ಬೆಂಗಳೂರು: ವಿಧಾನಸಭೆಯಿಂದ ವಿಧಾನ ಪರಿಷತ್ತಿನ ಮೂರು ಸ್ಥಾನಗಳಿಗೆ ನಡೆಯುವ ಉಪಚುನಾವಣೆಗೆ ನಾಮಪತ್ರ ಸಲ್ಲಿಸಲು ಜೂ. 20 ಕೊನೆಯ ದಿನವಾಗಿದ್ದು, ಅಭ್ಯರ್ಥಿಗಳ ಪಟ್ಟಿ ಇನ್ನೂ ಪ್ರಕಟಗೊಂಡಿಲ್ಲ.
ಸಹಜವಾಗಿ ಎಲ್ಲ ಸ್ಥಾನಗಳು ಕಾಂಗ್ರೆಸ್ ಪಾಲಾಗಲಿವೆ. ಮಾಜಿ ಸಿಎಂ ಜಗದೀಶ್ ಶೆಟ್ಟರ್, ಮಾಜಿ ಸಚಿವ ಬಾಬುರಾವ್ ಚಿಂಚನಸೂರು ಹಾಗೂ ಹಾಲಿ ಸಚಿವ ಎನ್.ಎಸ್ ಬೋಸರಾಜು ಅವರ ಹೆಸರನ್ನು ಅಂತಿಮಗೊಳಿಸಲಾಗಿದ್ದರೂ ಹೈಕಮಾಂಡ್ ಅಧಿಕೃತವಾಗಿ ಪ್ರಕಟಿಸಿಲ್ಲ.
ಇದೇ ವೇಳೆ ಮೂರು ಸ್ಥಾನಗಳನ್ನು ಕಾಂಗ್ರೆಸ್ ಗೆಲ್ಲುವುದು ಖಚಿತವಾಗಿದ್ದರೂ, ವಿಪಕ್ಷವಾಗಿ ನಾವೂ ಅಭ್ಯರ್ಥಿಗಳನ್ನು ಕಣಕ್ಕಿಳಿಸುತ್ತೇವೆಂದು ಬಿಜೆಪಿ ಹೇಳಿತ್ತು. ಆದರೆ ಹೆಸರು ಅಂತಿಮಗೊಂಡಿಲ್ಲ.
ಲಕ್ಷ್ಮಣ ಸವದಿ, ಆರ್. ಶಂಕರ್, ಬಾಬುರಾವ್ ಚಿಂಚನಸೂರು ರಾಜೀನಾಮೆಯಿಂದ ಮೂರು ಸ್ಥಾನಗಳು ತೆರವವಾಗಿದ್ದವು.
ಕಾಂಗ್ರೆಸ್ ಅಭ್ಯರ್ಥಿಗಳ ಆಯ್ಕೆಗೆ ಕಳೆದ ವಾರ ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲ, ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ಪ್ರತ್ಯೇಕ ಸಭೆ ನಡೆಸಿದ್ದರು. ಜೂ.18ಕ್ಕೆ ಅಭ್ಯರ್ಥಿಗಳ ಪಟ್ಟಿ ಪ್ರಕಟಗೊಳ್ಳುತ್ತದೆ ಎನ್ನಲಾಗಿತ್ತು.
ಇದೇ ವೇಳೆ ನಾಮನಿರ್ದೇಶನ ಕೋಟಾದಲ್ಲಿ ತೆರವಾಗಿರುವ ಮೂರು ಸ್ಥಾನಗಳಿಗೆ 6ಕ್ಕೂ ಹೆಚ್ಚು ಹೆಸರುಗಳಿದ್ದು, ಮೂರು ಹೆಸರುಗಳನ್ನು ಅಂತಿಮಗೊಳಿಸುವ ಕಸರತ್ತು ಪಕ್ಷದ ಮಟ್ಟದಲ್ಲಿ ನಡೆಯುತ್ತಿದೆ.