ಬೆಂಗಳೂರು: ಮೆಟ್ರಿಕ್ ನಂತರದ ಹಾಸ್ಟೆಲ್ಗಳಲ್ಲಿ ವಾಸ ಮಾಡುತ್ತಿರುವ ಪರಿಶಿಷ್ಟ ಜಾತಿಯ ವಿದ್ಯಾರ್ಥಿಗಳಿಗೆ ಪರ್ವತಾರೋಹಣ ತರಬೇತಿಗೆ ಕಳಿಸುವ ಕಾರ್ಯಕ್ರಮಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಚಾಲನೆ ನೀಡಿದರು.
ಸಮಾಜ ಕಲ್ಯಾಣ ಇಲಾಖೆ ವತಿಯಿಂದ ಬುಧವಾರ ವಿಧಾನಸೌಧದ ಬೃಹತ್ ಮೆಟ್ಟಿಲುಗಳ ಮುಂಭಾಗದಲ್ಲಿ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಪರ್ವತಾರೋಹಣ ತರಬೇತಿಗೆ ಆಯ್ಕೆಯಾದ 60 ವಿದ್ಯಾರ್ಥಿಗಳ ತಂಡಕ್ಕೆ ಕಿಟ್‌ಗಳನ್ನು ವಿತರಿಸಿ ಬೀಳ್ಕೊಟ್ಟರು.
ಬಳಿಕ ಮಾತನಾಡಿ, ವಿದ್ಯಾರ್ಥಿಗಳಲ್ಲಿ ಅಡಗಿರುವ ಸುಪ್ತ ಪ್ರತಿಭೆ ಹಾಗೂ ಸಾಹಸಿ ಪ್ರವೃತ್ತಿಯನ್ನು ಗುರುತಿಸಿ ಪ್ರೋತ್ಸಾಹಿಸುವ ಉದ್ದೇಶದಿಂದ ಸರ್ಕಾರ ಈ ಕಾರ್ಯಕ್ರಮ ಜಾರಿಗೆ ತಂದಿದೆ ಎಂದು ತಿಳಿಸಿದರು. ಜೀವನದಲ್ಲಿ ಸೋಲು ಮತ್ತು ಗೆಲುವನ್ನು ಸಮಚಿತ್ತ ಮತ್ತು ಕ್ರೀಡಾ ಮನೋಭಾವದಿಂದ ಸ್ವೀಕರಿಸಬೇಕು.
ಆಗ ಮಾತ್ರ ಜೀವನದಲ್ಲಿ ಯಶಸ್ಸು ಕಾಣಲು ಸಾಧ್ಯ ಎಂದು ಹೇಳಿದರು. ಪರ್ವತಾರೋಹಣ ತರಬೇತಿಗೆ ಮೆಟ್ರಿಕ್ ನಂತರದ ಹಾಸ್ಟೆಲ್ಗಳಲ್ಲಿ ವಾಸ ಮಾಡುತ್ತಿರುವ ಪರಿಶಿಷ್ಟ ಜಾತಿಯ 30 ಬಾಲಕರು ಹಾಗೂ 30 ಬಾಲಕಿಯರು ಸೇರಿ ಒಟ್ಟು 60 ವಿದ್ಯಾರ್ಥಿಗಳನ್ನು ಆಯ್ಕೆ ಮಾಡಲಾಗಿದೆ.
ಇವರಿಗೆ ಹಿಮಾಚಲ ಪ್ರದೇಶದ ಮನಾಲಿಯಲ್ಲಿರುವ ಅಟಲ್ ಬಿಹಾರಿ ವಾಜಪೇಯಿ ಪರ್ವತಾರೋಹಣ ಸಂಸ್ಥೆಯಲ್ಲಿ ಸೆ.28ರಿಂದ ಅ.12ರವೆರೆಗೆ 15 ದಿನಗಳ ಕಾಲ ರಾಜ್ಯ ಸರ್ಕಾರದಿಂದ ಉಚಿತವಾಗಿ ಪರ್ವತಾರೋಹಣ ತರಬೇತಿ ನೀಡಲಾಗುತ್ತದೆ ಎಂದರು.