ಹೊಸದಿಲ್ಲಿ: ವಿಶ್ವಾದ್ಯಂತ ಡೊಮೇನ್ ನೇಮ್‌ಗಳನ್ನು ಹಂಚುವ ಹಾಗೂ ಇಂಟರ್‌ನೆಟ್ ಡೊಮೇನ್‌ಗಳನ್ನು ನಿಯಂತ್ರಿಸುವ ಐಸಿಎಎನ್‌ಎನ್ ತನ್ನ ಸರ್ವರ್‌ಗಳನ್ನು ಅಪ್‌ಡೇಟ್ ಮಾಡಲು ನಿರ್ಧರಿಸಿದ್ದು, ಇದರಿಂದಾಗಿ ಜಗತ್ತಿನಾದ್ಯಂತ ಇಂಟರ್‌ನೆಟ್ ವೇಗ ಶನಿವಾರದವರೆಗೆ ಸ್ವಲ್ಪಮಟ್ಟಿಗೆ ಕುಂಠಿತಗೊಳ್ಳಲಿದೆ ಎಂದು ಹೇಳಲಾಗಿದೆ. ಆದರೆ, ಇಂಟರ್‌ನೆಟ್ ಸ್ಥಗಿತದ ಸಮಸ್ಯೆ ಕೆಲವರಿಗೆ ಮಾತ್ರ ಬಾಧಿಸುತ್ತದೆ. ಶೇ.99ಕ್ಕೂ ಹೆಚ್ಚು ಇಂಟರ್‌ನೆಟ್ ಬಳಕೆದಾರರಿಗೆ ಈ ನವೀಕರಣದಿಂದ ತೊಂದರೆಯಾಗದು ಎಂದು ಐಸಿಎಎನ್‌ಎನ್ ಹೇಳಿದೆ. ಡೊಮೇನ್ ನೇಮ್ ರಕ್ಷಣೆಗಾಗಿ ಕ್ರಿಪ್ಟೋಗ್ರಾಫಿಕ್ ಕೀ ಅಗತ್ಯವಿದ್ದು, ಅದನ್ನು ಅಳವಡಿಸಲು ಈ ಅಪ್‌ಡೇಟ್ ಮಾಡಲಾಗುತ್ತಿದೆ. ಸೈಬರ್ ದಾಳಿ ಹೆಚ್ಚುತ್ತಿರುವ ಹಿನ್ನೆಲೆ ಕ್ರಿಪ್ಟೋಗ್ರಾಫಿಕ್ ಕೀಯನ್ನು ಡೊಮೇನ್ ನೇಮ್‌ಗೆ ಅಳವಡಿಸುವ ಅಗತ್ಯವಿದೆ ಎಂದು ಐಸಿಎಎನ್‌ಎನ್ ಹೇಳಿದೆ. ಈ ಬದಲಾವಣೆಗೆ ಮುಂಚಿತವಾಗಿ ತಯಾರಾಗಿಲ್ಲದ ನೆಟ್‌ವರ್ಕ್ ಆಪರೇಟರ್‌ಗಳಿಗೆ ಸಮಸ್ಯೆ ಉಂಟಾಗಲಿದೆ. ಅಂದರೆ ಅಪ್‌ಡೇಟ್ ವೇಳೆಯೂ ಹಳೆಯ ವ್ಯವಸ್ಥೆಯಲ್ಲೂ ಕಾರ್ಯನಿರ್ವಹಿಸುತ್ತಿದ್ದಲ್ಲಿ, ಅಂತಹ ನೆಟ್‌ವರ್ಕ್ ಆಪರೇಟರ್‌ಗಳ ಗ್ರಾಹಕರಿಗೆ ಮಾತ್ರ ಈ ಸಮಸ್ಯೆ ಉಂಟಾಗಬಹುದು.