ಧಾರವಾಡ: ರಾಜ್ಯದ ಎಲ್ಲ ಹಳ್ಳಿಗಳಿಗೆ ಪರಿಣಿತ ಹಾಗೂ ಸುಧಾರಿತ ಪಶು ವೈದ್ಯಕೀಯ ಸೇವೆ ವಿಸ್ತರಿಸಲು ಹಂತ ಹಂತವಾಗಿ 1512 ಪ್ರಾಥಮಿಕ ಪಶು ಚಿಕಿತ್ಸಾ ಕೇಂದ್ರಗಳನ್ನು ಮೇಲ್ದರ್ಜೆಗೇರಿಸಲಾಗುವುದು ಎಂದು ಪಶು ಸಂಗೋಪನೆ ಸಚಿವ ಎ. ಮಂಜು ಹೇಳಿದರು. ನಗರದಲ್ಲಿ ರವಿವಾರ ಸುದ್ದಿಗಾರರೊಂದಿಗೆ ಮಾತನಾಡಿದರು.
ಪ್ರಸ್ತುತ 302 ಕೇಂದ್ರಗಳನ್ನು ಮೇಲ್ದರ್ಜೆಗೇರಿಸಲಾಗುತ್ತಿದೆ. ಹಾಸನದ ಕೋರಮಂಗಲ, ಚಾಮರಾಜನಗರದ ಬರ್ಗಿ ಮತ್ತು ಯಾದಗಿರಿಯಲ್ಲಿ 3 ಕೋಟಿ ರೂ. ವೆಚ್ಚದಲ್ಲಿ ಹೊಸ ಪಶು ವೈದ್ಯಕೀಯ ಡಿಪ್ಲೊಮಾ ಕಾಲೇಜು ಸ್ಥಾಪನೆಗೆ ಸರ್ಕಾರ ಉದ್ದೇಶಿಸಿದೆ ಎಂದರು.
2017-18ನೇ ಸಾಲಿನಲ್ಲಿ 24 ರಾಜ್ಯ ವಲಯ, 6 ಕೇಂದ್ರ ಪುರಸ್ಕೃತ, 6ಜಿಲ್ಲಾ ವಲಯ ಹಾಗೂ 3 ತಾಪಂ ಯೋಜನೆಗಳು ಸೇರಿ 39 ಕಾರ್ಯಕ್ರಮಗಳಿಗೆ 2245 ಕೋಟಿ ಅನುದಾನ ಒದಗಿಸಲಾಗಿದೆ. ಪಶು ವೈದ್ಯಾಧಿಕಾರಿಗಳ ವೃಂದದಲ್ಲಿ 2593 ಹುದ್ದೆಗಳು ಮಂಜೂರಾಗಿದ್ದು, 1898 ಹುದ್ದೆಗಳು ಭರ್ತಿಯಾಗಿವೆ. 695 ಹುದ್ದೆಗಳು ಖಾಲಿ ಇವೆ.
ಹೈದ್ರಾಬಾದ್ ಕರ್ನಾಟಕ ಪ್ರದೇಶದ ಸ್ಥಳೀಯ ವೃಂದದ 110 ಹುದ್ದೆಗಳನ್ನು ನೇರವಾಗಿ ಇಲಾಖೆಯಿಂದ ಭರ್ತಿ ಮಾಡಲು ಕ್ರಮ ಕೈಗೊಳ್ಳಲಾಗಿದೆ ಎಂದರು. ಮನೆ ಬಾಗಿಲಿಗೆ ಪಶು ವೈದ್ಯ ಸೇವೆ ಒದಗಿಸಲು ತಾಲೂಕು ಮಟ್ಟದ 176 ಸಂಚಾರಿ ಪಶು ಚಿಕಿತ್ಸಾಲಯ ಸೇವೆಯನ್ನು ಹೋಬಳಿ ಮಟ್ಟಕ್ಕೆ ವಿಸ್ತರಿಸಲು ಆರ್‌ಕೆವಿವೈ ಅಡಿ 45 ಆಂಬ್ಯುಲೆನ್ಸ್‌ಗಳನ್ನು ಒದಗಿಸಲಾಗಿದೆ. ಹೊರಗುತ್ತಿಗೆ ಆಧಾರದಲ್ಲಿ ಕೇಂದ್ರ ಪುರಸ್ಕೃತ ಯೋಜನೆಯಡಿ 50 ವಾಹನಗಳನ್ನು ಹೋಬಳಿ ಮಟ್ಟದಲ್ಲಿ ಒದಗಿಸಿದ್ದು, ರಾಜ್ಯದ ಎಲ್ಲ ಹೋಬಳಿಗಳಿಗೂ ಸೌಲಭ್ಯ ವಿಸ್ತರಿಸಲಾಗುವುದು ಎಂದರು.
ಕುರಿ ಇದ್ದಲ್ಲಿಗೆ ಆಂಬ್ಯುಲೆನ್ಸ್: ಕುರಿಗಾರರ ಸಂಕಷ್ಟ ನಿವಾರಣೆಗೆ 18 ಆಂಬ್ಯುಲೆನ್ಸ್ ಒದಗಿಸಿದ್ದು, ಕುರಿಗಾರರು ಇದ್ದಲ್ಲೇ ಹೋಗಿ ಕುರಿ, ಮೇಕೆಗಳಿಗೆ ಚಿಕಿತ್ಸೆ ಒದಗಿಸಲಿವೆ. ಲಸಿಕೆ ಉತ್ಪಾದನೆಯಲ್ಲಿ ರಾಜ್ಯ ಸ್ವಾವಲಂಬನೆ ಹೊಂದಿದೆ. ಲಸಿಕೆ ಕಾರ್ಯಕ್ರಮಕ್ಕೆ 2017-18ರಲ್ಲಿ 43.45 ಕೋಟಿ ಅನುದಾನ ನಿಗದಿ ಮಾಡಲಾಗಿದೆ.
12ನೇ ಸುತ್ತಿನ ಲಸಿಕಾ ಕಾರ್ಯಕ್ರಮ ಯಶಸ್ವಿಯಾಗಿದ್ದು 105.46 ಲಕ್ಷ ಜಾನುವಾರುಗಳಿಗೆ ಲಸಿಕೆ ಹಾಕಲಾಗಿದೆ. 13ನೇ ಸುತ್ತಿನ ಲಸಿಕಾ ಕಾರ್ಯಕ್ರಮ ಅಕ್ಟೋಬರ್‌ಲ್ಲಿ ಆರಂಭವಾಗಲಿದೆ ಎಂದರು. ಹಾಲು ಉತ್ಪಾದಕರಿಗೆ ಪ್ರೋತ್ಸಾಹಧನ ನೇರವಾಗಿ ಬ್ಯಾಂಕ್ ಖಾತೆಗೆ ಜಮಾ ಮಾಡಲಾಗುತ್ತಿದೆ.
ರಾಜ್ಯದ ಪ್ರಾಣಿ ಕಲ್ಯಾಣ ಸಂಸ್ಥೆ ಹಾಗೂ ಪ್ರಾಣಿದಯಾ ಸಂಘದ ಜಿಲ್ಲಾ ಘಟಕಗಳಿಗೆ ನೆರವು ಸೇರಿದಂತೆ ಪಾಂಜಾರಪೋಳ ಮತ್ತು ಇತರೆ ಖಾಸಗಿ ಗೋ ಶಾಲೆಗಳಲ್ಲಿರುವ ಪ್ರಾಣಿಗಳ ನಿರ್ವಹಣೆಗಾಗಿ 5.25 ಕೋಟಿ ರೂ.ಗಳನ್ನು 43 ಗೋಶಾಲೆಗಳಿಗೆ ವಿತರಿಸಲಾಗಿದೆ ಎಂದು ವಿವರಿಸಿದರು.