Advertisement

ಸಾರ್ವಜನಿಕ ಸುರಕ್ಷತೆ ಕಾಯ್ದೆಗೆ ಮೇಲ್ಮನೆ ಅಸ್ತು

07:25 AM Nov 16, 2017 | Team Udayavani |

ವಿಧಾನಪರಿಷತ್ತು: ಕರ್ನಾಟಕ ಸಾರ್ವಜನಿಕ ಸುರಕ್ಷತೆ ಜಾರಿ ಕಾಯ್ದೆಯಲ್ಲಿ ಪೊಲೀಸರಿಗೆ ಹೆಚ್ಚಿನ ಅಧಿಕಾರ ನೀಡಿರುವ ಬಗ್ಗೆ ಪಕ್ಷಭೇದ ಮರೆತು ಆಕ್ಷೇಪ ವ್ಯಕ್ತಪಡಿಸಿದ ಸದಸ್ಯರು, ಪೊಲೀಸರಿಂದ ಅಧಿಕಾರ ದುರ್ಬಳಕೆಗೆ ಅವಕಾಶ ಬೇಡ. ಬದಲಾಗಿ ಆಯಾ ಇಲಾಖೆಗೆ ಜವಾಬ್ದಾರಿ ನೀಡಬೇಕು. ಸುರಕ್ಷತೆಗೆ ಸಿಸಿ ಟಿವಿ ಕ್ಯಾಮರಾ ಅಳವಡಿಸಲು ಖಾಸಗಿ-ಸರ್ಕಾರಿ ಸಂಸ್ಥೆಗಳು ಎಂಬ ತಾರತಮ್ಯ ಇಲ್ಲದೆ ಎಲ್ಲ ಕಡೆಗೂ ಅಳವಡಿಸಲು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.

Advertisement

ಗೃಹ ಸಚಿವ ರಾಮಲಿಂಗಾರೆಡ್ಡಿ ಬುಧವಾರ ಮಂಡಿಸಿದ ಕರ್ನಾಟಕ ಸಾರ್ವಜನಿಕ ಸುರಕ್ಷತೆ (ಕ್ರಮಗಳ) ಜಾರಿ ವಿಧೇಯಕ-2017ದ ಮೇಲಿನ ಚರ್ಚೆಯಲ್ಲಿ ಪಾಲ್ಗೊಂಡು ಬಹುತೇಕರು ವಿಧೇಯಕ ಸ್ವಾಗತಿಸಿ ಕೆಲವೊಂದು ತಿದ್ದುಪಡಿಗೆ ಸಲಹೆ ನೀಡಿದರು. ಜೆಡಿಎಸ್‌ನ ಬಸವರಾಜ ಹೊರಟ್ಟಿ, ರಮೇಶ್‌ ಬಾಬು, ಕಾಂತರಾಜು, ಟಿ.ಎ.ಶರವಣ, ಕಾಂಗ್ರೆಸ್‌ನ ವಿ.ಎಸ್‌.ಉಗ್ರಪ್ಪ, ಐವನ್‌ ಡಿ’ಸೋಜ, ಶರಣ್ಣಪ್ಪ
ಮಟ್ಟೂರ, ಜಯಮಾಲ, ಪಿ.ಆರ್‌.ರಮೇಶ್‌, ಬಿಜೆಪಿಯ ಕ್ಯಾ.ಗಣೇಶ್‌ ಕಾರ್ಣಿಕ್‌, ಭಾನುಪ್ರಕಾಶ್‌, ರಾಮಚಂದ್ರಗೌಡ, ತಾರಾ ಅನುರಾಧ, ಬಿ.ಜೆ.ಪುಟ್ಟಸ್ವಾಮಿ, ಪಕ್ಷೇತರ ಸದಸ್ಯ ಬಸನಗೌಡ ಪಾಟೀಲ ಯತ್ನಾಳ್‌ ಮಾತನಾಡಿ, ಸಾರ್ವಜನಿಕ ಸುರಕ್ಷತೆ ದೃಷ್ಟಿಯಿಂದ ಬಸ್‌ ಹಾಗೂ ರೈಲ್ವೆ ನಿಲ್ದಾಣ, ಖಾಸಗಿ ಶಾಲಾ-ಕಾಲೇಜು, ಖಾಸಗಿ ಆಸ್ಪತ್ರೆ ಇನ್ನಿತರ ಕಡೆಗಳಲ್ಲಿ ಆಯಾ ಸಂಸ್ಥೆ ಮಾಲೀಕರು ತಮ್ಮದೇ ವೆಚ್ಚದಲ್ಲಿ ಸಿಸಿಟಿವಿ ಕ್ಯಾಮರಾ ಅಳವಡಿಸಿಕೊಳ್ಳಬೇಕು. ಅನುಮತಿ ಪಡೆಯದೆ ಪೊಲೀಸರು ಯಾವುದೇ ಕ್ಷಣದಲ್ಲಿ ಬಂದು ಪರಿಶೀಲನೆ, ತಪಾಸಣೆ ಮಾಡಬಹುದು ಎಂಬುದು ಪೊಲೀಸ್‌ ಅಧಿಕಾರ ದುರ್ಬಳಕೆಗೆ ಅವಕಾಶ ನೀಡಿದಂತಾಗುತ್ತದೆ. ಅದರ ಬದಲು ಆಯಾ ಇಲಾಖೆಗಳಿಗೆ ಜವಾಬ್ದಾರಿ ನೀಡಿ ಎಂದು ಒತ್ತಾಯಿಸಿದರು.

ಕೇವಲ ಖಾಸಗಿ ಕಟ್ಟಡಗಳು ಎನ್ನದೆ ಸರಕಾರಿ ಕಟ್ಟಡಗಳಿಗೂ ಸಿಸಿಟಿವಿ ಕ್ಯಾಮರಾ ಕಡ್ಡಾಯಗೊಳಿಸಬೇಕು. ಕಾಯ್ದೆ ಮಹಾನಗರಗಳಿಗೆ ಸೀಮಿತವಾಗದೆ ಇಡೀ ರಾಜ್ಯಕ್ಕೆ ಅನ್ವಯ ಮಾಡಬೇಕು. ಶಾಸಕರು, ನಗರಪಾಲಿಕೆ ಸದಸ್ಯರ ಅನುದಾನದಲ್ಲಿ ಸಿಸಿಟಿವಿ ಕ್ಯಾಮರಾ ಅಳವಡಿಕೆಗೆ ಕ್ರಮ ಕೈಗೊಳ್ಳಬೇಕು. ನಿಯಮ ಉಲ್ಲಂಘಿಸುವ ಸಂಸ್ಥೆಗಳಿಗೆ ಬೀಗಮುದ್ರೆ ಪದ ಕೈ ಬಿಟ್ಟು, ಸಂಸ್ಥೆ ಮುಖ್ಯಸ್ಥರನ್ನು ಹೊಣೆಯಾಗಿಸಬೇಕು. ಈ ವಿಚಾರದಲ್ಲಿ ಶಿಕ್ಷಣ ಸಂಸ್ಥೆ, ಧಾರ್ಮಿಕ ಕೇಂದ್ರಗಳಿಗೆ ವಿನಾಯಿತಿ ನೀಡಬೇಕೆಂದು ಒತ್ತಾಯಿಸಿದರು.

ಸದಸ್ಯರ ಸಲಹೆಗಳಿಗೆ ಪ್ರತಿಕ್ರಿಯಿಸಿದ ಗೃಹ ಸಚಿವ ರಾಮಲಿಂಗಾರೆಡ್ಡಿ, ತಮಿಳುನಾಡು, ಆಂಧ್ರ ಪ್ರದೇಶದಲ್ಲಿ ಇಂತಹ ಕಾಯ್ದೆ ಜಾರಿಯಲ್ಲಿದೆ. ಸದ್ಯಕ್ಕೆ ಮಹಾನಗರ ಪಾಲಿಕೆ ವ್ಯಾಪ್ತಿ ಎಂದು ಇದ್ದರೂ ರಾಜ್ಯಾದ್ಯಂತ ಅಳವಡಿಸಲು ವಿಧೇಯಕದಲ್ಲಿ ಅವಕಾಶವಿದೆ. ಸುರಕ್ಷತೆ ಜವಾಬ್ದಾರಿ ಕೇವಲ ಪೊಲೀಸ್‌ ಇಲಾಖೆಗೆ ಇರುತ್ತದೆಯೇ ವಿನಃ ಇತರೆ ಇಲಾಖೆಗೆ ಹೆಚ್ಚಿನ ಅಧಿಕಾರ ಇಲ್ಲ. ಅದಕ್ಕಾಗಿ
ವಿಧೇಯಕದಲ್ಲಿ ಅವಕಾಶ ಮಾಡಿಕೊಡಲಾಗಿದೆ. ಕಾಯ್ದೆಯ ಕಾನೂನು ರೂಪಿಸುವ ಸಂದರ್ಭದಲ್ಲಿ ಸದಸ್ಯರ ಸಲಹೆಗಳನ್ನು ಪರಿಗಣಿಸಿ ಹಲವು ಸುಧಾರಣೆ ತರಲಾಗುವುದು ಎಂದರು. ಈ ಭರವಸೆ ಹಿನ್ನೆಲೆಯಲ್ಲಿ ಸದನ ಧ್ವನಿಮತದಿಂದ ವಿಧೇಯಕಕ್ಕೆ ಒಪ್ಪಿಗೆ ಸೂಚಿಸಿತು.

Advertisement

Udayavani is now on Telegram. Click here to join our channel and stay updated with the latest news.

Next