ಆರಂಭದಲ್ಲಿ ಉಪೇಂದ್ರ ಅವರನ್ನು ಪ್ರೇಕ್ಷಕ ಇಷ್ಟಪಟ್ಟಿದ್ದೇ ಅವರ ಬೋಲ್ಡ್ ಮಾತುಗಳಿಂದ. ಫಿಲ್ಟರ್ ಹಾಕಿಕೊಳ್ಳದೇ ನೇರವಾಗಿ ಹೇಳುವ ಮೂಲಕ ಉಪ್ಪಿ ಒಂದು ದೊಡ್ಡ ಅಭಿಮಾನಿ ವರ್ಗವನ್ನು ಸೃಷ್ಟಿಸಿಕೊಂಡಿದ್ದು ಗೊತ್ತೇ ಇದೆ. ಆದರೆ, ಆ ನಂತರ ಉಪ್ಪಿ ಒಂದಷ್ಟು ಬೇರೆ ಪ್ರಯೋಗಗಳನ್ನು ಮಾಡುತ್ತಾ ಬಂದರು. ಆ ಪ್ರಯೋಗಗಳನ್ನು ಪ್ರೇಕ್ಷಕ ಇಷ್ಟಪಟ್ಟರೂ, ಅವರಿಗೆ ಉಪ್ಪಿಯ ಒರಿಜಿನಲ್ ಸ್ಟೈಲ್ ಮಿಸ್ ಆಗುತ್ತಿದ್ದ ಬೇಸರವಿತ್ತು. ಆದರೆ, ಈ ಬಾರಿ ಖುಷಿಯಾಗಿದ್ದಾರೆ. ಮತ್ತೆ ಉಪ್ಪಿ ತಮ್ಮ ಒರಿಜಿನಲ್ ಟ್ರ್ಯಾಕ್‌ಗೆ ಮರಳಿದ್ದಾರೆಂಬ ಸಂತಸವೂ ಅಭಿಮಾನಿಗಳಿಗಿದೆ. ಈ ಸಂತಸಕ್ಕೆ ಕಾರಣ ನಿರ್ದೇಶಕ ಆರ್.ಚಂದ್ರು. ಉಪೇಂದ್ರ ಅವರ ಶೈಲಿಯನ್ನು ತುಂಬಾ ಚೆನ್ನಾಗಿಯೇ ಗಮನಿಸುತ್ತಿದ್ದ ನಿರ್ದೇಶಕ ಚಂದ್ರು ತಮ್ಮ “ಐ ಲವ್ ಯು’ ಚಿತ್ರದಲ್ಲಿ ಅದನ್ನು ಅಳವಡಿಸಿಯೇ ಬಿಟ್ಟರು. ಉಪ್ಪಿ ಅಭಿಮಾನಿಗಳು ಏನು ಇಷ್ಟಪಡುತ್ತಾರೋ ಆ ಅಂಶವನ್ನು ಸಿನಿಮಾದ ತುಂಬಾ ತುಂಬಿದ ಪರಿಣಾಮ ಇವತ್ತು ನಿರ್ದೇಶಕ ಕಂ ನಿರ್ಮಾಪಕ ಚಂದ್ರು ಗೆದ್ದಿದ್ದಾರೆ. ಇತ್ತೀಚಿನ ವರ್ಷಗಳ ಅವರ ನಿರ್ದೇಶನದ ಸಿನಿಮಾಗಳಿಗೆ ಹೋಲಿಸಿದರೆ ಅವರಿಗೆ “ಐ ಲವ್ ಯು’ ದೊಡ್ಡ ಯಶಸ್ಸನ್ನು ತಂದುಕೊಟ್ಟಿದೆ. ನಿರ್ದೇಶಕನ ಜೊತೆಗೆ ನಿರ್ಮಾಪಕರಾಗಿಯೂ ಚಂದ್ರು ಮೊಗದಲ್ಲಿ ನಗು ಮೂಡಿದೆ. ಒಬ್ಬ ನಟ ಯಾವ ಇಮೇಜ್ ಮೂಲಕ ಪರಿಚಯ ಆಗಿರುತ್ತಾನೋ, ಆ ಇಮೇಜ್ ಅಭಿಮಾನಿಗಳ ಹೃದಯದಲ್ಲಿ ಅಚ್ಚಾಗಿರುತ್ತದೆ. ಉಪ್ಪಿ ಅಭಿಮಾನಿಗಳಲ್ಲೂ ಅದೇ ಇತ್ತು. ಈ ಅಭಿಮಾನವನ್ನು ಚಂದ್ರು ಚೆನ್ನಾಗಿ ಬಳಸಿಕೊಂಡಿದ್ದಾರೆ. ಅದರ ಪರಿಣಾಮ ಇವತ್ತು ಸಿನಿಮಾವನ್ನು ಅಭಿಮಾನಿಗಳು ಖುಷಿಪಟ್ಟು ನೋಡುತ್ತಿದ್ದಾರೆ. ಈ ಸಿನಿಮಾ ಮೂಲಕ ಚಂದ್ರು ಕೂಡಾ ತಮ್ಮ ಮೂಲ ಶೈಲಿಯನ್ನು ಕೊಂಚ ಬದಲಿಸಿಕೊಂಡಿದ್ದರು. ಸದ್ಯ ಚಂದ್ರು ಮೊಗದಲ್ಲಿ ನಗು ಮೂಡಿದೆ. ಕನಸುಗಳು ದೊಡ್ಡದಾಗಿವೆ. ಅತ್ತ ಕಡೆ ತೆಲುಗು ಅಭಿಮಾನಿಗಳು ಕೂಡಾ “ಐ ಲವ್ ಯು’ ಸಿನಿಮಾವನ್ನು ಇಷ್ಟಪಡುತ್ತಿದ್ದಾರೆ. ಇಡೀ ಸಿನಿಮಾವನ್ನು ಟ್ರೆಂಡಿಯಾಗಿ ಕಟ್ಟಿಕೊಟ್ಟು, ಜೊತೆಗೊಂದು ಸಂದೇಶ ನೀಡಿ ಗೆದ್ದಿದ್ದಾರೆ. ಈ ಮೂಲಕ ಮತ್ತೂಮ್ಮೆ ಚಂದ್ರು ಹೆಸರು ತೆಲುಗಿನಲ್ಲೂ ಓಡುತ್ತಿದೆ. ಇದರ ನಡುವೆಯೇ ತಮಿಳಿನಿಂದಲೂ ಚಂದ್ರು ಅವರಿಗೆ ಸಿನಿಮಾ ಮಾಡುವ ಅವಕಾಶಗಳು ಹುಡುಕಿಕೊಂಡು ಬರುತ್ತಿರುವುದು ಸುಳ್ಳಲ್ಲ. ಜೊತೆಗೆ ತಮಿಳಿಗೆ ರೀಮೇಕ್ ಆಗುವ ಮಾತುಕತೆ ಕೂಡಾ ನಡೆಯುತ್ತಿವೆ.