Advertisement

ವಕೀಲ ವೃತ್ತಿ ಮೌಲ್ಯ ಎತ್ತಿ ಹಿಡಿಯಿರಿ

12:54 PM Mar 14, 2019 | Team Udayavani |

ದಾವಣಗೆರೆ: ನ್ಯಾಯವಾದಿಗಳು ಒತ್ತಡ, ಭಾವುಕತೆಗೆ ಒಳಗಾಗದೆ ವೃತ್ತಿಯ ಮೌಲ್ಯಗಳನ್ನು ಸದಾ ಎತ್ತಿ ಹಿಡಿಯಬೇಕು ಎಂದು ಶಿವಮೊಗ್ಗ ಜಿಲ್ಲಾ ಆಡಳಿತಾತ್ಮಕ ನ್ಯಾಯಮೂರ್ತಿ ಜಿ. ನರೇಂದರ್‌ ತಿಳಿಸಿದ್ದಾರೆ.

Advertisement

ಶನಿವಾರ ರಾಜ್ಯ, ಜಿಲ್ಲಾ ವಕೀಲರ ಸಂಘ, ಕಾನೂನು ಸೇವಾ ಪ್ರಾಧಿಕಾರ, ಮರಣೋತ್ತರ ಪರಿಹಾರ ನಿಧಿ ಟ್ರಸ್ಟ್‌ ಸಂಯುಕ್ತಾಶ್ರಯದಲ್ಲಿ ಜಿಲ್ಲಾ ವಕೀಲರ ಸಾಂಸ್ಕೃತಿಕ ಭವನದಲ್ಲಿ ಏರ್ಪಡಿಸಿದ್ದ ಕಾನೂನು ಕಾರ್ಯಾಗಾರ ಸಮಾರೋಪದಲ್ಲಿ ಮಾತನಾಡಿದ ಅವರು, ಅತಿ ಪ್ರಮುಖವಾದ ವಕೀಲ ವೃತ್ತಿಯಲ್ಲಿನ ಮೌಲ್ಯಗಳು ಅತ್ಯಮೂಲ್ಯ. ಎಂತದ್ದೇ ಸಂದರ್ಭದಲ್ಲಿ ಮೌಲ್ಯಕ್ಕೆ ಕುಂದುಂಟಾಗದಂತೆ ನಡೆದುಕೊಳ್ಳಬೇಕು. ವಕೀಲರ ವೃತ್ತಿಯಲ್ಲಿ ಹಲವಾರು ಗಣ್ಯರನ್ನು ಕಂಡಿದ್ದೇವೆ. ರಾಷ್ಟ್ರಪಿತ ಮಹಾತ್ಮ ಗಾಂಧೀಜಿ ಸಹ ವಕೀಲ ವೃತ್ತಿಯಿಂದ ಬಂದವರು ಎಂದು ತಿಳಿಸಿದರು.

ವಕೀಲ ವೃತ್ತಿಯ ಮೌಲ್ಯ ಅತೀ ಮಹತ್ವದ್ದವು. ಜನ ಸಾಮಾನ್ಯರು ಬೇರೆಲ್ಲ ವ್ಯವಸ್ಥೆಗಳಲ್ಲಿ ನಂಬಿಕೆ ಕಳೆದುಕೊಂಡ ಮೇಲೆ ನ್ಯಾಯಾಂಗದ ಬಳಿ ಬರುತ್ತಾರೆ. ನ್ಯಾಯ ದೊರೆಯುತ್ತದೆ ಎಂದು ಜನ ಸಾಮಾನ್ಯರು ಬರುವುದರಿಂದ ನ್ಯಾಯವಾದಿಗಳ ಮೇಲೆ ಗುರುತರ ಜವಾಬ್ದಾರಿ ಇದ್ದೇ ಇರುತ್ತದೆ. ನ್ಯಾಯವಾದಿಗಳು ವೃತ್ತಿಯ ಮೌಲ್ಯಗಳ ಘನತೆ ಎತ್ತಿ ಹಿಡಿಯಬೇಕು ಎಂದು ತಿಳಿಸಿದರು.

ಈಚೆಗೆ ಮೌಲ್ಯಗಳು ಕುಸಿಯುತ್ತಿವೆ. ನಾವು ಓದುವಾಗ ಸಾಮಾಜಿಕ ಮೌಲ್ಯಗಳು, ಸಂಪ್ರದಾಯಗಳು ಬಹು ಅಮೂಲ್ಯವಾಗಿದ್ದವು. ಈಗ ಮೌಲ್ಯಗಳು ಕುಸಿಯುತ್ತಿರುವುದರಿಂದ ಸಮಾಜದಲ್ಲಿ ಅತೃಪ್ತಿ ಕಂಡು ಬರುತ್ತಿದೆ ಎಂದು ತಿಳಿಸಿದರು. ನ್ಯಾಯಾಧಿಧೀಶರ ಜೀವನ ಕಠಿಣ ಎಂಬುದು ಆಹುರೆಯಲ್ಲಿರುವವರಿಗೆ ಗೊತ್ತಿದೆ.

ನ್ಯಾಯಾಂಗ ವ್ಯವಸ್ಥೆಯಲ್ಲಿ ನ್ಯಾಯಮೂರ್ತಿಗಳು ಪಂಜರದೊಳಗಿನ ಗಿಳಿಗಳಿದ್ದಂತೆ. ಬಹಳ ಜಾಗರೂಕತೆ ಮತ್ತು ಎಚ್ಚರಿಕೆಯಿಂದಲೇ ಪ್ರತಿ ಹೆಜ್ಜೆ ಇಡಬೇಕಾಗುತ್ತದೆ. ವಕೀಲರಿಗೆ ಅಂತಹ ನಿರ್ಬಂಧ ಇರುವುದಿಲ್ಲ. ಸಾಕಷ್ಟು ಸ್ವಾತಂತ್ರ್ಯಾ ಇರುವ ಹಿನ್ನೆಲೆಯಲ್ಲಿ ಕೆಲವಾರು ಸಾಹಸಗಳನ್ನೂ ಮಾಡಬಹುದು. 

Advertisement

ಆದರೂ, ನ್ಯಾಯಾಂಗ ವ್ಯವಸ್ಥೆಯಲ್ಲಿ ಇರುವುದರಿಂದ ಎಚ್ಚರಿಕೆಯಿಂದ ಇರಬೇಕಾಗುತ್ತದೆ ಎಂದರು. ನ್ಯಾಯಾಂಗ ವ್ಯವಸ್ಥೆಯಲ್ಲಿ ನ್ಯಾಯಾಧೀಶರರು ಮತ್ತು ನ್ಯಾಯವಾದಿಗಳು ಒಂದೇ ನಾಣ್ಯದ ಎರಡು ಮುಖ. ಜೊತೆಯಾಗಿರಬೇಕೇ ಹೊರತು ಯಾವ ಕಾರಣಕ್ಕೂ ಎಲ್ಲಿಯೂ ಶಾಮೀಲಾಗಬಾರದು. ವಕೀಲರು ತಮ್ಮ ಸಾಮರ್ಥ್ಯ, ಕೌಶಲ್ಯದ ಕಾರಣದಿಂದ ಗುರುತಿಸಿಕೊಳ್ಳಬೇಕೇ ಹೊರತು ನ್ಯಾಯಾಧೀಶರ ಜೊತೆ ವೈಯಕ್ತಿಕವಾಗಿ ಗುರುತಿಸಿಕೊಳ್ಳಬಾರದು.

ನ್ಯಾಯಾಧೀಶರನ್ನು ದೇವರಂತೆ ಕಾಣಲು ನಾನು ಹೇಳುವುದಿಲ್ಲ. ಆದರೆ, ಮನುಷ್ಯರಂತೆ ಕಾಣಿ. ಮನುಷ್ಯ ಮಾತ್ರರಿಂದ ತಪ್ಪು ಆಗಬಹುದು ಎಂದರು. ದಾವಣಗೆರೆ ಜಿಲ್ಲಾ ಆಡಳಿತಾತ್ಮಕ ನ್ಯಾಯಮೂರ್ತಿ ಕೆ. ಸೋಮಶೇಖರ್‌ ಮಾತನಾಡಿ, ಕಾನೂನು ವೃತ್ತಿಯಲ್ಲಿ ನೈತಿಕತೆಗೆ ಗಮನ ನೀಡಿದಾಗ ಮಹಾನತೆ ಬರುತ್ತದೆ. ವಕೀಲಿ ವೃತ್ತಿಯಲ್ಲಿ ಶ್ರದ್ಧೆ, ಶಿಸ್ತು, ನಿಷ್ಠೆ ಮೂರು ಮೂಲ ಮಂತ್ರ. ಬಾರ್‌(ವಕೀಲರ ಸಂಘ) ಹಾಗೂ ಬೆಂಚ್‌(ನ್ಯಾಯಾಲಯದಲ್ಲಿ) ಮೂಲ ಮಂತ್ರಗಳೊಂದಿಗೆ ವೃತ್ತಿ ಜೀವನದಲ್ಲಿ ಯಶ ಕಾಣಬೇಕು ಎಂದು ಸಲಹೆ ನೀಡಿದರು. 

ದೇಶದಲ್ಲಿ ಎಲ್ಲಾ ರಾಜ್ಯ ವೈವಿಧ್ಯಮಯವಾಗಿವೆ. ಜನರು ವಿಭಿನ್ನವಾಗಿದ್ದಾರೆ. ಹಾಗಾಗಿ ಕಾನೂನು ಅಳವಡಿಕೆಯಲ್ಲಿ ವೈವಿಧ್ಯತೆ ಇರುವ ಕಾರಣಕ್ಕೆ ಸಮಸ್ಯೆಗಳು ಕಂಡು ಬರುತ್ತವೆ. ಆ ನಡುವೆಯೂ ನ್ಯಾಯವಾದಿಗಳು ಮತ್ತು ವಕೀಲರ ಮೇಲೆ ನ್ಯಾಯ ಒದಗಿಸುವ ಗುರುತರ ಜವಾಬ್ದಾರಿ ಇದೆ ಎಂದು
ತಿಳಿಸಿದರು.

ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ಎನ್‌.ಟಿ. ಮಂಜುನಾಥ್‌ ಅಧ್ಯಕ್ಷತೆ ವಹಿಸಿದ್ದರು. ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಕುಲಕರ್ಣಿ ಅಂಬಾದಾಸ್‌ ಜಿ, ಜಿಲ್ಲಾ ವಕೀಲರ ಸಂಘದ ಕಾರ್ಯದರ್ಶಿ ಬಿ.ಎಸ್‌. ಲಿಂಗರಾಜ್‌ ಇತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next