದೆ ಬದಿಯ ಹೊಳೆ ದಂಡೆಗಳನ್ನು ಏರಿಸಿದರೆ ಮಾತ್ರ ಪ್ರಯೋಜನವಾಗಲಿದೆ.
-ಗುಲಾಬಿ ನಾಗಿಮನೆ,ಉಪ್ಪಿನಕುದ್ರು,ರೈತರು