ಬೆಂಗಳೂರು: ರಿಯಲ್ ಸ್ಟಾರ್ ಉಪೇಂದ್ರ ಬಹು ಸಮಯದ ಬಳಿಕ ಡೈರೆಕ್ಟರ್ ಕ್ಯಾಪ್ ತೊಟ್ಟು ಆ್ಯಕ್ಷನ್ ಕಟ್ ಹೇಳಿರುವ ʼUI’ ಚಿತ್ರದ ಮೇಲೆ ದೊಡ್ಡ ಮಟ್ಟದ ನಿರೀಕ್ಷೆಯಿದೆ. ಈಗಾಗಲೇ ಚಿತ್ರೀಕರಣ ಮುಗಿದಿದ್ದು ರಿಲೀಸ್ ಡೇಟ್ ನ್ನು ಪೇಕ್ಷಕರು ಎದುರು ನೋಡುತ್ತಿದ್ದಾರೆ.
ಉಪೇಂದ್ರ ಅಂದಮೇಲೆ ಅಲ್ಲಿ ಏನೋ ಒಂದು ವಿಭಿನ್ನತೆ ಇದ್ದೇ ಇರುತ್ತದೆ. ಸಿನಿಮಾದ ಟೈಟಲ್ ನಲ್ಲೇ ತಲೆಗೆ ಹುಳು ಬಿಟ್ಟಿರುವ ಉಪ್ಪಿ ಈಗ ಫಸ್ಟ್ ಲುಕ್ ವಿಚಾರದಲ್ಲೂ ತಲೆಗೆ ಹುಳು ಬಿಟ್ಟಿದ್ದಾರೆ. ಆ ಮೂಲಕ ಸಿನಿಮಾದ ಕುತೂಹಲವನ್ನು ಹೆಚ್ಚಿಸಿದ್ದಾರೆ.
ಭಾನುವಾರ(ಆ.27 ರಂದು) ‘UI’ ಸಿನಿಮಾದ ಫಸ್ಟ್ ಲುಕ್ ಕುರಿತ ಅಪ್ಡೇಟ್ ವೊಂದನ್ನು ನೀಡುವುದೆಂದು ಉಪ್ಪಿ ಸೋಶಿಯಲ್ ಮೀಡಿಯಾದಲ್ಲಿ ಬರೆದುಕೊಂಡಿದ್ದರು. ಅದರಂತೆ ಸೋಮವಾರ(ಆ.28 ರಂದು) ಆ ಕುರಿತ ಒಂದು ಅಪ್ಡೇಟ್ ನೀಡಿದ್ದಾರೆ.
ಈ ಕುರಿತು ಒಂದು ವಿಡಿಯೋವನ್ನು ರಿಲೀಸ್ ಮಾಡಿದ್ದಾರೆ. ಇದರಲ್ಲಿ ನಿರ್ಮಾಪಕರಾದ ಕೆ. ಪಿ ಶ್ರೀಕಾಂತ್ ಹಾಗೂ ಜಿ. ಮನೋಹರನ್ ಅವರು ಉಪ್ಪಿ ಅವರ ನಿವಾಸಕ್ಕೆ ತೆರಳಿ “ಸಿನಿಮಾ ಶುರುವಾಗಿ ಒಂದೂವರೆ ವರ್ಷ ಆಯಿತು, ಇದುವರೆಗೆ ಒಂದು ತುಣುಕು ಕೂಡ ಬಿಟ್ಟಿಲ್ಲ. ಜನ ಎಲ್ಲಾ ಬೈಯುತ್ತಿದ್ದಾರೆ ಸರ್” ಎಂದು ಕೆಪಿ ಶ್ರೀಕಾಂತ್ ಹೇಳಿದ್ದಾರೆ. ಇದಕ್ಕೆ ಉಪ್ಪಿ “ಫಸ್ಟ್ ಲುಕ್ ಟೀಸರ್ ಬಿಡಲೇಬೇಕಾ? ನೇರವಾಗಿ ರಿಲೀಸ್ ಡೇಟ್ ಅನೌನ್ಸ್ ಮಾಡಿಬಿಡೋಣ” ಎಂದಿದ್ದಾರೆ.
“ಇಷ್ಟು ವರ್ಷ ಆದ್ಮೇಲೆ ನೀವು ಡೈರೆಕ್ಷನ್ ಮಾಡ್ತಾ ಇದ್ದೀರಿ, ನಿಮ್ಮ ಫ್ಯಾನ್ಸ್ ಎಲ್ಲಾ ಕಾಯ್ತಾ ಇದ್ದಾರೆ. ಒಂದು ಟೀಸರ್ ಕಟ್ ಮಾಡಿ ಹೈಪ್ ಕ್ರಿಯೇಟ್ ಮಾಡೋಣ” ಎಂದು ನಿರ್ಮಾಪಕರು ಉಪ್ಪಿ ಬಳಿ ಹೇಳಿದ್ದಾರೆ ಆದರೆ ಉಪ್ಪಿ ಇದಕ್ಕೆ ತಮ್ಮದೇ ಸ್ಟೈಲ್ ರಿಪ್ಲೈ ಕೊಟ್ಟಿದ್ದಾರೆ.
ಹೈಪ್ ಆಗೋದಾ? ಮಾಡೋದಾ? ಎಷ್ಟು ಮಿಲಿಯನ್ ವೀವ್ಸ್ ಆಗಿದೆ ಅಂಥ ತೋರಿಸೋದಲ್ವಾ ಹೈಪ್? ಒಂದು ನಿಮಿಷದಲ್ಲಿ ನಮ್ಮ ಸಿನಿಮಾ ಯಾವ ರೇಂಜಿಗಿದೆ ಅಂತ ತೋರಿಸುವಂತೆ ಇದ್ದರೆ 2 ಗಂಟೆ ಸಿನಿಮಾ ನಾನ್ಯಾಕೆ ಮಾಡಬೇಕು ಎಂದು ಉಪ್ಪಿ ನಿರ್ಮಾಪಕರಿಗೆ ಹೇಳಿದ್ದಾರೆ.
ಸಿನಿಮಾ ರಿಲೀಸ್‌ಗೂ ಮುನ್ನ ಒಂದು ದೊಡ್ಡ ಹೈಪ್ ತರಬೇಕು ಸರ್ ಎಂದ ನಿರ್ಮಾಪಕರ ಮಾತಿಗೆ ಉಪ್ಪಿ “ಸುಳ್ಳಿಗೆ ಹೈಪ್ ತರಬೇಕು, ಸತ್ಯಕ್ಕೆ ತಾನಾಗಿಯೇ ಹೈಪ್ ಸಿಗುತ್ತೆ” ಎಂದು ಹೇಳಿದ್ದಾರೆ.
ನಿರ್ಮಾಪಕರು ಹಾಗೂ ನಿರ್ದೇಶಕರ ನಡುವಿನ ಈ ಮಾತುಕತೆಯ ಮುಂದುವರೆಯಲಿದೆ.
ಸೆ.18 ರಂದು ಉಪೇಂದ್ರ ಅವರ ಹುಟ್ಟುಹಬ್ಬವಿದ್ದು ಆ ದಿನ ಸಿನಿಮಾದ ಫಸ್ಟ್ ಲುಕ್ ಅಥವಾ ಟೀಸರ್ ರಿಲೀಸ್ ಆಗುವ ಸಾಧ್ಯತೆಯಿದೆ.
ಸಿನಿಮಾದಲ್ಲಿ ರೀಷ್ಮಾ ನಾಣಯ್ಯ ನಾಯಕಿಯಾಗಿ ಕಾಣಿಸಿಕೊಳ್ಳಲಿದ್ದು,ನಿಧಿ ಸುಬ್ಬಯ್ಯ, ಇಂದ್ರಜಿತ್ ಲಂಕೇಶ್ ಹಾಗೂ ಪ್ರಶಾಂತ್ ಸಂಬರಗಿ ಮುಂತಾದವರು ನಟಿಸಿದ್ದಾರೆ.