ನವದೆಹಲಿ: 1997ರಲ್ಲಿ 59 ಮಂದಿ ಸಾವಿಗೆ ಕಾರಣವಾಗಿದ್ದ ದೆಹಲಿಯ ಉಪಹಾರ್ ಚಿತ್ರಮಂದಿರದ ಅಗ್ನಿಅವಘಡ ಪ್ರಕರಣಕ್ಕೆ ಸಂಬಂಧಿಸಿದ ಸಾಕ್ಷ್ಯಗಳನ್ನು ತಿರುಚಿದ್ದ ಆರೋಪದಡಿ ಉದ್ಯಮಿ ಸುಶೀಲ್ ಅನ್ಸಾಲ್ ಮತ್ತು ಗೋಪಾಲ್ ಅನ್ಸಾಲ್ ಗೆ ಏಳು ವರ್ಷ ಜೈಲುಶಿಕ್ಷೆ ವಿಧಿಸಿದೆ.
ಇದನ್ನೂ ಓದಿ:ವೈದಿಕ ವಿಧಿಗಳೊಂದಿಗೆ ಪುನೀತ್ ಗೆ ಕಾವೇರಿ ನದಿಯಲ್ಲಿ ತರ್ಪಣ ಬಿಟ್ಟ ವಿನೋದ್ ರಾಜ್
ಆಸ್ತಿ ವ್ಯವಹಾರ ನಡೆಸುತ್ತಿದ್ದ ಅನ್ಸಾಲ್ ಸಹೋದರರಿಗೆ ದೆಹಲಿಯ ಪಟಿಯಾಲಾ ಹೌಸ್ ಕೋರ್ಟ್ ತಲಾ 2.25 ಕೋಟಿ ರೂಪಾಯಿ ಬೃಹತ್ ಮೊತ್ತದ ದಂಡ ವಿಧಿಸಿದೆ. ಸಾಕ್ಷ್ಯಗಳನ್ನು ತಿರುಚಿದ್ದ ಆರೋಪದಲ್ಲಿ ಇಬ್ಬರೂ ದೋಷಿ ಎಂದು ಕೋರ್ಟ್ ಆದೇಶ ನೀಡಿದ್ದು, ಇಂದು ಜೈಲುಶಿಕ್ಷೆಯ ಪ್ರಮಾಣವನ್ನು ಘೋಷಿಸಿದೆ.
ಇದಕ್ಕೂ ಮೊದಲು ಸುಪ್ರೀಂಕೋರ್ಟ್ ಅನ್ಸಾಲ್ ಸಹೋದರರಿಗೆ ಎರಡು ವರ್ಷ ಜೈಲುಶಿಕ್ಷೆ ವಿಧಿಸಿತ್ತು. ನಂತರ ತಲಾ 30 ಕೋಟಿ ರೂಪಾಯಿ ದಂಡ ವಿಧಿಸಿ, ಬಿಡುಗಡೆ ಮಾಡಿತ್ತು. ಪ್ರಕರಣದ ವಿಚಾರಣೆಯ ಸಂದರ್ಭದಲ್ಲಿ ಇಬ್ಬರು ಆರೋಪಿಗಳಾದ ಹರ್ ಸ್ವರೂಪ್ ಪನ್ವಾರ್ ಮತ್ತು ಧರ್ಮವೀರ್ ಮಲ್ಲೋತ್ರಾ ಸಾವನ್ನಪ್ಪಿದ್ದರು.
1997ರಲ್ಲಿ ಉಪಹಾರ್ ಚಿತ್ರಮಂದಿರದಲ್ಲಿ ಬಾರ್ಡರ್ ಸಿನಿಮಾ ಪ್ರದರ್ಶನವಾಗುತ್ತಿದ್ದ ಸಂದರ್ಭದಲ್ಲಿ ಬೆಂಕಿ ಅವಘಡ ಸಂಭವಿಸಿತ್ತು. ಅಗ್ನಿ ಸುರಕ್ಷತಾ ಕ್ರಮ ಥಿಯೇಟರ್ ನಲ್ಲಿ ಸಮರ್ಪಕವಾಗಿರಲಿಲ್ಲವಾಗಿತ್ತು. ಇದರ ಪರಿಣಾಮ ಉಸಿರುಗಟ್ಟಿ 59 ಪ್ರೇಕ್ಷಕರು ಸಾವನ್ನಪ್ಪಿದ್ದರು. ಕಾಲ್ತುಳಿತದಲ್ಲಿ 100ಕ್ಕೂ ಅಧಿಕ ಮಂದಿ ಗಾಯಗೊಂಡಿದ್ದರು.