ವಿಜಯಪುರ: ನಗರದಲ್ಲಿ ಸೆ. 11 ರಂದು ವಿಜಯಪುರ-ಬಾಗಲಕೋಟೆ ಸ್ಥಳೀಯ ಸಂಸ್ಥೆಗಳ ಮೇಲ್ಮನೆ ಉಪ ಚುನಾವಣೆಯ ಮತ ಎಣಿಕೆಗೆ ಸಿದ್ಧತೆ ನಡೆದಿದೆ. ಜಿಲ್ಲಾಡಳಿತ ನಗರದ ವಿ.ಭ. ದರಬಾರ ಪ್ರೌಢಶಾಲೆಯಲ್ಲಿ ಚುನಾವಣಾ
ಆಯೋಗದ ನಿರ್ದೇಶನದದಂತೆ ಮತ ಎಣಿಕೆಗೆ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ.
ಭದ್ರತಾ ಕೊಠಡಿಯಿಂದ ಮತ ಎಣಿಕೆ ಕೊಠಡಿಗೆ ಮತ ಪೆಟ್ಟಿಗೆ ಸಾಗಿಸಲು ಸಹ ಅಧಿಕಾರಿ ಹಾಗೂ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. ಮತ ಎಣಿಕೆಗೆ ತಲಾ 28 ಸಿಬ್ಬಂದಿಯಂತೆ 14 ಟೇಬಲ್ ವ್ಯವಸ್ಥೆ ಮಾಡಲಾಗಿದೆ. ಮತ ಎಣಿಕೆಗಾಗಿ ಪ್ರತಿ ಟೇಬಲ್‌ಗೆ ಓರ್ವ ಮೇಲ್ವಿಚಾರಕ, ಒಬ್ಬ ಸಹಾಯಕ ಸಿಬ್ಬಂದಿಯನ್ನು ನಿಯೋಜಿತಗೊಂಡಿದೆ. ಮೂರು
ಸುತ್ತಿನಲ್ಲಿ ಮತಪತ್ರಗಳನ್ನು 25 ಮತಪತ್ರಗಳ ಬಂಡಲ್ ವಿಂಗಡಿಸಿ, ಡ್ರಂನಲ್ಲಿ ಹಾಕಿ ಕಲಕಲಾಗುತ್ತದೆ. ಪ್ರತಿ ಟೇಬಲ್‌ಗೆ ಪ್ರಥಮ ಪ್ರಾಶಸ್ತದ ಮತ ಎಣಿಕೆ ನಡೆಯಲಿದೆ ಎಂದು ಜಿಲ್ಲಾಧಿಕಾರಿ ಸಂಜಯ ಶೆಟ್ಟೆಣ್ಣವರ ತಿಳಿಸಿದ್ದಾರೆ.
ಮತ ಎಣಿಕೆ ಸಂದರ್ಭದಲ್ಲಿ ಅಹಿತಕರ ಘಟನೆಗಳು ಸಂಭವಿಸಿದಂತೆ ಪೊಲೀಸ್ ಇಲಾಖೆ ಸಕಲ ಸಿದ್ಧತೆ ಮಾಡಿಕೊಂಡಿದೆ. ಮತ ಎಣಿಕೆ ಕೇಂದ್ರದ ಹೊರ-ಒಳಭಾಗದಲ್ಲಿ ಸೂಕ್ತ ಪೊಲೀಸ್ ಕಾವಲು ಹಾಕಲಾಗಿದೆ. ಅಭ್ಯರ್ಥಿಗಳ ಮತ ಎಣಿಕೆ ಏಜೆಂಟ್‌ರಿಗೆ ಮಾತ್ರ ಮತ ಎಣಿಕೆ ಕೇಂದ್ರ ಪ್ರವೇಶಕ್ಕೆ ಅವಕಾಶ ನೀಡಲಾಗುತ್ತಿದೆ. ಇನ್ನು ಮತ ಎಣಿಕೆ ಕೇಂದ್ರ ಪ್ರವೇಶದ ಹಂತದಲ್ಲಿ 4 ದ್ವಾರಗಳನ್ನು ನಿರ್ಮಿಸಿದ್ದು, ಒಂದು ಮತ್ತು ಎರಡನೇಯ ದ್ವಾರದಿಂದ ಸಾಮೂಹಿಕವಾಗಿ ಗುರುತಿನ ಚೀಟಿ ಪರಿಶೀಲನೆ ನಡೆಸಿ ಮತ ಎಣಿಕೆ ಕೇಂದ್ರಕ್ಕೆ ಪ್ರವೇಶ ನೀಡಲಾಗುತ್ತದೆ. ಮೂರನೇ ದ್ವಾರದಿಂದ ಅಧಿಕಾರಿ, ಸಿಬ್ಬಂದಿಗಳಿಗೆ, ಅಭ್ಯರ್ಥಿಗಳಿಗೆ ಪ್ರವೇಶಾವಕಾಶ ಕಲ್ಪಿಲಾಗಿದೆ. 4ನೇ ದ್ವಾರದದಿಂದ ಏಜೆಂಟ್‌ರಿಗೆ ಪ್ರವೇಶ ನೀಡಲಾಗುತ್ತಿದೆ. ಮತ ಎಣಿಕೆ ಕರ್ತವ್ಯಕ್ಕೆ ನಿಯೋಜಿತ ಅಧಿಕಾರಿಗಳನ್ನು ಹೊರತುಪಡಿಸಿ
ಉಳಿದ ವ್ಯಕ್ತಿಗಳ ವಾಹನಗಳನ್ನು ಮತ ಎಣಿಕೆ ಕೇಂದ್ರ ಪ್ರವೇಶಿಸದಂತೆ ನಿರ್ಭಂದಿಸಲಾಗಿದೆ ಎಂದು ಜಿಲ್ಲಾಧಿಕಾರಿ ವಿವರಿಸಿದ್ದಾರೆ.