ಪ್ರತಿವರ್ಷ ಚಿತ್ರರಂಗಕ್ಕೆ ನಿರ್ದೇಶಕರಾಗಿ ನೂರಾರು ಸಂಖ್ಯೆಯಲ್ಲಿ ಹೊಸ ಪ್ರತಿಭೆಗಳು ಕಾಲಿಡುತ್ತಲೇ ಇರುತ್ತಾರೆ. ಅದರಲ್ಲೂ ತಮ್ಮ ಚೊಚ್ಚಲ ಚಿತ್ರ ಎನ್ನುವುದು ಈ ಎಲ್ಲ ನಿರ್ದೇಶಕರ ಪಾಲಿಗೆ ತುಂಬ ಮಹತ್ವದ್ದಾಗಿರುತ್ತದೆ. ತಮ್ಮ ಮೊದಲ ಚಿತ್ರ ಹೇಗಿದೆ ಎನ್ನುವುದರ ಮೇಲೆ ಚಿತ್ರರಂಗದಲ್ಲಿ ಯುವ ನಿರ್ದೇಶಕರ ಭವಿಷ್ಯ ನಿರ್ಧಾರವಾಗುವುದರಿಂದ, ಎಲ್ಲ ಹೊಸ ನಿರ್ದೇಶಕರು ಹೇಗಾದರೂ ಮಾಡಿ ಗೆಲ್ಲಲೇ ಬೇಕು ಎಂಬ ಪಣ ತೊಟ್ಟಿರುತ್ತಾರೆ. ಹತ್ತಾರು ವರ್ಷಗಳ ತಮ್ಮ ಪ್ರತಿಭೆ, ಪರಿಶ್ರಮವನ್ನು ಇನ್ನೇನು ತಮ್ಮ ಸಿನಿಮಾದ ಮೂಲಕ ಜಗತ್ತಿಗೆ ತೋರಿಸಬೇಕು ಎಂಬ ಅದೆಷ್ಟೋ ನವ ನಿರ್ದೇಶಕರ ಕನಸಿಗೆ ಈಗ ಕೊರೊನಾ ಎರಡನೇ ಅಲೆಯ ಕರಿಛಾಯೆ ಆವರಿಸಿದೆ. ಚಿತ್ರರಂಗವನ್ನೇ ನಂಬಿಕೊಂಡು ಅದೃಷ್ಟ ಪರೀಕ್ಷೆಗೆ ಇಳಿದಿರುವ ಈ ಚೊಚ್ಚಲ ನಿರ್ದೇಶಕರ ತಳಮಳ, ಕಳವಳ, ಕಸಿವಿಸಿ ಎಲ್ಲವನ್ನೂ ಈ ಸಂದರ್ಭದಲ್ಲಿ ಕಟ್ಟಿಕೊಡುವ ಪುಟ್ಟ ಪ್ರಯತ್ನ ಇಲ್ಲಿದೆ.
ಇಲ್ಲಿ ಕೆಲವೇ ಕೆಲವು ನಿರ್ದೇಶಕರು ತಮ್ಮ ಮನಸ್ಸಿನ ಮಾತು, ಆತಂಕವನ್ನು ಹಂಚಿಕೊಂಡಿ ದ್ದಾರೆ. ಆದರೆ, ಇದು ಕೇವಲ ಇವರದ್ದಷ್ಟೇ ಮಾತಲ್ಲ, ಎಲ್ಲಾ ಹೊಸ ನಿರ್ದೇಶಕರ ಅಂತರಂಗದ ಪ್ರತಿಧ್ವನಿಯನ್ನು ಪ್ರತಿನಿಧಿಸುತ್ತದೆ.
ನಾನು ಇಂಜಿನಿಯರಿಂಗ್ ಹಿನ್ನೆಲೆಯವನಾದ್ರೂ ಸಿನಿಮಾ ಮೇಲಿನ ಆಸಕ್ತಿಯಿಂದ ಇಲ್ಲಿಗೆ ಬಂದಿದ್ದೇನೆ. 6 ವರ್ಷಗಳ ಅನುಭವದ ನಂತರ ಈಗ ಸ್ವತಂತ್ರ ನಿರ್ದೇಶಕನಾಗುತ್ತಿದ್ದೇನೆ. ಒಳ್ಳೆಯ ಸ್ಕ್ರಿಪ್ಟ್ ಇದ್ದರೂ, ಕೋವಿಡ್ ಎಫೆಕ್ಟ್ನಿಂದಾಗಿ ನಿರ್ಮಾಪಕರು ಸಿನಿಮಾ ಮಾಡಲು ಹಿಂದೇಟು ಹಾಕಿದ್ದರಿಂದ, ಕೊನೆಗೆ ನಾನೇ ಕಡಿಮೆ ಬಜೆಟ್‌ನಲ್ಲಿ ನಿರ್ದೇಶನದ ಜೊತೆಗೆ ನಿರ್ಮಾಣಕ್ಕೂ ಮುಂದಾದೆ. ಅದರಂತೆ ಸಿನಿಮಾ ಮಾಡಿ ಮುಗಿಸಿದ್ದೇನೆ. ಸದ್ಯ ನಮ್ಮ ಸಿನಿಮಾ ಸೆನ್ಸಾರ್ ಕೂಡ ಆಗಿದ್ದು, ಇದೇ ಮೇ ಕೊನೆಗೆ ಸಿನಿಮಾ ರಿಲೀಸ್ ಮಾಡಲು ಪ್ಲಾನ್ ಮಾಡಿಕೊಂಡಿದ್ದೆವು. ಆದ್ರೆ ಈಗ ಲಾಕ್‌ಡೌನ್‌ನಿಂದ ಥಿಯೇಟರ್‌ಗಳು ಮುಚ್ಚಿದ್ದರಿಂದ, ಸಿನಿಮಾ ರಿಲೀಸ್ ಮಾಡಲು ಆಗುತ್ತಿಲ್ಲ. ಥಿಯೇಟರ್ ಯಾವಾಗ ಓಪನ್ ಆಗುತ್ತದೆ ಅಂತಾನೇ ಸರಿಯಾಗಿ ಗೊತ್ತಿಲ್ಲ. ಥಿಯೇಟರ್ ಓಪನ್ ಆದ್ರೂ, ದೊಡ್ಡ ಬಜೆಟ್, ಬಿಗ್ ಸ್ಟಾರ್ ಸಿನಿಮಾಗಳಿಗೆ ಮೊದಲ ಆದ್ಯತೆ ಇರುತ್ತದೆ. ಹಿಂದಿನಂತೆ ಜನ ಬರುತ್ತಾರಾ? ಅಂಥ ಗೊತ್ತಿಲ್ಲ. ಓಟಿಟಿ ಯಲ್ಲೂ ಹೊಸಬರ ಸಿನಿಮಾಗಳನ್ನ ಹೆಚ್ಚಾಗಿ ತೆಗೆದುಕೊಳ್ಳುತ್ತಿಲ್ಲ. ಮತ್ತೆ ಹೇಗೆ ಸಿನಿಮಾ ರಿಲೀಸ್ ಮಾಡೋದು ಅಂಥ ಗೊತ್ತಿಲ್ಲ. ನಿರ್ದೇಶನದ ಜೊತೆ ನಿರ್ಮಾಣ ಮಾಡಿದ್ದು ನನಗೆ ಹೊರೆಯಾಗುತ್ತಿದೆ. ನನಗಂತೂ ಮುಂದೆ ದಾರಿ ಏನು? ಏನು ಮಾಡ್ಬೇಕು ಅಂತಾನೇ ಗೊತ್ತಾಗುತ್ತಿಲ್ಲ.
-ಪವನ್, “ಫ್ಯಾಂಟಸಿ’ ಚಿತ್ರದ ನಿರ್ಮಾಪಕ ಮತ್ತು ನಿರ್ದೇಶಕ
ನಾನು ಸಿನಿಮಾನ್ನೇ ನಂಬಿಕೊಂಡು ಬಂದವನು. ಸಿನಿಮಾವನ್ನೇ ನಂಬಿಕೊಂಡು ಬದುಕುತ್ತಿರುವವನು. ನನಗೆ ಸಿನಿಮಾ ಬಿಟ್ಟು ಬೇರೇನೂ ಗೊತ್ತಿಲ್ಲ. ಹಾಗಾಗಿ ಏನೇ ಆದರೂ ಸಿನಿಮಾರಂಗದಲ್ಲೇ ಇರಬೇಕು. ಕೋವಿಡ್ ನಂತರದ ಪರಿಸ್ಥಿತಿಯಲ್ಲಿ ಸಿನಿಮಾ ಇಂಡಸ್ಟ್ರಿ ಏನಾಗಬಹುದು, ಏನೇನು ಬದಲಾವಣೆಗಳಾಗಬಹುದು ಎಂಬ ಬಗ್ಗೆ ನನಗೂ ಭಯವಿದೆ. ಒಟ್ಟಿನಲ್ಲಿ ಏನೇ ಆದರೂ ಅದಕ್ಕೆ ಹೊಂದಿಕೊಂಡು ಇಲ್ಲೇ ಇರಬೇಕು. ಎಲ್ಲ ಅಂದುಕೊಂಡಂತೆ ಆಗಿದ್ದರೆ, ಇದೇ ಆಗಸ್ಟ್‌ಗೆ ನಮ್ಮ ಸಿನಿಮಾ ರಿಲೀಸ್ ಆಗಬೇಕಿತ್ತು. ಆದ್ರೆ, ಈಗ ಲಾಕ್‌ಡೌನ್‌ನಿಂದಾಗಿ ನಮ್ಮ ಸಿನಿಮಾದ ಕೆಲಸಗಳು ಅರ್ಧಕ್ಕೆ ನಿಂತಿದೆ. ಮತ್ತೆ ಯಾವಾಗ ಶುರುವಾಗುತ್ತದೆ ಅನ್ನೋದರ ಬಗ್ಗೆ ಸ್ಪಷ್ಟತೆಯಿಲ್ಲ. ಆದರೆ, ಎಲ್ಲವೂ ಸರಿಯಾಗುತ್ತದೆ ಎಂಬ ಆಶಾಭಾವನೆಯಲ್ಲಿ ನಾವಿದ್ದೇವೆ. ಇಂಥ ಪರಿಸ್ಥಿತಿಯಲ್ಲಿ ಸಿನಿಮಾಕ್ಕೆ ಬಂಡವಾಳ ಹೂಡಿದ ನಿರ್ಮಾಪಕರಿಗೆ ಖಂಡಿತ ಹೊರೆಯಾಗುತ್ತದೆ. ಅವರಿಗೆ ಧೈರ್ಯ ತುಂಬಿ ಜೊತೆಗೆ ನಿಲ್ಲಬೇಕಾಗಿದೆ. ಸಿನಿಮಾ ಬಿಡುಗಡೆಯ ತಂತ್ರಗಳು, ಹೊಸ ಸಾಧ್ಯತೆಗಳ ಬಗ್ಗೆ ಗಂಭೀರವಾಗಿ ಯೋಚಿಸಿ, ಹೊಸ ಮಾರ್ಗವನ್ನು ಕಂಡುಕೊಳ್ಳಬೇಕಾಗಿದೆ. ಎಲ್ಲ ಕ್ರೇತ್ರಗಳಂತೆ, ಸಿನಿಮಾರಂಗಕ್ಕೂ ಇದೊಂದು ಹಿಂಜರಿತವಾಗಿದ್ದು, ವಾಸ್ತವ ಸ್ಥಿತಿಯನ್ನ ಅರ್ಥಮಾಡಿಕೊಂಡು ಭವಿಷ್ಯವನ್ನು ಎದುರಿಸಲು ಬೇಕಾದ ತಯಾರಿ ಮಾಡಿಕೊಳ್ಳಬೇಕು.
-ಭರತ್ ಜಿ, “ಸ್ಫೂಕಿ ಕಾಲೇಜ್’ ಚಿತ್ರದ ನಿರ್ದೇಶಕ
ನಮ್ಮದು ಕಂಟೆಂಟ್ ಬೇಸ್ ಆಗಿರುವ ಎಕ್ಸ್‌ಪಿರಿಮೆಂಟ್ ಸಿನಿಮಾ. ಸುಮಾರು ಎರಡು ವರ್ಷದ ಹಿಂದೆ ಶುರು ಮಾಡಿದ ಸಿನಿಮಾ ಇದು. ಇದರಲ್ಲಿ ಹೀರೋ ಅಥವಾ ಹೀರೋಯಿನ್ ಅಂತಿಲ್ಲ. ಅತಿ ಕಡಿಮೆ ಬಜೆಟ್‌ನಲ್ಲಿ ಎಲ್ಲೂ ಕ್ವಾಲಿಟಿಯಲ್ಲಿ ಕಾಂಪ್ರಮೈಸ್ ಆಗದೇ ಸಿನಿಮಾ ಮಾಡಬೇಕು ಅಂದುಕೊಂಡು ಈ ಸಿನಿಮಾ ಮಾಡಿದ್ದೇವೆ. ಕಳೆದ ವರ್ಷ ಲಾಕ್‌ಡೌನ್‌ನಿಂದ ಶೂಟಿಂಗ್ ತಡವಾಯ್ತು. ಹೇಗೋ ಕಷ್ಟಪಟ್ಟು ಸಿನಿಮಾ ಮುಗಿಸಿ, ಈ ವರ್ಷ ರಿಲೀಸ್ ಮಾಡಬೇಕು ಅನ್ನೋವಷ್ಟರಲ್ಲಿ ಮತ್ತೆ ಲಾಕ್‌ಡೌನ್ ಅನೌನ್ಸ್ ಆಗಿದೆ. ಅಂದುಕೊಂಡ ಸಮಯಕ್ಕೆ ಸಿನಿಮಾ ಶೂಟಿಂಗ್, ರಿಲೀಸ್ ಮಾಡಲಾಗದಿದ್ದರಿಂದ ಸಿನಿಮಾದ ಬಜೆಟ್ ನಾವು ಅಂದುಕೊಂಡಿದ್ದಕ್ಕಿಂತ ಹೆಚ್ಚಾಗುತ್ತಿದೆ. ಮತ್ತೆ ಥಿಯೇಟರ್‌ಗಳು ಯಾವಾಗ ಓಪನ್ ಆಗುತ್ತವೆ ಅನ್ನೋದರ ಬಗ್ಗೆ ಸ್ಪಷ್ಟತೆ ಇಲ್ಲ. ಓಟಿಟಿ ರಿಲೀಸ್ ಬಗ್ಗೆಯೂ ಗೊತ್ತಾಗುತ್ತಿಲ್ಲ. ಸಿನಿಮಾಕ್ಕೆ ಬಂಡವಾಳ ಹಾಕಿದ ನಿರ್ಮಾಪಕರು ಮುಂದೇನು ಮಾಡೋದು ಅನ್ನೋ ಚಿಂತೆಯಲ್ಲಿದ್ದಾರೆ. ಹೀಗೆ ಆದ್ರೆ ಏನು ಮಾಡೋದು ಅಂಥ ನಮಗೂ ಗೊತ್ತಾಗುತ್ತಿಲ್ಲ.
– ಪ್ರವೀಣ್, “ಎವಿಡೆನ್ಸ್’ ಚಿತ್ರದ ನಿರ್ದೇಶಕ
ಕಳೆದ ವರ್ಷ ಮೊದಲ ಹಂತದ ಲಾಕ್‌ಡೌನ್‌ನಲ್ಲಿ ನಮಗೆ ಅಷ್ಟಾಗಿ ತೊಂದರೆಯಾಗಿರಲಿಲ್ಲ. ನಮ್ಮ ಸಿನಿಮಾದ ಬಹುತೇಕ ಪೋಸ್ಟ್ ಪ್ರೊಡಕ್ಷನ್ ಕೆಲಸಗಳನ್ನು ಸ್ಟುಡಿಯೋದಲ್ಲೇ ಮುಗಿಸಿಕೊಂಡಿದ್ದೆವು. ಲಾಕ್‌ಡೌನ್ ಮುಗಿದು ಇಂಡಸ್ಟ್ರಿಯಲ್ಲಿ ಮತ್ತೆ ಚಟುವಟಿಕೆಗಳು ಆರಂಭವಾಗಿದ್ದರಿಂದ, ನಮ್ಮ ಸಿನಿಮಾದ ಆಡಿಯೋವನ್ನ ಇದೇ ಏಪ್ರಿಲ್‌ನಲ್ಲಿ ಮತ್ತು ಸಿನಿಮಾವನ್ನ ಮೇ ಅಥವಾ ಜೂನ್‌ನಲ್ಲಿ ರಿಲೀಸ್ ಮಾಡಲು ಪ್ಲಾನ್ ಮಾಡಿಕೊಂಡಿದ್ದೆವು. ಅದಕ್ಕಾಗಿ ಇದೇ ಮಾರ್ಚ್‌ನಿಂದಲೇ ತಯಾರಿ ಮಾಡಿಕೊಂಡಿದ್ದೆವು. ಪ್ರಮೋಶನ್ಸ್ ಕೂಡ ಶುರುವಾಗಿತ್ತು. ಆದ್ರೆ ಈಗ ಮತ್ತೆ ಸೆಕೆಂಡ್ ಲಾಕ್‌ಡೌನ್ ಅನೌನ್ಸ್ ಆಗಿದೆ. ಕೊರೊನಾ ಪರಿಸ್ಥಿತಿ ತುಂಬ ಗಂಭೀರವಾಗಿರುವುದರಿಂದ, ನಾವೂ ಕೂಡ ಏನು ಮಾಡುವಂತಿಲ್ಲ. ಥಿಯೇಟರ್‌ನಲ್ಲೇ ರಿಲೀಸ್ ಮಾಡಬೇಕು ಅನ್ನೋ ಉದ್ದೇಶದಿಂದ ನಮ್ಮ ಸಿನಿಮಾ ಮಾಡಿದ್ದೇವೆ. ಈಗಾಗಲೇ ನಮ್ಮ ಸಿನಿಮಾದ ಟೀಸರ್, ಸಾಂಗ್ಸ್ ಎಲ್ಲದಕ್ಕೂ ಬಿಗ್ ರೆಸ್ಪಾನ್ಸ್ ಸಿಕ್ಕಿದೆ. ಒಟಿಟಿ ಯಲ್ಲೂ ತುಂಬ ಆಫರ್ ಬರುತ್ತಿದೆ. ಕೊರೊನಾ ನಿಯಂತ್ರಣಕ್ಕೆ ಬಂದು ಯಾವಾಗ ಮತ್ತೆ ಥಿಯೇಟರ್‌ಗಳು ಓಪನ್ ಆಗುತ್ತವೆಯೋ ಗೊತ್ತಿಲ್ಲ. ಅನಿವಾರ್ಯವಾಗಿ ಥಿಯೇಟರ್ ಓಪನ್ ಆಗುವವರೆಗೂ ಕಾಯದೆ ಬೇರೆ ದಾರಿಯಿಲ್ಲ. ಹಾಗಂತ ನಮಗೇನೂ ಆತುರವಿಲ್ಲ. ನಾವು ಪ್ಯಾಷನ್‌ಗಾಗಿ ಸಿನಿಮಾ ಮಾಡಿದ್ದೇವೆ. ನಮ್ಮ ಸಿನಿಮಾದಲ್ಲಿ 12 ಹಾಡುಗಳಿದ್ದು, ಥಿಯೇಟರ್ ಓಪನ್ ಆಗುವವರೆಗೂ ಒಂದೊಂದೇ ಹಾಡು ರಿಲೀಸ್ ಮಾಡಿ, ಸೋಶಿಯಲ್ ಮೀಡಿಯಾ ಪ್ರಮೋಶನ್ ಮಾಡಲು ಯೋಚಿಸಿದ್ದೇವೆ. ಜನ ಮತ್ತೆ ಥಿಯೇಟರ್‌ಗೆ ಬಂದೇ ಬರುತ್ತಾರೆ ಎಂಬ ಆಶಾವಾದವಿದೆ.
-ಡಾ. ರಾಘವೇಂದ್ರ ಬಿ.ಎಸ್, “ಪ್ರೇಮಂ ಪೂಜ್ಯಂ’ ಚಿತ್ರದ ನಿರ್ದೇಶಕ
ಜಿ.ಎಸ್.ಕಾರ್ತಿಕಸುಧನ್