Advertisement

ಕುದ್ರುಗಳಲ್ಲಿ ಕುಡಿಯಲು ನೀರಿಲ್ಲ

07:30 AM May 11, 2018 | Team Udayavani |

ಕುಂದಾಪುರ: ಉಪ್ಪಿನಕುದ್ರು ಎನ್ನುವುದು ಕುಂದಾಪುರ ಸೇರಿದಂತೆ ಹೊರಜಗತ್ತಿಗೂ ಪ್ರಸಿದ್ಧ. ಆದರೆ ಈಗ ಇಲ್ಲಿನ ಎಲ್ಲ ಕುದ್ರುಗಳೂ ಉಪ್ಪಿನಕುದ್ರು ಆಗಿವೆ. ಕಾರಣ ಕುಡಿಯುವ ನೀರಿಗೆ! 

Advertisement

2 ತಿಂಗಳು ಮಾತ್ರ ಸಿಹಿನೀರು
ಕುಂದಾಪುರ ಹಾಗೂ ಬೈಂದೂರು ತಾಲೂಕಿನಲ್ಲಿ ಅನೇಕ ಕುದ್ರುಗಳಿವೆ. ಇಲ್ಲಿ ವರ್ಷದ 2 ತಿಂಗಳಷ್ಟೇ ಸಿಹಿನೀರ ಭಾಗ್ಯ.  ನಿತ್ಯೋಪಯೋಗಿ ಕೆಲಸಕ್ಕೆ, ಕೃಷಿಗೆ ಉಪ್ಪು ನೀರೇ ಗತಿ. ಮಳೆಗಾಲದ ಎರಡು ತಿಂಗಳ ಅವಧಿ ಮಾತ್ರ ಇಲ್ಲಿನ ಜನತೆಗೆ ಪ್ರಾಕೃತಿಕ ಸಿಹಿನೀರು ದೊರೆಯುತ್ತದೆ. ಉಳಿದ ಅಷ್ಟೂ ಸಮಯ ಸ್ಥಳೀಯಾಡಳಿತ ಕೊಡುವ ಸಿಹಿನೀರಿಗೆ ಕಾಯಬೇಕು. ಕೆಲವೆಡೆ ಪೈಪ್‌ಲೈನ್‌, ಕೆಲವೆಡೆ ಟ್ಯಾಂಕರ್‌ ನೀರು ಆಧಾರ.

ಶೇ.80ರಷ್ಟು ಮನೆಗಳಿಗೆ ನೀರಿಲ್ಲ
ಉಪ್ಪಿನಕುದ್ರು ಪರಿಸರದಲ್ಲಿ ಸುಮಾರು 500 ಮನೆಗಳಿವೆ. ಈ ಪೈಕಿ 80ಶೇ.ರಷ್ಟು ಮನೆಗಳಿಗೆ ಕುಡಿಯಲು ಸಿಹಿನೀರಿಲ್ಲ. ಪಡುಕೆರೆ, ಸಂಕ್ರಬೆಟ್ಟು, ಬೊಬ್ಬರ್ಯನಕೇರಿ, ಗೋಪಾಲಕೃಷ್ಣ ದೇವಸ್ಥಾನ ವಠಾರ ಪ್ರದೇಶದಲ್ಲಂತೂ ನೀರಿನ ಪರಿಸ್ಥಿತಿ ದುರ್ಭರ. ವಾಸು ದೇವಸ್ಥಾನ ಬಳಿ ಟ್ಯಾಂಕ್‌ ಇದೆ,  ಆದರೆ ಅದರ ಅಕ್ಕಪಕ್ಕಕ್ಕಷ್ಟೇ ನೀರು ಸರಾಗ. ಉಳಿದ ಕಡೆಗೆ ಪೈಪ್‌ಲೈನ್‌ ಅಳವಡಿಸಿದರೂ ನಳ್ಳಿವರೆಗೂ ತಲುಪದು!  ಕುದ್ರುಗಳ ಶೇ.80ರಷ್ಟು ಭಾಗದಲ್ಲಿ ಸಿಹಿನೀರ ಕೊರತೆ ಇದೆ. ಟ್ಯಾಂಕರ್‌ 2 ದಿನಕ್ಕೊಮ್ಮೆ ಬರುತ್ತದೆ ಎನ್ನುತ್ತಾರೆ  ಚಂದ್ರ ಉಪ್ಪಿನಕುದ್ರು ಅವರು. 

200 ಮನೆಗಳಿಗೆ ಸಮಸ್ಯೆ
ಹಟ್ಟಿಕುದ್ರುವಿನಲ್ಲಿ 200 ಮನೆಗಳಿದ್ದು ಸಮಸ್ಯೆ ಇರುವ 60-70 ಮನೆಗೆ  ಟ್ಯಾಂಕರ್‌ ಮೂಲಕ ನೀರು ಸರಬರಾಜು ಮಾಡಲಾಗುತ್ತಿದೆ. ಎಲ್ಲ ಬಾವಿಗಳಲ್ಲೂ ನೀರಿದ್ದರೂ ಅದು ಉಪ್ಪು ರುಚಿ ಹಾಗೂ ಕೆಂಪು ಬಣ್ಣದಿಂದ ಕೂಡಿದೆ ಎನ್ನುತ್ತಾರೆ ಹಟ್ಟಿಕುದ್ರುವಿನ ಬಾಬು ಬಿಲ್ಲವ. ಉಪ್ಪುನೀರಿನಿಂದಾಗಿ ಕೃಷಿಯೂ ಹಾಳಾಗಿದೆ ಎನ್ನುತ್ತಾರೆ ಬಂಡಾರಬೆಟ್ಟಿನ ನಾರಾಯಣ ಪೂಜಾರಿ.  ಜಪ್ತಿಯಿಂದ ಕುಂದಾಪುರ ಪುರಸಭೆಗೆ ಬರುವ ಶುದ್ಧ ಕುಡಿಯುವ ನೀರಿನ ಪೈಪ್‌ಲೈನ್‌ ಮೂಲಕ ಬಸ್ರೂರಿನಿಂದ ಸಂಪರ್ಕ ಕಲ್ಪಿಸಿದರೆ ಇಲ್ಲಿನ ಸಮಸ್ಯೆ ನಿವಾರಣೆಯಾಗುತ್ತದೆ. ಅಂತಹ ಪ್ರಯತ್ನ ನಡೆಯುತ್ತಿದೆ ಎನ್ನುತ್ತಾರೆ ಸಂತೋಷ್‌ ಕುಮಾರ್‌. 

ಕೃಷಿಗೂ ಸಮಸ್ಯೆ
ಎಲ್ಲ ಕಡೆ ಹೊಳೆ ನೀರು ಕೃಷಿಗೆ ಆಧಾರ. ಆದರೆ ಕುದ್ರುಗಳಲ್ಲಿ ಹೊಳೆ ನೀರೇ ಕೃಷಿಗೆ ಕಂಟಕ. ಉಪ್ಪು ನೀರು, ಹಿನ್ನೀರು ಕೃಷಿಗೆ ಬಂದರೆ, ಹೊಳೆ ಉಕ್ಕೇರಿ ನೀರು ಗದ್ದೆಗೆ ಬಿದ್ದರೆ ಮಾಡಿದ ಅಷ್ಟೂ ಕೃಷಿ ವ್ಯರ್ಥ. ಅದಕ್ಕಾಗಿ ಬೈಂದೂರು ಹಾಗೂ  ಕುಂದಾಪುರದ ಕ್ಷೇತ್ರದ ಅನೇಕರ ಬೇಡಿಕೆ ಹಿನ್ನೀರು ಬರದಂತೆ ತಡೆಗೋಡೆ ಮಾಡಬೇಕೆಂದು. ಜತೆಗೆ ಹೂಳೆತ್ತಬೇಕು ಎನ್ನುವುದು. ಆಗ ಸಮಸ್ಯೆಗೆ ಪರಿಹಾರ ದೊರೆತಂತಾಗುತ್ತದೆ. 

Advertisement

ಟ್ಯಾಂಕರ್‌ ನೀರು ದೂರು ಬಂದಲ್ಲಿಗೆ ನಾನೇ 
ಖುದ್ದು ಭೇಟಿ ನೀಡಿ ಪರಿಶೀಲಿಸುತ್ತಿದ್ದೇನೆ. ಟಾಸ್ಕ್ ಫೋರ್ಸ್‌ ಮೀಟಿಂಗ್‌ ಮೂಲಕ ಎಲ್ಲ ಪಂಚಾಯತ್‌ಗಳ ಸಮಸ್ಯೆ ಆಲಿಸಿ ಕ್ರಮ ಕೈಗೊಳ್ಳಲಾಗಿದೆ. ಸಮಸ್ಯೆ ಇರುವೆಡೆಗೆಲ್ಲಾ ಟ್ಯಾಂಕರ್‌ ಮೂಲಕ ನೀರು ಕೊಡಲಾಗುತ್ತಿದೆ. ಎಲ್ಲಿಯೂ ಸಮಸ್ಯೆ ಆಗದಂತೆ ತಾತ್ಕಾಲಿಕ ಪರಿಹಾರ ಕಾರ್ಯ ಕೈಗೊಳ್ಳಲಾಗಿದೆ. 
– ಕಿರಣ್‌ ಆರ್‌. ಪೆಡೆ°àಕರ್‌, ಕಾರ್ಯನಿರ್ವಹಣಾಧಿಕಾರಿ, ತಾ.ಪಂ. ಕುಂದಾಪುರ

ಶಾಶ್ವತ ಪರಿಹಾರ ಅಗತ್ಯ
ಬಾವಿಯಲ್ಲಿ ನೀರಿದ್ದರೂ ಕುಡಿಯಲಾಗದು, ಮನೆ ಬಳಕೆಗೆ ಆಗದು. ಟ್ಯಾಂಕರ್‌ ನೀರು ಹಿಡಿದಿಟ್ಟುಕೊಳ್ಳಲೂ ಸಾಲದು. ಇದಕ್ಕೊಂದು ಶಾಶ್ವತ ಪರಿಹಾರ ಬೇಕಿದೆ. 
– ಪದ್ಮನಾಭ ಪೂಜಾರಿ,
ಗುಜ್ಜಾಡಿ ಮನೆ, ಹಟ್ಟಿಕುದ್ರು

– ಲಕ್ಷ್ಮೀ ಮಚ್ಚಿನ

Advertisement

Udayavani is now on Telegram. Click here to join our channel and stay updated with the latest news.

Next