Advertisement

ಸಮಸ್ಯೆಗಳ ಆಗರ 105 ವರ್ಷ ಹಳೆಯ ಉಪ್ಪಳ ರೈಲು ನಿಲ್ದಾಣ

08:46 PM Apr 26, 2019 | Sriram |

ಕಾಸರಗೋಡು: ದಿನದಿಂದ ದಿನಕ್ಕೆ ಉಪ್ಪಳ ಪೇಟೆ ಬೆಳೆಯುತ್ತಿದೆ. ಆದರೆ ಇದೇ ರೀತಿಯಲ್ಲಿ ಮೂಲ ಸೌಲಭ್ಯವನ್ನು ಒದಗಿಸಲು ಬಹುತೇಕ ಎಲ್ಲಾ ಇಲಾಖೆಗಳು ವಿಫಲವಾಗಿದೆ. ಅದರಲ್ಲೂ ಉಪ್ಪಳಕ್ಕೆ ರೈಲು ಸೌಲಭ್ಯ ಅಷ್ಟಕಷ್ಟೇ. ಈ ರೈಲು ನಿಲ್ದಾಣಕ್ಕೆ ಸುಮಾರು 105 ವರ್ಷಗಳ ಹಳಮೆಯಿದೆ. ಈ ನಿಲ್ದಾಣ ಬ್ರಿಟಿಷರ ಕಾಲದಲ್ಲಿ ನಿರ್ಮಾಣಗೊಂಡಿತ್ತು. ಈ ನಿಲ್ದಾಣವನ್ನು ದಿನ ನಿತ್ಯ ಸಾವಿರಾರು ಪ್ರಯಾಣಿಕರು ಬಳಸುತ್ತಿದ್ದಾರೆ. ಆದರೆ ಹಲವು ಕಾರಣಗಳಿಂದ ಈ ನಿಲ್ದಾಣ ಸಾಕಷ್ಟು ಅಭಿವೃದ್ಧಿ ಕಾಣದೆ ಸಮಸ್ಯೆಗಳ ಆಗರವೇ ಆಗಿದೆ.ನಿಲ್ದಾಣ ಕಟ್ಟಡ ಕುಸಿದು ಬೀಳುವ ಪರಿಸ್ಥಿತಿಯಲ್ಲಿದೆ.

Advertisement

ಗಡಿ ಪ್ರಯಾಣಿಕರೇ ಹೆಚ್ಚು
ಕರ್ನಾಟಕ ಗಡಿ ಪ್ರದೇಶಗಳಾದ ಪೈವಳಿಕೆ, ಬಾಯಾರು, ಕುರುಡಪದವು, ಮೀಂಜ, ವರ್ಕಾಡಿ,ಆನೆಕಲ್ಲು,ಕನಿಯಾಲ ಮೊದಲಾದ ಪ್ರದೇಶಗಳ ನೂರಾರು ಮಂದಿ ಇದೀಗಲೂ ಈ ನಿಲ್ದಾಣ ಬಳಸಿ ಮಂಗಳೂರು ಹಾಗೂ ಕಾಸರಗೋಡು, ಕಣ್ಣೂರು ಸಹಿತ ವಿವಿಧೆಡೆ ಪ್ರಯಾಣಿಸುತ್ತಾರೆ. ಕಾಲೇಜು ವಿದ್ಯಾರ್ಥಿಗಳು, ವ್ಯಾಪಾರಿಗಳು, ವೈದ್ಯಕೀಯ ಶುಶ್ರೂಷೆ ಸಹಿತ ದಿನನಿತ್ಯದ ಚಟುವಟಿಕೆಗಳಿಗೆ ಮಂಗಲ್ಪಾಡಿ, ಮೀಂಜ, ವರ್ಕಾಡಿ, ಪೈವಳಿಕೆ ಗ್ರಾ. ಪಂ. ವ್ಯಾಪ್ತಿಗಳ ಜನರೂ ಈ ನಿಲ್ದಾಣ ಬಳಸುತ್ತಾರೆ.

ಕಟ್ಟಡ ಕುಸಿದು ಬೀಳುವ ಭೀತಿ
ನೂರು ವರ್ಷಗಳನ್ನು ದಾಟಿರುವ ಈ ನಿಲ್ದಾಣವನ್ನು ರೈಲ್ವೇ ಇಲಾಖೆ ನಿರ್ಲಕ್ಷಿಸಿದೆ. ಪ್ರಯಾಣಿಕರಿಗೆ ಕುಳಿತು ಕೊಳ್ಳಲು ವ್ಯವಸ್ಥೆ, ಕುಡಿಯುವ ನೀರು, ಶೌಚಾಲಯ, ವಿದ್ಯುತ್‌ ವ್ಯವಸ್ಥೆ ಸಹಿತ ಯಾವುದೇ ಸೌಲಭ್ಯಗಳಿಲ್ಲದೆ ಗತ ನೆನಪುಗಳನ್ನು ಮೆಲುಕು ಹಾಕುತ್ತಿದೆ.

ಶತಮಾನದಷ್ಟು ಹಳತಾದ ಹಂಚಿನ ಮಾಡಿನ ಈ ನಿಲ್ದಾಣದ ಗೋಡೆಗಳು ಅಲ್ಲಲ್ಲಿ ಬಿರುಕು ಬಿಟ್ಟಿರುವಂತಿದೆ. ಜತೆಗೆ ನಿಲ್ದಾಣದ ಹೊರ ಆವರಣದಲ್ಲಿ ವಾಹನ ನಿಲುಗಡೆಗೆ ಸ್ಥಳಾವಕಾಶಗಳಿದ್ದರೂ ಪ್ರಸ್ತುತ ಅಧಿಕಗೊಳ್ಳುತ್ತಿರುವ ವಾಹನ ದಟ್ಟಣೆಗಳ ಕಾರಣ ಸ್ಥಳಾವಕಾಶ ಸಾಕಾಗುತ್ತಿಲ್ಲ.

ಎಲ್ಲ ರೈಲುಗಳಿಗೆ ನಿಲುಗಡೆ ಇಲ್ಲಿಲ್ಲ
ಈ ನಿಲ್ದಾಣ ಶತಮಾನಗಳನ್ನು ದಾಟಿರುವುದು ಹೌದಾದರೂ ಈ ನಿಲ್ದಾಣದಲ್ಲಿ ಎಲ್ಲಾ ರೈಲುಗಳು ನಿಲುಗಡೆಗೊಳ್ಳುತ್ತಿಲ್ಲ. ಲೋಕಲ್‌ ರೈಲುಗಳು ನಿಗದಿತ ವೇಳೆ ಮಾತ್ರ ನಿಲುಗಡೆ ಗೊಳ್ಳುತ್ತಿದ್ದು, ಕಳೆದ ಎರಡು ವರ್ಷಗಳ ಹಿಂದೆ ಈ ನಿಲ್ದಾಣದಲ್ಲಿ ಎಲ್ಲ ರೈಲುಗಳಿಗೂ ನಿಲುಗಡೆ ನೀಡಬೇಕೆಂದು ಆಗ್ರಹಿಸಿ ಪ್ರತಿಭಟನೆಗಳು ನಡೆದಿದ್ದರೂ ಬೇಡಿಕೆ ಈ ವರೆಗೆ ಈಡೇರಿಲ್ಲ.

Advertisement

ಉಪ್ಪಳ ರೈಲು ನಿಲ್ದಾಣವನ್ನು ಮೇಲ್ದರ್ಜೆ ಗೇರಿಸುವ ನಿಟ್ಟಿನಲ್ಲಿ ಹಲವು ಬಾರಿ ಸಂಬಂಧಿಸಿ ದವರಿಗೆ ಮನವಿ ನೀಡಿದ್ದರೂ ಫಲ ನೀಡಿಲ್ಲ. ಜತೆಗೆ ನಿಲ್ದಾಣ ಕಟ್ಟಡವನ್ನು ದುರಸ್ತಿಗೊಳಿಸಿ ಪ್ರಯಾಣಿಕರ ಸುಗಮ ಸಂಚಾರಕ್ಕೆ ಅನುವುಮಾಡಿಕೊಡಬೇಕೆಂದು ಸ್ಥಳೀಯರು ಆಗ್ರಹಿಸಿದ್ದಾರೆ.

ಹೋರಾಟ ಅನಿವಾರ್ಯ
ಉಪ್ಪಳ ರೈಲು ನಿಲ್ದಾಣದಲ್ಲಿ ನೇತ್ರಾವತಿ ರೈಲು ಗಾಡಿಗೆ ನಿಲುಗಡೆ ನೀಡದಿದ್ದಲ್ಲಿ, ಪಿಆರ್‌ಎಸ್‌(ಪ್ಯಾಸೆಂಜರ್‌ ರಿಸರ್ವೇಶನ್‌ ಸಿಸ್ಟಂ) ಆರಂಭಿಸದಿದ್ದರೆ ಹಾಗೂ ರೈಲು ನಿಲ್ದಾಣದ ಅವ್ಯವಸ್ಥೆ ಪರಿಹರಿಸದಿದ್ದಲ್ಲಿ ಹೋರಾಟ ನಡೆಸಲಾಗುವುದು.
– ಪ್ರಕಾಶ್‌ ಚೆನ್ನಿತ್ತಲ
ರಾಷ್ಟ್ರೀಯ ಚೆಯರ್‌ಮನ್‌,
ಹ್ಯೂಮನ್‌ ರೈಟ್ಸ್‌ ಪ್ರೊಟೆಕ್ಷನ್‌ ಮಿಷನ್‌(ಎಚ್‌.ಆರ್‌.ಪಿ.ಎಂ.)

ಚುನಾವಣೆ ಕಾರಣ
ಉಪ್ಪಳ ರೈಲು ನಿಲ್ದಾಣದಲ್ಲಿ ನೇತ್ರಾ ವತಿ ರೈಲು ಗಾಡಿಗೆ ನಿಲುಗಡೆ ಮಂಜೂರು ಮಾಡಲಾಗುವುದು. ಪಿ.ಆರ್‌.ಎಸ್‌. ಕೌಂಟರ್‌ ಸ್ಥಾಪಿಸಲಾಗುವುದು. ರೈಲು ನಿಲ್ದಾಣದ ಅವ್ಯವಸ್ಥೆ ಪರಿಹರಿಸಲಾಗುವುದು. ಚುನಾವಣೆಯ ಹಿನ್ನೆಲೆಯಲ್ಲಿ ಉಪ್ಪಳ ರೈಲು ನಿಲ್ದಾಣ ಅಭಿವೃದ್ಧಿ ಬಗ್ಗೆ ನೀಡಿರುವ ಭರವಸೆ ಈಡೇರಿಸಲು ವಿಳಂಬವಾಗಿದೆ. ರೈಲು ನಿಲ್ದಾಣ ಕಾಲಾವಧಿಯೊಳಗೆ ಅಭಿವೃದ್ಧಿ ಪಡಿಸಲಾಗುವುದು.
– ಪ್ರತಾಪ್‌ಸಿಂಗ್‌ ಶಮಿ
ಪಾಲಾ^ಟ್‌ ಡಿ.ಆರ್‌.ಎಂ.

Advertisement

Udayavani is now on Telegram. Click here to join our channel and stay updated with the latest news.

Next